
ಚೆನ್ನೈ: ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲೇ ಅತೀ ಯಶಸ್ವಿ ತಂಡವಾಗಿ ಗುರುತಿಸಿಕೊಂಡಿದ್ದ ಚೆನ್ನೈ ಸೂಪರ್ ಕಿಂಗ್ಸ್ ಈ ಬಾರಿ ವೈಫಲ್ಯದ ಮೇಲೆ ವೈಫಲ್ಯ ಅನುಭವಿಸುತ್ತಿದೆ. ತಂಡದ ಪ್ರಮುಖ ಆಟಗಾರರಾದ ಸುರೇಶ್ ರೈನಾ, ಹರ್ಭಜನ್ ಸಿಂಗ್ ಈ ಬಾರಿ ಆಡುತ್ತಿಲ್ಲ. ಅದರ ಜೊತೆಗೆ ಆಲ್ ರೌಂಡರ್ ಡ್ವೇನ್ ಬ್ರಾವೋ ಕೂಡ ಗಾಯಗೊಂಡು ತಂಡದಿಂದ ಹೊರಗುಳಿದಿದ್ದಾರೆ.
ಈ ಐಪಿಎಲ್ ಸೀಸನ್‌ನಲ್ಲಿ ಬೆರಳೆಣಿಕೆಯ ಪಂದ್ಯಗಳನ್ನಾಡಿದ್ದ ಬ್ರಾವೋ ಅಂಥ ಪ್ರದರ್ಶನ ನೀಡಿರಲಿಲ್ಲ. ಗಾಯಕ್ಕೀಡಾಗಿದ್ದ ಬ್ರಾವೋ ಹಿಂದಿನ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಆಡಿರಲಿಲ್ಲ. ಆ ಪಂದ್ಯದಲ್ಲಿ ರಾಜಸ್ಥಾನ್ 7 ವಿಕೆಟ್‌ಗಳಿಂದ ಗೆದ್ದಿತ್ತು. ಬ್ರಾವೋ ಆಡಿದ ಕಡೇ ಪಂದ್ಯವೆಂದರೆ ಡೆಲ್ಲಿ ವಿರುದ್ಧ. ಈ ಪಂದ್ಯದಲ್ಲೂ ಚೆನ್ನೈ ಸೋತಿತ್ತು.
ಸ್ನಾಯು ಸೆಳೆತಕ್ಕೀಡಾಗಿರುವ ಬ್ರಾವೋ ಈ ಟೂರ್ನಿಯಿಂದಲೇ ಹೊರ ಬಿದ್ದಿದ್ದಾರೆ. ಟೂರ್ನಿಯಿಂದ ಹೊರ ಹೋಗುವ ಮುನ್ನ ಬ್ರಾವೋ ಟ್ವೀಟ್‌ನಲ್ಲಿ ಭಾವನಾತ್ಮಕ ಸಂದೇಶ ನೀಡಿದ್ದಾರೆ. 'ತಂಡ ತೊರೆಯಲು ಬೇಸರವಾಗುತ್ತಿದೆ' ಎಂದು ಬ್ರಾವೋ ಹೇಳಿಕೊಂಡಿದ್ದಾರೆ.
'ಸಿಎಸ್‌ಕೆ ಅಭಿಮಾನಿಗಳೇ ನೀವು ತಂಡವನ್ನು ಬೆಂಬಲಿಸುವುದನ್ನು ಬಯಸುತ್ತೇನೆ. ಈ ಸೀಸನ್‌ನಲ್ಲಿ ಉತ್ತಮ ಪ್ರದರ್ಶನ ನೀಡಲು ಬಯಸಿದ್ದೆವು. ನಮ್ಮ ಸಂಪೂರ್ಣ ಪ್ರಯತ್ನ ಹಾಕಿದ್ದೆವು. ಕೆಲವೊಮ್ಮೆ ನಮ್ಮ ಶೋ ಉತ್ತಮ ಪ್ರದರ್ಶನ ನೀಡದಿರಬಹುದು. ಆದರೆ ತಂಡವನ್ನು ಹೀಗೇ ಬೆಂಬಲಿಸಿ. ಮತ್ತೆ ಸಿಎಸ್‌ಕೆ ಬಲಿಷ್ಠ ತಂಡವಾಗಿ ಬರಲಿದೆ,' ಎಂದು ಬ್ರಾವೋ ಹೇಳಿದ್ದಾರೆ.