ಟೀಮ್ ಇಂಡಿಯಾದ ಮಾಜಿ ಕೋಚ್ ರಾಹುಲ್ ದ್ರಾವಿಡ್, ಮಾಜಿ ನಾಯಕ ರೋಹಿತ್ ಶರ್ಮಾ ಅವರನ್ನು ಶ್ಲಾಘಿಸಿದ್ದಾರೆ. ರೋಹಿತ್ ಟಿ20 ಸ್ವರೂಪದಲ್ಲಿ ತಂಡದ ಯೋಚನೆಯನ್ನು ಬದಲಿಸಿದ ಆಟಗಾರ ಎಂದು ತಿಳಿಸಿದ್ದಾರೆ. ರೋಹಿತ್ ನಾಯಕರಾದ ಬಳಿಕ, ದ್ರಾವಿಡ್ ಅವರನ್ನು ಕೋಚ್ ಆಗಿ ನೇಮಕ ಮಾಡಿದ ಬಳಿಕ, ಇಬ್ಬರೂ ಭಾರತದ ಬ್ಯಾಟರ್‌ಗಳು ಧೈರ್ಯದಿಂದ, ಆಕ್ರಮಣಾಕರಿ ಮನೋಭಾವದಿಂದ, ದೊಡ್ಡ ಇನಿಂಗ್ಸ್ ಕಟ್ಟುವ ಶೈಲಿಯನ್ನು ಪರಿವರ್ತಿಸಲು ನಿರ್ಧರಿಸಿದರು ಎಂದು ಮಾಜಿ ಕೋಚ್ ತಿಳಿಸಿದ್ದಾರೆ.
ರೋಹಿತ್ ಶರ್ಮಾ ಅವರನ್ನು ಟೀಮ್ ಇಂಡಿಯಾದ ಯಶಸ್ವಿ ನಾಯಕರಲ್ಲಿ ಒಬ್ಬರು ಎಂದು ಪರಿಗಣಿಸಲಾಗುತ್ತದೆ. ಇವರ ಮುಂದಾಳತ್ವದಲ್ಲಿ ಭಾರತ ಒಟ್ಟು 2 ಐಸಿಸಿ ಟ್ರೋಫಿಗಳನ್ನು ಗೆದ್ದಿದೆ. ಟೀಮ್ ಇಂಡಿಯಾ 2024ರ ಜೂನ್‌ನಲ್ಲಿ ಟಿ20 ವಿಶ್ವಕಪ್ ಚಾಂಪಿಯನ್ ಆದರೆ, ಮಾರ್ಚ್ 2025 ರಂದು ಚಾಂಪಿಯನ್ಸ್ ಟ್ರೋಫಿ ಗೆದ್ದು ಇತಿಹಾಸ ನಿರ್ಮಿಸಿತ್ತು.

ನಾನು ಕೋಚ್ ಆಗುವ ಮೊದಲು ಏನು ಆಗಿತ್ತು, ಎಂಬುದರ ಬಗ್ಗೆ ನಾನು ಮಾತನಾಡಲಾರೆ. ಆದರೆ ನಾನು ಕೋಚ್ ಸ್ಥಾನವನ್ನು ವಹಿಸಿಕೊಂಡ ಬಳಿಕ, ನಾಯಕ ರೋಹಿತ್ ಅವರೊಂದಿಗೆ ಆಕ್ರಮಣಕಾರಿ ಆಟವನ್ನು ಆಡವ ಮಾತುಕತೆಗಳೇ ನಡೆದಿದ್ದವು. ಇದೇ ನಿಟ್ಟಿನಲ್ಲಿ ನಾವಿಬ್ಬರೂ ಯೋಜನೆಯನ್ನು ಮಾಡಿದ್ದೇವೆ. ಇದಕ್ಕಾಗಿ ರೋಹಿತ್ ಅವರಿಗೆ ಹೆಚ್ಚಿನ ಶ್ರೇಯಸ್ಸು ಸಲ್ಲುತ್ತದೆ." ಎಂದು ದ್ರಾವಿಡ್ ಹೇಳಿದ್ದಾರೆ.
ಡ್ರೆಸ್ಸಿಂಗ್ ರೂಮ್‌ನಲ್ಲಿ ತರಬೇತುದಾರ ತಂತ್ರವನ್ನು ರೂಪಿಸುತ್ತಾರೆ. ಆದರೆ ಈ ತಂತ್ರವನ್ನು ಮೈದಾನದಲ್ಲಿ ಸರಿಯಾಗಿ ಕಾರ್ಯರೂಪಕ್ಕೆ ತರುವುದು ದೊಡ್ಡ ಕೆಲಸ. ಈ ಯೋಜನೆಯ ಯಶಸ್ಸು ನಾಯಕ ಹಾಗೂ ಆಟಗಾರರಿಗೆ ಸಲ್ಲುತ್ತದೆ ಎಂದು ತಿಳಿಸಿದ್ದಾರೆ.

ಟಿ20 ಕ್ರಿಕೆಟ್ ವಿಶ್ವದಲ್ಲಿ ಹೆಚ್ಚು ಜನಪ್ರೀಯವಾಗಿದೆ. ಈ ಕ್ರಿಕೆಟ್‌ನಲ್ಲಿ ಆಕ್ರಮಣಕಾರಿ ಬ್ಯಾಟಿಂಗ್ ನಡೆಸುವುದು ನನಗೆ ಸಂತೋಷವಿದೆ. ಭಾರತ ತನ್ನ ಬ್ಯಾಟಿಂಗ್ ಮಟ್ಟವನ್ನು ಬದಲಿಸಿಕೊಂಡಿದೆ. ಟಿ20 ಕ್ರಿಕೆಟ್‌ನಲ್ಲಿ ಭಾರತದ ಬ್ಯಾಟರ್‌ಗಳು ತಮ್ಮ ಧಮಾಕೆದಾರ್ ಪ್ರದರ್ಶನ ನೀಡುತ್ತಿದ್ದಾರೆ. ಭಾರತ ಅನುಸರಿಸುತ್ತಿರುವ ತಂತ್ರವನ್ನೇ ಬೇರೆ ದೇಶಗಳು ಅನುಸರಿಸಲು ಮುಂದೆ ಬರುತ್ತಿವೆ. ಇತ್ತೀಚಿನ ವರ್ಷಗಳಲ್ಲಿ ಬೇರೆ ತಂಡಗಳು ಭಾರತದಂತೆ ಆಡಬೇಕು ಎಂದು ಹೇಳುತ್ತಿವೆ ಎಂದು ದ್ರಾವಿಡ್ ತಿಳಿಸಿದ್ದಾರೆ.
ಟೀಮ್ ಇಂಡಿಯಾದ ಕೋಚ್ ಹುದ್ದೆಯನ್ನು ಅಲಂಕರಿಸುವ ಮುನ್ನ ರಾಹುಲ್ ದ್ರಾವಿಡ್ ಅವರು ಟೀಮ್ ಇಂಡಿಯಾದ ಅಂಡರ್ 19 ಹಾಗೂ ಭಾರತ "ಎ" ತಂಡದ ತರಬೇತುದಾರರಾಗಿದ್ದರು. ಇವರ ಕೋಚಿಂಗ್ ಅವಧಿಯಲ್ಲಿ ಭಾರತ ಅಂಡರ್ 19 ವಿಶ್ವಕಪ್ ಗೆದ್ದು ಬೀಗಿತ್ತು. ಬಳಿಕ ಇವರನ್ನು ಭಾರತ ಪುರುಷರ ರಾಷ್ಟ್ರೀಯ ತಂಡದ ಕೋಚ್ ಆಗಿ ನೇಮಿಸಲಾಯಿತು. ಈ ವೇಳೆಯೂ ಇವರು ಯುವ ಆಟಗಾರರ ಶೋಧನೆ ಹಾಗೂ ಆಟಗಾರರಿಗೆ ಉತ್ತೇಜನ ನೀಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದರು. ಇವರ ಅಧಿಕಾರ ಅವಧಿಯಲ್ಲಿ ಭಾರತ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಹಾಗೂ ಏಕದಿನ ವಿಶ್ವಕಪ್ ಫೈನಲ್‌ಗೆ ಪ್ರವೇಶ ಪಡೆದಿತ್ತು.