ಭಾರತದಲ್ಲಿ ಕ್ರಿಕೆಟ್ ಅತಿದೊಡ್ಡ ಕ್ರೀಡೆಯಾಗಿ ಹೊರಹೊಮ್ಮಿದೆ. ಪ್ರತಿ ಮನೆಯಲ್ಲಿಯೂ ಒಬ್ಬರು ಬಾಲ್, ಬ್ಯಾಟ್ ಹಿಡಿದು ಕ್ರಿಕೆಟ್ ಆಡಲು ರೆಡಿಯಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಪ್ರತಿಭಾವಂತರನ್ನು ಹುಡುಕಿ ರಾಷ್ಟ್ರೀಯ ತಂಡಕ್ಕೆ ಆಯ್ಕೆ ಮಾಡುವುದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಗೆ (ಬಿಸಿಸಿಐ) ಸವಾಲಾಗಿದೆ.
ಹಲವು ಆಟಗಾರರು ಕೆಲವೊಮ್ಮೆ ಪ್ರತಿಭೆ ಇದ್ದರೂ ಆಡಲು ಅವಕಾಶ ಸಿಗದೆ ಕ್ರಿಕೆಟ್‌ನಿಂದ ತಮ್ಮ ವೃತ್ತಿಜೀವನಕ್ಕೆ ಪೂರ್ಣವಿರಾಮ ಇಟ್ಟಿದ್ದಾರೆ. ಇದೀಗ ಇಂತಹದೆ ದಾರಿಯಲ್ಲಿ ಸಾಗುತ್ತಿರುವ ಭಾರತದ ಬ್ಯಾಟರ್ ವೃತ್ತಿಜೀವನವೂ ವಿದಾಯದ ಅಂಚಿನಲ್ಲಿದೆ.

ತ್ರಿಶತಕ ಬಾರಿಸುವುದು ಪ್ರತಿಯೊಬ್ಬ ಟೆಸ್ಟ್ ಸ್ಪೆಷಲಿಸ್ಟ್ ಬ್ಯಾಟರ್ ಕನಸಾಗಿರುತ್ತದೆ. ಇಂತಹ ಕನಸನ್ನು ನನಸು ಮಾಡಿಕೊಂಡಿದ್ದ ಭಾರತದ ಸ್ಟಾರ್ ಬ್ಯಾಟರ್ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನ ಬಹುತೇಕ ಮುಗಿದಂತೆ ಕಾಣುತ್ತಿದೆ. ಏಕೆಂದರೆ ಅವರ ಕೊಡುಗೆಯನ್ನು ಬಿಸಿಸಿಐ ಆಯ್ಕೆ ಸಮಿತಿ ಸಂಪೂರ್ಣವಾಗಿ ಮರೆತುಹೋದಂತೆ ತೋರುತ್ತಿದೆ. ಒಂದು ವೇಳೆ ಈ ಆಟಗಾರನಿಗೆ ಅವಕಾಶ ಸಿಕ್ಕಿದ್ದರೆ, ಇಂದು ಟೀಮ್ ಇಂಡಿಯಾದ ದೊಡ್ಡ ಸ್ಟಾರ್ ಕ್ರಿಕೆಟಿಗರ ಸಾಲಿಗೆ ಸೇರ್ಪಡೆಯಾಗುತ್ತಿದ್ದರು.
ಸತತ 7 ವರ್ಷಗಳಿಂದ ಭಾರತ ತಂಡ ಸೇರಲು ಸ್ಟಾರ್ ಬ್ಯಾಟರ್ ಕರುಣ್ ನಾಯರ್ ಪ್ರಯತ್ನಿಸುತ್ತಿದ್ದಾರೆ. ಕರುಣ್ ನಾಯರ್ ತಮ್ಮ ಟೆಸ್ಟ್ ವೃತ್ತಿಜೀವನದ ಮೂರನೇ ಟೆಸ್ಟ್ ಪಂದ್ಯದಲ್ಲೇ ಭರ್ಜರಿ ತ್ರಿಶತಕ ಹೊಡೆದು ಮಿಂಚಿದ್ದರು. ಇಂಗ್ಲೆಂಡ್‌ನಂತಹ ಬಲಿಷ್ಠ ತಂಡದ ವಿರುದ್ಧ ಅವರು ಆಡಿದ ಇನ್ನಿಂಗ್ಸ್ ಎಲ್ಲರ ಗಮನ ಸೆಳೆದಿದ್ದರು. ಏಕೆಂದರೆ ವೀರೇಂದ್ರ ಸೆಹ್ವಾಗ್ ಬಿಟ್ಟರೆ ಭಾರತದ ಯಾವೊಬ್ಬ ಬ್ಯಾಟರ್ ಕೂಡ ಈ ಹಿಂದೆ ಇಂತಹ ದಾಖಲೆ ಮಾಡಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಈ ತ್ರಿಶತಕದ ನಂತರವೇ ಕರುಣ್ ನಾಯರ್ ವೃತ್ತಿಜೀವನದ ಸಂಪೂರ್ಣ ಬದಲಾಗುತ್ತದೆ ಎಂದು ಭಾವಿಸಲಾಗಿತ್ತು. ಆದರೆ, 2017ರ ಮಾರ್ಚ್ ತಿಂಗಳ ನಂತರ ಕರುಣ್ ನಾಯರ್ ಟೀಮ್ ಇಂಡಿಯಾ ಪರ ಯಾವುದೇ ಮಾದರಿಯಲ್ಲೂ ಆಡಿಲ್ಲ.
ಕರುಣ್ ನಾಯರ್ 2016ರ ನವೆಂಬರ್ ತಿಂಗಳಲ್ಲಿ ನಡೆದ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿ ವೇಳೆ ಭಾರತದ ಪರ ಪಾದಾರ್ಪಣೆ ಮಾಡಿದರು. ಚೆನ್ನೈ ಟೆಸ್ಟ್ ಪಂದ್ಯದಲ್ಲಿ ಕರುಣ್ ನಾಯರ್ ತ್ರಿಶತಕ ಬಾರಿಸಿದಾಗ ದೀರ್ಘಾವಧಿಯವರೆಗೆ ಭಾರತ ತಂಡದಲ್ಲಿರುತ್ತಾರೆ ಎಂಬ ಚರ್ಚೆಗಳು ನಡೆದಿದ್ದವು. ಆದರೆ ಅಂದುಕೊಂಡಂತೆ ಏನು ಆಗಲಿಲ್ಲ. ಕರುಣ್ ನಾಯರ್ ತ್ರಿಶತಕ ಹೊಡೆದ ಬಳಿಕ ತಂಡದಿಂದ ಕೈಬಿಡಲಾಯಿತು. ಭಾರತ ತಂಡದ ಅಂದಿನ ನಾಯಕ ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆಗೆ ಅವಕಾಶ ನೀಡಲು ಕರುಣ್ ನಾಯರ್ ಅವರನ್ನು ತಂಡದಿಂದ ಕೈ ಬಿಡಲಾಯಿತು ಎಂಬ ಆನೇಕ ಚರ್ಚೆಗಳು ಕ್ರಿಕೆಟ್ ಗಲ್ಲಿಗಳಲ್ಲಿ ನಡೆದಿದ್ದವು.
ಕರುಣ್ ನಾಯರ್ ಕೂಡ ವಿರಾಟ್ ಕೊಹ್ಲಿ ಮತ್ತು ಅಂದಿನ ಹೆಡ್‌ಕೋಚ್ ರವಿಶಾಸ್ತ್ರಿ ವಿರುದ್ಧ ಆರೋಪಗಳನ್ನು ಮಾಡಿದ್ದರು. 2018ರಲ್ಲಿ ಇಂಗ್ಲೆಂಡ್‌ನಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ನನಗೆ ಒಂದೇ ಒಂದು ಪಂದ್ಯದಲ್ಲೂ ಆಡಲು ಅವಕಾಶ ನೀಡಲಿಲ್ಲ. ನಾನು ತಂಡದಿಂದ ಏಕೆ ಹೊರಗುಳಿದಿದ್ದೇನೆ ಎಂದು ಕೋಚ್ ಆಗಲಿ, ನಾಯಕರಾಗಲಿ ಅಥವಾ ಆಯ್ಕೆದಾರರಾಗಲಿ ಹೇಳಿಲ್ಲ. ಯಾರೂ ನನ್ನೊಂದಿಗೆ ಮಾತನಾಡಲಿಲ್ಲ ಎಂದು ಬೇಸರ ವ್ಯಕ್ತಡಿಸಿದ್ದರು.
ನವೆಂಬರ್ 2016ರಲ್ಲಿ ಇಂಗ್ಲೆಂಡ್ ವಿರುದ್ಧ ಭಾರತದ ಪರ ಕರುಣ್ ನಾಯರ್ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ನಂತರ ಅವರು ಕೊನೆಯ ಬಾರಿಗೆ ಮಾರ್ಚ್ 2017ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಆಡಿದ್ದರು. ಟೀಮ್ ಇಂಡಿಯಾ ಪರ ಕರುಣ್ ಕೇವಲ 6 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 374 ರನ್ ಗಳಿಸಿದ್ದಾರೆ. ಟೆಸ್ಟ್‌ನಲ್ಲಿ ಅವರ ಗರಿಷ್ಠ ಸ್ಕೋರ್ 303 ರನ್.