Duleep Trophy 2023 Final: ಪಶ್ಚಿಮ ವಲಯ ವಿರುದ್ಧ ಗೆದ್ದು ದುಲೀಪ್ ಟ್ರೋಫಿ ಎತ್ತಿದ ದಕ್ಷಿಣ ವಲಯ
ಭಾನುವಾರ, ಜುಲೈ 16ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮುಕ್ತಾಯಗೊಂಡ 2023ರ ದುಲೀಪ್ ಟ್ರೋಫಿ ಫೈನಲ್ ಪಂದ್ಯದಲ್ಲಿ ದಕ್ಷಿಣ ವಲಯ ತಂಡವು ಪಶ್ಚಿಮ ವಲಯ ವಿರುದ್ಧ 75 ರನ್‌ಗಳ ಅಮೋಘ ಗೆಲುವು ಸಾಧಿಸಿ ಪ್ರಶಸ್ತಿ ಎತ್ತಿ ಹಿಡಿಯಿತು.
ಪಶ್ಚಿಮ ವಲಯ ತಂಡವನ್ನು 75 ರನ್‌ಗಳಿಂದ ಸೋಲಿಸುವ ಮೂಲಕ 2023ರ ದುಲೀಪ್ ಟ್ರೋಫಿ ಪ್ರಶಸ್ತಿಯನ್ನು ಗೆದ್ದ ದಕ್ಷಿಣ ವಲಯ ತಂಡವು ಕಳೆದ ನಾಲ್ಕು ದಿನಗಳಲ್ಲಿ ತಮ್ಮ ಶ್ರೇಷ್ಠ ಆಟಕ್ಕೆ ಅಂತಿಮ ಸ್ಪರ್ಶ ನೀಡಿತು.

ಇದು ದುಲೀಪ್ ಟ್ರೋಫಿಯಲ್ಲಿ ದಕ್ಷಿಣ ವಲಯ ತಂಡದ 14ನೇ ಪ್ರಶಸ್ತಿ ಗೆಲುವಾಗಿದೆ. ಇದೇ ವೇಳೆ ಪಶ್ಚಿಮ ವಲಯ ವಿರುದ್ಧ ಪ್ರತೀಕಾರ ತೀರಿಸಿಕೊಂಡಿತು. 2022ರ ಫೈನಲ್ ಪಂದ್ಯದಲ್ಲಿ ಪಶ್ಚಿಮ ವಲಯ ತಂಡವು ದಕ್ಷಿಣ ವಲಯ ತಂಡವನ್ನು 294 ರನ್‌ಗಳಿಂದ ಸೋಲಿಸಿತ್ತು.
ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ ದಕ್ಷಿಣ ವಲಯ ತಂಡ 213 ರನ್‌ಗಳಿಗೆ ಆಲೌಟ್ ಆಗಿತ್ತು. ಇದಕ್ಕುತ್ತರವಾಗಿ ಪಶ್ಚಿಮ ವಲಯ ತಂಡ 146 ರನ್‌ಗಳಿಗೆ ಸರ್ವಪತನ ಕಂಡಿತು. ಇನ್ನು ದಕ್ಷಿಣ ವಲಯ ತನ್ನ ಎರಡನೇ ಇನ್ನಿಂಗ್ಸ್‌ನಲ್ಲಿ 230 ರನ್‌ಗಳಿಗೆ ಎಲ್ಲ ವಿಕೆಟ್ ಕಳೆದುಕೊಂಡಿತ್ತು. ಈ ಮೂಲಕ ಪಶ್ಚಿಮ ತಂಡದ ಗೆಲುವಿಗೆ 298 ರನ್‌ಗಳ ಗುರಿ ನೀಡಲಾಗಿತ್ತು.
298 ರನ್‌ಗಳ ಗೆಲುವಿನ ಗುರಿ ಬೆನ್ನಟ್ಟಿದ ಪಶ್ಚಿಮ ವಲಯ ತಂಡ ಶನಿವಾರದ ಆಟದಂತ್ಯಕ್ಕೆ 5 ವಿಕೆಟ್‌ಗೆ 182 ರನ್ ಗಳಿಸಿತ್ತು. ಭಾನುವಾರ ಆಟ ಮುಂದುವರೆಸಿ 222 ರನ್‌ಗಳಿಗೆ ಆಲೌಟ್ ಆಯಿತು.

ಎಡಗೈ ಸ್ಪಿನ್ನರ್ ಆರ್ ಸಾಯಿ ಕಿಶೋರ್ ಮತ್ತು ವೇಗಿ ವಾಸುಕಿ ಕೌಶಿಕ್ ದಕ್ಷಿಣ ವಲಯ ತಂಡದ ಪರ ಮಿಂಚಿದ್ದು, ಇವರಿಬ್ಬರ ನಡುವೆ 8 ವಿಕೆಟ್‌ಗಳು ಹಂಚಿಕೆಯಾದವು.
92 ರನ್‌ಗಳಿಂದ ದಿನದಾಟ ಆರಂಭಿಸಿದ ಪಶ್ಚಿಮ ವಲಯ ತಂಡದ ನಾಯಕ ಪ್ರಿಯಾಂಕ್ ಪಾಂಚಾಲ್ ಅವರು ದಕ್ಷಿಣ ವಲಯ ಬೌಲರ್‌ಗಳ ವಿರುದ್ಧ ಮಂಕಾದರು. ಭಾನುವಾರ ಬೆಳಿಗ್ಗೆ ಕೇವಲ ಮೂರು ರನ್ ಸೇರಿಸಿ ವಿಧ್ವತ್ ಕಾವೇರಪ್ಪಗೆ ವಿಕೆಟ್ ಒಪ್ಪಿಸಿದರು.
ಮೊದಲ ಇನ್ನಿಂಗ್ಸ್‌ನಲ್ಲಿ 7 ವಿಕೆಟ್ ಪಡೆದಿದ್ದ ವಿಧ್ವತ್ ಕಾವೇರಪ್ಪ ಫೈನಲ್ ಪಂದ್ಯದಲ್ಲಿ ಒಟ್ಟು 8 ವಿಕೆಟ್ ಪಡೆದು ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ದಕ್ಷಿಣ ವಲಯ ತಂಡದ ಗೆಲುವಿಗೆ ದೊಡ್ಡ ಕೊಡುಗೆ ನೀಡಿದರು.
ಪಶ್ಚಿಮ ವಲಯ ತಂಡದ ಪರ ಪ್ರಿಯಾಂಕ್ ಪಾಂಚಾಲ್ 211 ಎಸೆತಗಳಲ್ಲಿ 11 ಬೌಂಡರಿ ಸಮೇತ 95 ರನ್ ಗಳಿಸಿದರೆ, ಸರ್ಫರಾಜ್ ಖಾನ್ 76 ಎಸೆತಗಳಲ್ಲಿ 5 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ 48 ರನ್ ಗಳಿಸಿದರು. ಚೇತೇಶ್ವರ ಪೂಜಾರ 15 ರನ್ ಮತ್ತು ಧರ್ಮೇಂದ್ರಸಿನ್ಹ ಜಡೇಜಾ 15 ರನ್ ಗಳಿಸಿದ್ದು ಬಿಟ್ಟರೆ, ಉಳಿದವರಾರು ಎರಡಂಕಿ ಮೊತ್ತ ದಾಟಲಿಲ್ಲ.
ದಕ್ಷಿಣ ವಲಯ ತಂಡದ ಪರ ವಾಸುಕಿ ಕೌಶಿಕ್ 25 ಓವರ್‌ಗಳಲ್ಲಿ 36 ರನ್ ನೀಡಿ 4 ವಿಕೆಟ್ ಪಡೆದರೆ, ಸಾಯಿ ಕಿಶೋರ್ 20.2 ಓವರ್‌ಗಳಲ್ಲಿ 57 ರನ್ ನೀಡಿ 4 ವಿಕೆಟ್ ಪಡೆದು ಮಿಂಚಿದರು. ಉಳಿದಂತೆ ವಿಧ್ವತ್ ಕಾವೇರಪ್ಪ ಮತ್ತು ವಿಜಯ್‌ಕುಮಾರ್ ವೈಶಾಖ್ ತಲಾ ಒಂದೊಂದು ವಿಕೆಟ್ ಕಬಳಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications