ಆಗಸ್ಟ್ 19 ಸೋಮವಾರ, 2024-25ರ ದುಲೀಪ್ ಟ್ರೋಫಿಯ ಮೊದಲ ಸುತ್ತಿಗೆ ಭಾರತೀಯ ಕ್ರಿಕೆಟ್ ಮಂಡಳಿ (ಬಿಸಿಸಿಐ) ಆಗಸ್ಟ್ 14 ರಂದು ತಂಡಗಳನ್ನು ಆಯ್ಕೆ ಮಾಡಿತ್ತು. ನಾಲ್ಕು ತಂಡಗಳ ಈ ಟೂರ್ನಿ ಸೆಪ್ಟೆಂಬರ್ 5 ರಿಂದ ಆರಂಭವಾಗಲಿದೆ. ಈ ಟೂರ್ನಿ ಮೂಲಕ ಟೀಮ್ ಇಂಡಿಯಾ ವಿಕೆಟ್‌ಕೀಪರ್-ಬ್ಯಾಟರ್ ರಿಷಬ್ ಪಂತ್ ರೆಡ್-ಬಾಲ್ ಕ್ರಿಕೆಟ್‌ಗೆ ಪುನರಾಗಮನ ಮಾಡಲಿದ್ದಾರೆ.
2022ರ ಡಿಸೆಂಬರ್ ತಿಂಗಳಲ್ಲಿ ರಿಷಬ್ ಪಂತ್ ಕಾರು ಅಪಘಾತವಾಗಿತ್ತು. ಆ ನಂತರ ಅವರು ರೆಡ್ ಬಾಲ್ ಕ್ರಿಕೆಟ್ ಆಡಲು ಸಾಧ್ಯವಾಗಲಿಲ್ಲ. ಈಗಾಗಲೇ ಏಕದಿನ ಮತ್ತು ಟಿ20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಅವರು ಮರಳಿದಿದ್ದಾರೆ. ಅವರು ಇನ್ನೂ ಟೆಸ್ಟ್ ಕ್ರಿಕೆಟ್‌ನಲ್ಲಿ ಆಡಿಲ್ಲ. ಸದ್ಯ ದುಲೀಪ್ ಟ್ರೋಫಿಯಲ್ಲಿ ಭಾರತ 'ಬಿ ಟೀಮ್'ಗೆ ಆಯ್ಕೆಯಾಗಿದ್ದಾರೆ. ಆದರೆ ಅವರನ್ನು ತಂಡದ ನಾಯಕನನ್ನಾಗಿ ಮಾಡಿಲ್ಲ ಎಂಬುದು ಅಚ್ಚರಿ ಮೂಡಿಸಿದೆ.

ಪಂತ್ ಬದಲಿಗೆ ಬಲಗೈ ಬ್ಯಾಟರ್ ಅಭಿಮನ್ಯು ಈಶ್ವರನ್‌ಗೆ ನಾಯಕತ್ವ ನೀಡಲಾಗಿದೆ. ಬಿ ಸಿಸಿಐ ನಿರ್ಧಾರದಿಂದ ಭಾರತದ ಮಾಜಿ ಆರಂಭಿಕ ಬ್ಯಾಟರ್ ಆಕಾಶ್ ಚೋಪ್ರಾ ಅಚ್ಚರಿಗೊಳಗಾಗಿದ್ದಾರೆ. ಕೆಲವು ವರ್ಷಗಳ ಹಿಂದೆ, ಭಾರತ ಟೆಸ್ಟ್ ತಂಡದ ನಾಯಕತ್ವಕ್ಕೆ ರೋಹಿತ್ ಶರ್ಮಾ ಉತ್ತರಾಧಿಕಾರಿಯಾಗಿ ಪಂತ್ ಅವರನ್ನು ನೋಡಲಾಗುತ್ತಿತ್ತು.
ಇದೀಗ ಬಿಸಿಸಿಐ ದುಲೀಪ್ ಟ್ರೋಫಿಗೆ ಆಯ್ಕೆ ಮಾಡಿರುವ 4 ದೇಶೀಯ ತಂಡಗಳಲ್ಲೂ ಪಂತ್ ನಾಯಕನಾಗಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಬಿಸಿಸಿಐ ಅವರನ್ನು ಭವಿಷ್ಯದ ನಾಯಕನಾಗಿ ಅವರನ್ನು ನೋಡುತ್ತಿಲ್ಲ ಎಂಬುದು ಬಹಿರಂಗವಾಗಿದೆ.
ಇತ್ತೀಚೆಗೆ ಆಕಾಶ್ ಚೋಪ್ರಾ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ವೀಡಿಯೊವೊಂದರಲ್ಲಿ ರಿಷಬ್ ಪಂತ್ ನಾಯಕನಾಗದಿರುವ ಬಗ್ಗೆ ಮಾತನಾಡಿದ್ದರು. "ರಿಷಬ್ ಪಂತ್ ನಾಯಕನಲ್ಲ. ಅಭಿಮನ್ಯು ಈಶ್ವರನ್ ತಂಡಕ್ಕೆ ಆಯ್ಕೆಯಾಗಿದ್ದಾರೆ. ಅವರು ಅಭಿಮನ್ಯು ಈಶ್ವರನ್ ನಾಯಕತ್ವದಲ್ಲಿ ಆಡುತ್ತಿದ್ದಾರೆ. ಇದು ಸಂಪೂರ್ಣವಾಗಿ ಉತ್ತಮವಾಗಿದೆ. ಆದರೆ ರಿಷಬ್ ಪಂತ್ ಕೂಡ ಟೆಸ್ಟ್ ತಂಡದ ನಾಯಕತ್ವದ ಅಭ್ಯರ್ಥಿಯಲ್ಲವೇ?" ಎಂದು ಪ್ರಶ್ನಿಸುವ ಮೂಲಕ ನನಗೆ ಸ್ವಲ್ಪ ಆಶ್ಚರ್ಯವಾಗಿದೆ ಎಂದಿದ್ದಾರೆ.
"ನನ್ನ ಪ್ರಕಾರ, ರಿಷಬ್ ಪಂತ್ ಅವರ ಅತ್ಯುತ್ತಮ ಪ್ರದರ್ಶನವು ಟೆಸ್ಟ್ ಕ್ರಿಕೆಟ್‌ನಲ್ಲಿದೆ. ಅವರು ದಕ್ಷಿಣ ಆಫ್ರಿಕಾ, ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾದಲ್ಲಿ ನಡೆದ ಟೆಸ್ಟ್ ಪಂದ್ಯಗಳಲ್ಲಿ ಶತಕಗಳನ್ನು ಹೊಡೆದ ಭಾರತದ ಕ್ರಿಕೆಟ್ ಇತಿಹಾಸದಲ್ಲಿ ಏಕೈಕ ವಿಕೆಟ್ ಕೀಪರ್. ಟೆಸ್ಟ್ ಕ್ರಿಕೆಟ್‌ನಲ್ಲಿ ಪಂತ್ ಆಡುವ ರೀತಿ, ರನ್ ಗಳಿಸುವ ಸ್ಥಿರತೆ ಪ್ರಕಾರ ಅವರು ನಾಯಕತ್ವದ ಅಭ್ಯರ್ಥಿಯಾಗಿದ್ದರು" ಎಂದು ಪಂತ್ ಸಾಮರ್ಥ್ಯದ ಬಗ್ಗೆ ಮಾತನಾಡಿದ್ದಾರೆ.
"ದುಲೀಪ್ ಟ್ರೋಫಿಯಲ್ಲಿ ನಾಲ್ಕು ತಂಡಗಳಿಗೆ ಶುಭಮನ್ ಗಿಲ್, ಋತುರಾಜ್ ಗಾಯಕ್ವಾಡ್, ಶ್ರೇಯಸ್ ಅಯ್ಯರ್ ಮತ್ತು ಅಭಿಮನ್ಯು ಈಶ್ವರನ್ ನಾಯಕರಾಗಿದ್ದಾರೆ. ಆದರೆ ಪಂತ್ ನಾಯಕನಾಗಿಲ್ಲ. ನನ್ನ ಪ್ರಕಾರ ಇದು ಬಹಳ ದೊಡ್ಡ ಪ್ರಶ್ನೆಯಾಗಿದೆ. ಹೊಸ ಯುಗ ಪ್ರಾರಂಭವಾಗಿದೆ. ಹಾಗಾಗಿ ನಾನು ತುಂಬಾ ಉತ್ಸುಕನಾಗಿದ್ದೇನೆ" ಎಂದು ಆಕಾಶ್ ಚೋಪ್ರಾ ಹೇಳಿದ್ದಾರೆ.