ಟೀಕೆಗಳು ಆಟಗಾರನಿಗೆ ಏನು ಹೊಸದಲ್ಲ. ಟೀಕೆಗಳನ್ನು ಕೇಳಿ ಕೇಳಿನೇ ಹಲವು ಸ್ಟಾರ್ ಆಟಗಾರರು ವಿಶ್ವದ ಮುಂದೆ ತಮ್ಮ ಆಟದ ಖದರ್ ಮೂಲಕವೇ ಉತ್ತರ ನೀಡುತ್ತಾ ಇದ್ದಾರೆ. ವಿಶ್ವಕಪ್ ಗೂ ಮುನ್ನ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಗೂ ದೊಡ್ಡ ತಲೆ ನೋವು ಒಂದಿತ್ತು. ಅದು ನಿವಾರಣೆ ಆಗಿದ್ದು, ತಲೆ ನೋವಿನ ಸ್ವರೂಪ ಬದಲಾಗಿದೆ.
ಮೊದಲು ಆಟಗಾರ ಫಾರ್ಮ್ ಚಿಂತೆ ಹೆಚ್ಚಿಸಿದ್ದರೆ, ಈಗ ಯಾರನ್ನು ಆಡಿಸಿದರೆ ಸೂಕ್ತ ಎಂಬ ಪ್ರಶ್ನೆಗಳು ಟೀಮ್ ಮ್ಯಾನೇಜ್ಮೆಂಟ್ ಎದುರು ಎದ್ದು ನಿಂತಿವೆ. ಇದಕ್ಕೆ ಕಾರಣ ವೆರಿವೆರಿ ಸಿಂಪಲ್ ಅವಕಾಶ ಪಡೆದ ಆಟಗಾರರು ಭರ್ಜರಿ ಪ್ರದರ್ಶನ ನೀಡಿ ಅಬ್ಬರಿಸುತ್ತಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆ ಟೀಕೆಗೆ ಗುರಿಯಾದ ಆಟಗಾರನ ಬ್ಯಾಟ್ ಆರ್ಭಟಿಸುತ್ತಿದೆ.

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ರೋಚಕ 3 ಪಂದ್ಯಗಳ ಏಕದಿನ ಸರಣಿಯ ಎರಡನೇ ಪಂದ್ಯ ಸೆಪ್ಟೆಂಬರ್ 24 ರಂದು ಇಂದೋರ್‌ನ ಹೋಲ್ಕರ್ ಕ್ರೀಡಾಂಗಣದಲ್ಲಿ ನಡೆಯಿತು. ಈ ಪಂದ್ಯದಲ್ಲಿ ಭಾರತದ ಬ್ಯಾಟ್ಸ್‌ಮನ್‌ಗಳ ಪ್ರದರ್ಶನ ಅಭಿಮಾನಿಗಳಿಗೆ ಹಬ್ಬದೂಟವನ್ನು ಉಣಬಡಿಸಿದೆ. ಶ್ರೇಯಸ್ ಅಯ್ಯರ್ ಮತ್ತು ಶುಭಮನ್ ಗಿಲ್ ಅವರ ಶತಕಗಳ ಬಳಿಕ ನಾಯಕ ಕೆ.ಎಲ್. ರಾಹುಲ್ ಕೂಡ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿ, ಟೀಕೆಗಳಿಗೆ ಉತ್ತರ ನೀಡಿದ್ದಾರೆ.
ರಾಹುಲ್ ಭಾನುವಾರ ನಡೆದ ಪಂದ್ಯ ಆರಂಭದಿಂದಲ್ಲೇ ಲಯದಲ್ಲಿ ಕಂಡು ಬಂದರು. ತಾವು ಎದುರಿಸಿದ ಎರಡನೇ ಎಸೆತವನ್ನೇ ಸಿಕ್ಸರ್ ಗೆ ಅಟ್ಟಿದ ರಾಹುಲ್ ಅಬ್ಬರಿಸಿದರು. ರಾಹುಲ್ 35 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಇದು ಅವರ ಸತತ ಎರಡನೇ ಅರ್ಧಶತಕ. ರಾಹುಲ್ ಮೊದಲ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಔಟಾಗದೆ 58 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದ್ದರು ಮತ್ತು ಭಾರತ ಪಂದ್ಯವನ್ನು ಗೆದ್ದಿತ್ತು.
ಈಗ ಈ ಪಂದ್ಯದಲ್ಲೂ ಅದ್ಭುತ ಸಾಧನೆ ಮಾಡಿದ್ದಾರೆ. ಕೆ.ಎಲ್. ರಾಹುಲ್ ಅಮೋಘ ಇನ್ನಿಂಗ್ಸ್ ನಲ್ಲಿ 3 ಬೌಂಡರಿ ಹಾಗೂ 3 ಸಿಕ್ಸರ್ ಸೇರಿವೆ. ಟೀಕಾಕಾರರಿಗೆ ರಾಹುಲ್ ತಕ್ಕ ಉತ್ತರ ನೀಡಿದ್ದಾರೆ. ಭಾರತ ತಂಡದ ಅನುಭವಿ ಬ್ಯಾಟ್ಸ್‌ಮನ್ ರಾಹುಲ್ ಅವರು ಇತ್ತೀಚೆಗೆ ನಡೆದ ಏಷ್ಯಾ ಕಪ್‌ನಲ್ಲಿ ಸುದೀರ್ಘ ಸಮಯದ ನಂತರ ಭಾರತ ತಂಡಕ್ಕೆ ಮರಳಿದ್ದರು.
ತಂಡದಲ್ಲಿ ಅವರ ಸ್ಥಾನದ ಬಗ್ಗೆ ನಿರಂತರ ಪ್ರಶ್ನೆಗಳು ಉದ್ಭವಿಸಿದವು. ಗಾಯದ ನಂತರ ಅವರನ್ನು ಏಷ್ಯಾಕಪ್‌ನಲ್ಲಿ ನೇರವಾಗಿ ಆಡುವುದನ್ನು ಯಾರೂ ಅರಗಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಆದರೆ ರಾಹುಲ್ ರನ್ ಗಳಿಸುವ ಮೂಲಕ ಟೀಕಾಕಾರರ ಬಾಯಿ ಮುಚ್ಚಿಸಿದರು.
ಪಾಕಿಸ್ತಾನ ವಿರುದ್ಧದ ಏಷ್ಯಾಕಪ್‌ನ ಸೂಪರ್ 4 ಪಂದ್ಯದಲ್ಲಿ ರಾಹುಲ್ ಶತಕ ಗಳಿಸಿದ್ದರು. ಈ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ರಾಹುಲ್ ಉತ್ತಮ ಶೈಲಿಯಲ್ಲಿ ಪುನರಾಗಮನ ಮಾಡಿದರು. ಈ ಇನ್ನಿಂಗ್ಸ್ ಮೂಲಕ ಟೀಕಾಕಾರರಿಗೆ ತಕ್ಕ ಉತ್ತರ ನೀಡಿದರು. ಅದರ ನಂತರ ಅವರು ಉತ್ತಮ ಲಯದಲ್ಲಿದ್ದಾರೆ ಎಂದು ತೋರುತ್ತದೆ. ರಾಹುಲ್ ಕೂಡ ಶ್ರೀಲಂಕಾ ವಿರುದ್ಧ 39 ರನ್‌ಗಳ ಉತ್ತಮ ಇನಿಂಗ್ಸ್ ಆಡಿದ್ದರು.
ಅಕ್ಟೋಬರ್ 5 ರಿಂದ ಭಾರತದಲ್ಲಿ ಪ್ರಾರಂಭವಾಗುವ ICC ODI ವರ್ಲ್ಡ್ ಕಪ್ 2023 ಕ್ಕೂ ಮೊದಲು ಸ್ಟಾರ್ ಬ್ಯಾಟ್ಸ್‌ಮನ್ ರಾಹುಲ್ ಫಾರ್ಮ್‌ಗೆ ಮರಳಿರುವುದು ಭಾರತ ತಂಡಕ್ಕೆ ಉತ್ತಮ ಸಂಕೇತವಾಗಿದೆ. ರಾಹುಲ್ ವಿಶ್ವಕಪ್‌ನಲ್ಲಿ ಭಾರತದ ಅತಿದೊಡ್ಡ ಮ್ಯಾಚ್ ವಿನ್ನರ್ ಆಗಿ ಹೊರಹೊಮ್ಮಿದರೆ. ಕನ್ನಡಿಗರಿಗೆ ಡಬಲ್ ಧಮಾಕ್..