ಐಪಿಎಲ್ ಹಲವು ಆಟಗಾರರ ಹುಟ್ಟಿಗೆ ಕಾರಣವಾಗಿದೆ. ಐಪಿಎಲ್‌ನಲ್ಲಿ ಮಿಂಚಿದ ಆಟಗಾರರು ರಾತ್ರೋರಾತ್ರಿ ಹೀರೋಗಳಾಗಿದ್ದಾರೆ. ಹಲವು ಆಟಗಾರರು ನಾಯಕನಾಗುವ ಅದೃಷ್ಟವನ್ನು ಪಡೆದಿದ್ದು, ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ಒಮ್ಮೆ ಐಪಿಎಲ್‌ನಲ್ಲಿ ಆಡಿದರೆ, ಆ ಆಟಗಾರರ ಭವಿಷ್ಯ ಬದಲಾಗುತ್ತದೆ. ಅಷ್ಟರ ಮಟ್ಟಿಗೆ ಐಪಿಎಲ್ ಯುವ ಆಟಗಾರರಿಗೆ ಬೆಳೆಯಲು ಉತ್ತಮ ವೇದಿಕೆಯಾಗಿದೆ. ಇಂತಹ ಅದ್ಭುತ ವೇದಿಕೆಯಲ್ಲಿ ಕೆಲವು ಆಟಗಾರರು ಚಿಕ್ಕ ವಯಸ್ಸಿನಲ್ಲೇ ನಾಯಕರಾಗುವ ಮೂಲಕ ದಾಖಲೆಗಳನ್ನು ಸೃಷ್ಟಿಸಿದ್ದಾರೆ.
ಐಪಿಎಲ್ 2025 ರ ಎರಡನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ರಿಯಾನ್ ಪರಾಗ್ ರಾಜಸ್ಥಾನ ರಾಯಲ್ಸ್ ತಂಡದ ನಾಯಕರಾಗಿದ್ದರು. ಸಂಜು ಸ್ಯಾಮ್ಸನ್ ಅನುಪಸ್ಥಿಯಲ್ಲಿ ಪರಾಗ್ ನಾಯಕತ್ವ ವಹಿಸಿದ್ದರು. ಈ ಸಂದರ್ಭದಲ್ಲಿ ಪರಾಗ್ ವಯಸ್ಸು 23 ವರ್ಷ 133 ದಿನಗಳು. ಹೀಗಾಗಿ ಅವರು ಐಪಿಎಲ್‌ನ ಅತ್ಯಂತ ಕಿರಿಯ ನಾಯಕರ ಪಟ್ಟಿ ಸೇರಿ ದಾಖಲೆ ಮಾಡಿದ್ದರು. ಆದರೆ ಐಪಿಎಲ್ ಇತಿಹಾಸದಲ್ಲಿ ಕಿರಿಯ ನಾಯಕ ಪರಾಗ್ ಅಲ್ಲ. ದಿಗ್ಗಜ ಕ್ರಿಕೆಟಿಗರೊಬ್ಬರು ಐಪಿಎಲ್‌ನ ಅತ್ಯಂತ ಕಿರಿಯ ನಾಯಕರಾಗಿ ಆಗ್ರ ಸ್ಥಾನದಲ್ಲಿದ್ದಾರೆ.

ಟೀಮ್ ಇಂಡಿಯಾದ ದಿಗ್ಗಜ ಬ್ಯಾಟರ್ ಐಪಿಎಲ್‌ನ ಅತ್ಯಂತ ಕಿರಿಯ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ದಿಗ್ಗಜ ಬ್ಯಾಟರ್ ಬೇರೆ ಯಾರು ಅಲ್ಲ, ರನ್ ಮಷಿನ್ ಖ್ಯಾತಿಯ ವಿರಾಟ್ ಕೊಹ್ಲಿ. ಐಪಿಎಲ್‌ನಲ್ಲಿ ಅವರು ಆಟಗಾರ ಮತ್ತು ನಾಯಕನಾಗಿ ಹಲವು ದಾಖಲೆಗಳನ್ನು ಮಾಡಿದ್ದಾರೆ. ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.
ವಿರಾಟ್ ಕೊಹ್ಲಿ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‍ಸಿಬಿ) ತಂಡದ ನಾಯಕರಾಗಿ 2013 ರಲ್ಲಿ ನೇಮಿಸಲಾಯಿತು. ಆದರೆ ಇದಕ್ಕೂ ಮುನ್ನ ಎರಡು ವರ್ಷಗಳ ಹಿಂದೆ ಅಂದರೆ 2011 ರಲ್ಲಿ ನ್ಯೂಜಿಲೆಂಡ್‌ನ ಮಾಜಿ ದಿಗ್ಗಜ ಕ್ರಿಕೆಟಿಗ ಡೇನಿಯಲ್ ವೆಟ್ಟೋರಿ ಮೊಣಕಾಲು ಸಮಸ್ಯೆಯಿಂದಾಗಿ ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಿಂದ ಹೊರಗುಳಿದಿದ್ದರು. ಈ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಅವರಿಗೆ ಆರ್‍ಸಿಬಿ ತಂಡವನ್ನು ಮುನ್ನಡೆಸುವ ಅವಕಾಶ ಸಿಕ್ಕಿತ್ತು. ಆಗ ಕೊಹ್ಲಿಯ ವಯಸ್ಸು 22 ವರ್ಷ 187 ದಿನಗಳು.

ಭಾರತ ತಂಡದಲ್ಲಿಯೂ ನಿಯಮಿತ ಆಟಗಾರನಾಗಿದ್ದ ಕೊಹ್ಲಿ ಕೆಲವು ಪಂದ್ಯಗಳಿಗೆ ನಾಯಕರಾಗಿದ್ದರು. ಇದಾದ ಬಳಿಕ ಅವರ ಸತತ ಎರಡು ಗೆಲುವುಗಳು ನಾಯಕತ್ವದ ವೃತ್ತಿಜೀವನವನ್ನು ಪ್ರಾರಂಭಿಸಲು ನೆರವಾದವು. ಆದರೆ ನಂತರದ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ 111 ರನ್‌ಗಳ ಸೋಲನ್ನು ಅನುಭವಿಸಬೇಕಾಯಿತು.
ಆರ್‌ಸಿಬಿ ತಂಡದ ನಾಯಕತ್ವವಹಿಸಿದ್ದ ಕೊಹ್ಲಿ ಸಾಕಷ್ಟು ಸಾಧನೆ ಮಾಡಿದ್ದಾರೆ. ಐಪಿಎಲ್ 2016 ರಲ್ಲಿ ಅವರು ಆರ್‌ಸಿಬಿ ತಂಡವನ್ನು ಫೈನಲ್‌ಗೆ ಕೊಂಡೊಯ್ದರು. ಆದರೆ ಎಸ್‌ಆರ್‍ಹೆಚ್ ವಿರುದ್ಧ ಆರ್‍ಸಿಬಿ ಸೋತು ಟ್ರೋಫಿ ಕಳೆದುಕೊಂಡಿತ್ತು.
ವಿರಾಟ್ ಕೊಹ್ಲಿ (ಭಾರತ)- 22 ವರ್ಷ 187 ದಿನ
ಸ್ಟೀವನ್ ಸ್ಮಿತ್ (ಆಸ್ಟ್ರೇಲಿಯಾ)- 22 ವರ್ಷ, 344 ದಿನ
ಸುರೇಶ್ ರೈನಾ (ಭಾರತ)- 23 ವರ್ಷ, 112 ದಿನ
ಶ್ರೇಯಸ್ ಅಯ್ಯರ್ (ಭಾರತ)- 23 ವರ್ಷ, 142 ದಿನ
ರಿಷಭ್ ಪಂತ್ (ಭಾರತ)- 23 ವರ್ಷ, 289 ದಿನ
ಶುಭಮನ್ ಗಿಲ್ (ಭಾರತ)- 24 ವರ್ಷ, 198 ದಿನ