ಭಾರತೀಯ ಡ್ರೆಸ್ಸಿಂಗ್ ರೂಮ್‌ನಲ್ಲಿ ಒಬ್ಬೊಬ್ಬರಿಗೆ ಒಂದೊಂದು ನಿಯಮ: ಅಂಕಣದಲ್ಲಿ ಕಿಡಿಕಾರಿದ ಸುನಿಲ್ ಗವಾಸ್ಕರ್

ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಟೀಮ್ ಇಂಡಿಯಾದ ಡ್ರೆಸ್ಸಿಂಗ್ ರೂಮ್‌ನಲ್ಲಿನ ಅಸಮಾನತೆಯ ಬಗ್ಗೆ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಭಾರತೀಯ ತಂಡದಲ್ಲಿ ಭಿನ್ನ ವ್ಯಕ್ತಿಗಳಿಗೆ ಭಿನ್ನವಾದ ನಿಯಮಗಳು ಇದೆ ಎಂದು ಗವಾಸ್ಕರ್ ನೇರವಾಗಿಯೇ ತಮ್ಮ ಅಂಕಣದಲ್ಲಿ ಕಿಡಿಕಾರಿದ್ದಾರೆ.
ಇಬ್ಬರು ಆಟಗಾರರ ವಿಭಿನ್ನವಾದ ವಿಚಾರಗಳನ್ನು ಬೊಟ್ಟು ಮಾಡಿ ಸುನಿಲ್ ಗವಾಸ್ಕರ್ ತಂಡದೊಳಗಿನ ಅಸಮಾನತೆಯ ಬಗ್ಗೆ ಹೇಳಿಕೊಂಡಿದ್ದಾರೆ. ತಮ್ಮ ಸುದೀರ್ಘ ಅಂಕಣದಲ್ಲಿ ಗವಾಸ್ಕರ್ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದರಾದರೂ ತಂಡದಲ್ಲಿರುವ ಅಸಮಾನತೆಯ ಬಗ್ಗೆ ಗವಾಸ್ಕರ್ ಮಾತು ಗಂಭೀರವಾಗಿ ಧ್ವನಿಸುತ್ತಿದೆ. ಮೊದಲಿಗೆ ತಂಡದ ಅನುಭವಿ ಆಟಗಾರ ಆರ್ ಅಶ್ವಿನ್ ಬಗ್ಗೆ ತಂಡದ ಮ್ಯಾನೇಜ್‌ಮೆಂಟ್ ತಳೆಯುತ್ತಿರುವ ನಿರ್ಧಾರಗಳ ಬಗ್ಗೆ ಕಟು ಶಬ್ಧಗಳಲ್ಲಿ ಟೀಕಿಸಿದ್ದಾರೆ.
ಸುನಿಲ್ ಗವಾಸ್ಕರ್ ತಮ್ಮ ಅಂಕಣದಲ್ಲಿ ಟೀಮ್ ಇಂಡಿಯಾದ ಡ್ರೆಸ್ಸಿಂಗ್ ರೂಮ್‌ನಲ್ಲಿನ ಅಸಮಾನತೆಯ ಬಗ್ಗೆ ಏನೆಲ್ಲಾ ಹೇಳಿದ್ದಾರೆ. ದಿಗ್ಗಜ ಕ್ರಿಕೆಟಿಗನ ಅಸಮಾಧಾನಕ್ಕೆ ಕಾರಣವಾದ ಅಂಶ ಯಾವುದು? ಭಾರತೀಯ ಕ್ರಿಕೆಟ್‌ನಲ್ಲಿ ತನನ್ದೇ ಆದ ಛಾಪು ಮೂಡಿಸಿರುವ ಸುನಿಲ್ ಗವಾಸ್ಕರ್ ವಿವರಿಸಿರುವ ಈ ಘಟನೆಗಳು ನಿಜಕ್ಕೂ ಗಂಭೀರವಾಗಿದೆಯಾ? ಮುಂದೆ ಓದಿ

ಅಶ್ವಿನ್ ಪಾಲಿಗೆ ವಿಭಿನ್ನ ನಿಯಮ
"350ಕ್ಕೂ ಹೆಚ್ಚಿನ ವಿಕೆಟ್ ಪಡೆದಿರುವ ಆರ್ ಅಶ್ವಿನ್ ಅವರಂತಾ ಆಟಗಾರನನ್ನು ಯಾವುದೇ ತಂಡವಾದರೂ ಸ್ವಾಗಸುತ್ತದೆ. ಅದರಲ್ಲೂ ಅಶ್ವಿನ್ ನಾಲ್ಕು ಟೆಸ್ಟ್ ಶತಕಗಳನ್ನು ದಾಖಲಿಸಿದ್ದಾರೆ. ಆದರೆ ಒಂದು ಪಂದ್ಯದಲ್ಲಿ ಅಶ್ವಿನ್ ವಿಕೆಟ್ ಪಡೆಯಲು ವಿಫಲರಾದರೆ ಮುಂದಿನ ಪಂದ್ಯದಲ್ಲಿ ಮುಲಾಜಿಲ್ಲದೆ ಅವರನ್ನು ಹೊರಗಿರಿಸಲಾಗುತ್ತದೆ. ಆದರೆ ತಂಡದಲ್ಲಿ ನೆಲೆಯೂರಿರುವ ಬ್ಯಾಟ್ಸ್‌ಮನ್ ಓರ್ವ ವಿಫಲನಾದರೆ ಆತನಿಗೆ ಮತ್ತೊಂದು ಮಗದೊಂದು ಅಂತ ಸಾಲು ಸಾಲು ಅವಕಾಶಗಳು ದೊರೆಯುತ್ತದೆ. ಆದರೆ ಅಶ್ವಿನ್ ಪಾಲಿಗೆ ವಿಭಿನ್ನ ನಿಯಮಗಳು ಬಳಕೆಯಾಗುತ್ತದೆ" ಎಂದು ಗವಾಸ್ಕರ್ ಹೇಳಿದ್ದಾರೆ.

ಇನ್ನೋರ್ವ ಧ್ವನಿಯೆತ್ತಲಾರ
"ತಂಡದಲ್ಲಿನ ಈ ವಿಭಿನ್ನ ನಿಯಮಗಳಿಂದ ಅಚ್ಚರಿಗೊಂಡಿರುವ ಇನ್ನೋರ್ವ ಆಟಗಾರ ಟಿ ನಟರಾಜನ್. ಖಂಡಿತಾ ಆತ ಈ ಬಗ್ಗೆ ಯಾವುದೇ ರೀತಿಯಲ್ಲೂ ಧ್ವನಿಯೆತ್ತಲಾರ ಯಾಕೆಂದರೆ ಆತ ಹೊಸಬ" ಎಂದು ಮತ್ತೊಂದು ಪ್ರಸಂಗವನ್ನು ಗವಾಸ್ಕರ್ ವಿವರಿಸಿದ್ದಾರೆ. "ಎಡಗೈ ಯಾರ್ಕರ್ ಸ್ಪೆಶಲಿಸ್ಟ್ ಆಸ್ಟ್ರೇಲಿಯಾ ವಿರುದ್ಧದ ಟಿ20 ಪಂದ್ಯದಲ್ಲಿ ಪದಾರ್ಪಣೆ ಮಾಡಿ ಅತ್ಯುತ್ತಮ ಪ್ರದರ್ಶನದ ಮೂಲಕ ಮ್ಯಾಚ್‌ವಿನ್ನರ್ ಎನಿಸಿಕೊಂಡರು. ಆದರೆ ಆತ ಕೂಡ ಐಪಿಎಲ್ ಪ್ಲೇ ಆಫ್ ಪಂದ್ಯ ನಡೆಯುವ ಸಂದರ್ಭದಲ್ಲಿ ಮೊದಲ ಮಗುವಿನ ತಂದೆಯಾದರು. ಐಪಿಎಲ್‌ನಲ್ಲಿನ ಅವರ ಪ್ರದರ್ಶನವನ್ನು ಗಮನಿಸಿ ಯುಎಇಯಿಂದ ನೇರವಾಗಿ ಆಸ್ಟ್ರೇಲಿಯಾಗೆ ಆಯ್ಕೆ ಮಾಡಿ ಕಳುಹಿಸಲಾಯಿತು."

ಮ್ಯಾಚ್ ವಿನ್ನರ್-ನೆಟ್‌ಬೌಲರ್
"ಅಲ್ಲಿ ನೀಡಿದ ಉತ್ತಮ ಪ್ರದರ್ಶನದ ಬಳಿಕ ಅವರನ್ನು ಟೆಸ್ಟ್ ಸರಣಿಗೂ ಉಳಿಸಿಕೊಳ್ಳಲಾಯಿತು. ಆದರೆ ಭಾರತೀಯ ತಂಡದ ಭಾಗವಾಗಿ ಅಲ್ಲ. ಬದಲಾಗಿ ನೆಟ್ ಬೌಲರ್ ಆಗಿ. ಯೋಚನೆ ಮಾಡಿ, ಮ್ಯಾಚ್ ವಿನ್ನರ್ ಆದರೆ ಇನ್ನೊಂದು ಮಾದರಿಯಲ್ಲಿ ಆತನನ್ನು ನೆಟ್ ಬೌಲರ್ ಆಗಿ ಉಳಿಸಿಕೊಳ್ಳಲಾಗಿದೆ. ಆತ ಸರಣಿ ಅಂತ್ಯವಾದ ಬಳಿಕ ಜನವರಿ ಮೂರನೇ ವಾರದಲ್ಲಿ ತನ್ನ ಮಗುವನ್ನು ಮೊಟ್ಟ ಮೊದಲಿಗೆ ನೋಡಬೇಕಾಗಿದೆ".

ವಿಭಿನ್ನ ವ್ಯಕ್ತಿಗಳಿಗೆ ವಿಭಿನ್ನ ನಿಯಮಗಳು
"ಆದರೆ ಇಲ್ಲಿ ನಾಯಕ ವಿರಾಟ್ ಕೊಹ್ಲಿ ಮೊದಲ ಟೆಸ್ಟ್ ಪಂದ್ಯದ ಬಳಿಕ ಮೊದಲ ಮಗುವಿನ ಜನನದ ಹಿನ್ನೆಲೆಯಲ್ಲಿ ತವರಿಗೆ ವಾಪಾಸಾಗಿದ್ದಾರೆ. ಇದು ಭಾರತೀಯ ಕ್ರಿಕೆಟ್. ವಿಭಿನ್ನ ವ್ಯಕ್ತಿಗಳಿಗೆ ವಿಭಿನ್ನ ನಿಯಮಗಳು. ನೀವು ಇದನ್ನು ನಂಬದಿದ್ದರೆ ರವಿ ಅಶ್ವಿನ್ ಮತ್ತು ಟಿ. ನಟರಾಜನ್ ಬಳಿ ಕೇಳಿ" ಎಂದು ಸುನಿಲ್ ಗವಾಸ್ಕರ್ ತಮ್ಮ ಅಂಕಣವನ್ನು ಕೊನೆಗೊಳಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications