ಪುರುಷರನ್ನೆ ಮೀರಿಸಿ ಟಿ20ಐ ಚೊಚ್ಚಲ ವಿಶ್ವದಾಖಲೆ ಬರೆದ ಎಲ್ಲಿಸ್ ಪೆರ್ರಿ!

ಸಿಡ್ನಿ, ಜುಲೈ 29: ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ತಂಡದ ಆಲ್ ರೌಂಡರ್ ಎಲ್ಲಿಸ್ ಪೆರ್ರಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ (ಪುರುಷರು ಮತ್ತು ಮಹಿಳಾ ಕ್ರಿಕೆಟರ್ ಪರ) ಅಪರೂಪದ ದಾಖಲೆ ನಿರ್ಮಿಸಿದ್ದಾರೆ. ಟಿ20ಐನಲ್ಲಿ 1000 ರನ್ ಮತ್ತು 100 ವಿಕೆಟ್ ಸಾಧನೆ ಮೆರೆದ ಮೊದಲ ಕ್ರಿಕೆಟರ್ ಆಗಿ ಪೆರ್ರಿ ಗುರುತಿಸಿಕೊಂಡಿದ್ದಾರೆ.
ಎಲ್ಲಿಸ್ ಪೆರ್ರಿಯ ಆಲ್ ರೌಂಡರ್ ಆಟದ ನೆರವಿನಿಂದ ಹೂವೆ ಕೌಂಟಿ ಗ್ರೌಂಡ್‌ನಲ್ಲಿ ಭಾನುವಾರ (ಜುಲೈ 28) ನಡೆದ ಇಂಗ್ಲೆಂಡ್-ಆಸ್ಟ್ರೇಲಿಯಾ ಮಹಿಳೆಯರ 2ನೇ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾ 7 ವಿಕೆಟ್ ಗೆಲುವನ್ನಾಚರಿಸಿದೆ. ಕೊನೆಯ ಟಿ20 ಪಂದ್ಯ ಜುಲೈ 31ರಂದು ನಡೆಯಲಿದೆ.
ಪುರುಷರನ್ನೇ ಮೀರಿಸಿ ಅಂತಾರಾಷ್ಟ್ರೀಯ ದಾಖಲೆ ನಿರ್ಮಿಸೋದೆಂದರೆ ಸುಲಭವಿಲ್ಲ. ಆದರೆ ಈ ಅಪರೂಪದ ಹೆಗ್ಗಳಿಕೆ ಪೆರ್ರಿ ಪಾಲಾಗಿದೆ.

1000 ರನ್ ಮೈಲಿಗಲ್ಲು
ಕಳೆದ ನವೆಂಬರ್‌ನಲ್ಲಿ ಪೆರ್ರಿ ವರ್ಲ್ಡ್ ಟಿ20 ಪಂದ್ಯವೊಂದರಲ್ಲಿ ಇಂಗ್ಲೆಂಡ್‌ನ ನಟಾಲಿಯಾ ಸೈವರ್ ಅವರ ವಿಕೆಟ್ ಕೆಡವಿದ್ದರು. ಆ ಪಂದ್ಯದಲ್ಲಿ ಎಲ್ಲಿಸ್ 1000 ರನ್ ಮೈಲಿಗಲ್ಲು ಸ್ಥಾಪಿಸಿದ್ದರು. ಆದರೆ ಭಾನುವಾರದ ಪಂದ್ಯದ ಮೂಲಕ ಪೆರ್ರಿ ಟಿ20ಐ 100 ವಿಕೆಟ್ ದಾಖಲೆ ಪೂರೈಸಿಕೊಂಡಿದ್ದಾರೆ. ಈ ಪಂದ್ಯದಲ್ಲಿ ಪೆರ್ರಿಗೆ ಆಮಿ ಎಲ್ಲೆನ್ ಜೋನ್ಸ್ ವಿಕೆಟ್ ಲಭಿಸಿತು.

ಅವಕಾಶ ವಂಚಿತ ಅಫ್ರಿದಿ
ಪಾಕಿಸ್ತಾನದ ಆಲ್ ರೌಂಡರ್ ಶಾಹಿದ್ ಅಫ್ರಿದಿಗೆ ಟಿ20ಯಲ್ಲಿ ಈ ವಿಶ್ವ ದಾಖಲೆ ನಿರ್ಮಿಸುವ ಅವಕಾಶವಿತ್ತು. ಆದರೆ ಅಫ್ರಿದಿ ಈ ಅವಕಾಶ ಕಳೆದುಕೊಂಡರು. ಅಂತಾರಾಷ್ಟ್ರೀಯ ಟಿ20ಯಲ್ಲಿ ಅಫ್ರಿದಿ 1498 ರನ್ ಮತ್ತು 98 ವಿಕೆಟ್ ಸಾಧನೆ ಮಾಡಿದ್ದರು. ಅಫ್ರಿದಿ ನಿವೃತ್ತಿ ನೀಡಿದ್ದರಿಂದ ಅವರಿಗೆ ಈ ಅಪರೂಪದ ದಾಖಲೆ ಪೂರೈಸಿಕೊಳ್ಳಲಾಗಲಿಲ್ಲ.

ಇನ್ನು ಶಕೀಬ್ ಸರದಿ
ಸದ್ಯಕ್ಕೆ ಬಾಂಗ್ಲಾದೇಶದ ಆಲ್ ರೌಂಡರ್ ಶಕೀಬ್ ಅಲ್ ಹಸನ್‌ಗೆ ಅಂತಾರಾಷ್ಟ್ರೀಯ ಟಿ20ಯಲ್ಲಿ ಈ ಅಪೂರ್ವ ದಾಖಲೆಗೆ ಅವಕಾಶವಿದೆ. ಟಿ20ಐನಲ್ಲಿ ಶಕೀಬ್ 1471 ರನ್ ಮತ್ತು 88 ವಿಕೆಟ್ ಸಾಧನೆ ಹೊಂದಿದ್ದಾರೆ. ವಿಶೇಷವೆಂದರೆ ಇದೇ ಆಸೀಸ್-ಇಂಗ್ಲೆಂಡ್ ಏಕದಿನ ಸರಣಿಯಲ್ಲಿ ಪೆರ್ರಿ 22 ರನ್‌ಗೆ ಬರೋಬ್ಬರಿ 7 ವಿಕೆಟ್ ಕೆಡವಿ ಜೀವನಶ್ರೇಷ್ಠ ಸಾಧನೆ ತೋರಿದ್ದರು.

ಪೆರ್ರಿ ಭರ್ಜರಿ ಬ್ಯಾಟಿಂಗ್
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಇಂಗ್ಲೆಂಡ್, ಟಮ್ಮಿ ಬ್ಯೂಮಾಂಟ್ 43 ರನ್ ಕೊಡುಗೆಯೊಂದಿಗೆ 20 ಓವರ್‌ಗೆ 8 ವಿಕೆಟ್ ಕಳೆದು 121 ರನ್ ಬಾರಿಸಿತ್ತು. ಗುರಿ ಬೆನ್ನತ್ತಿದ ಆಸೀಸ್ ತಂಡ, ನಾಯಕಿ ಮೆಗ್ ಲ್ಯಾನಿಂಗ್ ಅಜೇಯ 43, ಎಲ್ಲಿಸ್ ಪೆರ್ರಿ ಅಜೇಯ 47 ರನ್ (39 ಎಸೆತ) ಬೆಂಬಲದೊಂದಿಗೆ 17.5 ಓವರ್‌ಗೆ 3 ವಿಕೆಟ್ ನಷ್ಟದಲ್ಲಿ 122 ರನ್ ಗಳಿಸಿತು.ಎಲ್ಲಿಸ್, ಪಂದ್ಯಶ್ರೇಷ್ಠೆ ಎನಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications