
ನವದೆಹಲಿ, ಜನವರಿ 31: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2019ರಲ್ಲಿ ಆಟಗಾರರು ತೋರುವ ಪ್ರದರ್ಶನವನ್ನು ಐಸಿಸಿ ವಿಶ್ವಕಪ್ 2019ರ ಆಯ್ಕೆಯ ವೇಳೆ ಪರಿಗಣಿಸಬಾರದು ಎಂದು ಭಾರತದ ಮಾಜಿ ಕ್ರಿಕೆಟಿಗ, ಸದ್ಯ ಕ್ರಿಕೆಟ್ ವಿಶ್ಲೇಷಕರಾಗಿರುವ ಮೋಹೀಂದರ್ ಅಮರ್‌ನಾಥ್ ಹೇಳಿದ್ದಾರೆ.
ಪ್ರತಿಷ್ಠಿತ ಪಂದ್ಯಗಳಿಗೆ ಆಟಗಾರರ ಆಯ್ಕೆ ನಡೆಸುವಾಗ ಕೆಲ ಆಟಗಾರರು ತಾನು ಐಪಿಎಲ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದರೂ ತನ್ನನ್ನು ಆಯ್ಕೆಯಲ್ಲಿ ಪರಿಗಣಿಸಿಲ್ಲ ಎಂದು ಅಸಮಾಧಾನ ಹೊರ ಹಾಕೋದಿದೆ. ಇಂಥ ಅಸಮಾಧಾನಕ್ಕೆ ಆಸ್ಪದವಿಲ್ಲ. ಐಪಿಎಲ್ ಫಾರ್ಮ್ ವಿಶ್ವಕಪ್‌ಗೆ ಮಾನದಂದವಲ್ಲ ಎಂಬರ್ಥದಲ್ಲಿ ಅಮರ್‌ನಾಥ್ ಅಭಿಪ್ರಾಯಿಸಿದ್ದಾರೆ.
'ಐಪಿಎಲ್‌ನಲ್ಲಿ ಅಂತಾರಾಷ್ಟ್ರೀಯ ಆಟಗಾರರು ಆಡಬಹುದು. ಆದರೆ ವಿಶ್ವಕಪ್ ವೇಳೆ ಐಪಿಎಲ್ ಸಾಧನೆಯನ್ನು ಪರಿಗಣಿಸಬಾರದು. ಇಂಗ್ಲೆಂಡ್ ಮತ್ತು ವೇಲ್ಸ್‌ನಲ್ಲಿ ನಡೆಯುವ ವಿಶ್ವಕಪ್ 2019ರ ಆಯ್ಕೆ, ಆಟಗಾರರ ಅಂತಾರಾಷ್ಟ್ರೀಯ ಸಾಧನೆಯನ್ನಷ್ಟೇ ಪರಿಗಣಿಸುವಂತಾಗಬೇಕು' ಎಂದು ಟೈಮ್ಸ್ ಆಫ್ ಇಂಡಿಯಾ ಅಂಕಣದಲ್ಲಿ ಮೋಹೀಂದರ್ ಬರೆದುಕೊಂಡಿದ್ದಾರೆ.
ಐಸಿಸಿ ವಿಶ್ವಕಪ್ 2019 ಟೂರ್ನಿಯು ಮೇ 30ರಂದು ಆರಂಭಗೊಳ್ಳಲಿದೆ. ಲಂಡನ್‌ನ ಕೆನ್ನಿಂಗ್ಟನ್ ಓವಲ್‌ನಲ್ಲಿ ನಡೆಯುವ ಉದ್ಘಾಟನಾ ಪಂದ್ಯದಲ್ಲಿ ಸೌತ್ ಆಫ್ರಿಕಾ ಮತ್ತು ಆತಿಥೇಯ ಇಂಗ್ಲೆಂಡ್ ತಂಡಗಳು ಸೆಣಸಾಡಲಿವೆ.