ಲಾರ್ಡ್ಸ್: ಇಂಗ್ಲೆಂಡ್ ನೀಡಿದ್ದ ಸವಾಲಿನ ಗುರಿಯನ್ನು ಬೆನ್ನಟ್ಟಿದ ಆಸ್ಟ್ರೇಲಿಯಾ ನಾಲ್ಕನೇ ಏಕದಿನ ಪಂದ್ಯದಲ್ಲಿ 126 ರನ್‌ಗಳಿಗೆ ಸರ್ವಪತನ ಕಂಡಿದ್ದು, 186 ರನ್‌ಗಳ ಸೋಲು ಕಂಡಿದೆ. ಈ ಮೂಲಕ ಆತಿಥೇಯ ಇಂಗ್ಲೆಂಡ್ ತಂಡ ಐದು ಏಕದಿನ ಪಂದ್ಯಗಳ ಸರಣಿಯಲ್ಲಿ ಸಮಬಲ ಸಾಧಿಸಿದೆ.
ಮೊದಲ ಎರಡೂ ಪಂದ್ಯಗಳನ್ನು ಗೆದ್ದಿದ್ದ ಆಸ್ಟ್ರೇಲಿಯಾ ಮೂರು ಹಾಗೂ ನಾಲ್ಕನೇ ಪಂದ್ಯದಲ್ಲಿ ಸೋಲು ಕಂಡಿದೆ. ನಾಲ್ಕನೇ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ 39 ಓವರ್‌ಗಳಲ್ಲಿ 5 ವಿಕೆಟ್‌ಗೆ 312 ರನ್ ಗಳಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಆಸೀಸ್ 24.4 ಓವರ್‌ಗಳಲ್ಲಿ 126 ರನ್‌ಗಳಿಗೆ ಸರ್ವಪತನ ಕಂಡಿತು.

ಗುರಿಯನ್ನು ಬೆನ್ನಟ್ಟಿದ ಆಸ್ಟ್ರೇಲಿಯಾ ತಂಡಕ್ಕೆ ಯಾವೊಬ್ಬ ಸ್ಟಾರ್ ಆಟಗಾರ ಸಹ ಆಧಾರವಾಗಲಿಲ್ಲ. ಆರಂಭಿಕರಾದ ನಾಯಕ ಮಿಚೆಲ್ ಮಾರ್ಷ್ (28) ಹಾಗೂ ಟ್ರಾವಿಸ್ ಹೆಡ್ (34) ಕೊಂಚ ಇಂಗ್ಲೆಂಡ್ ಬೌಲರ್‌ಗಳಿಗೆ ಸವಾಲು ಎಸೆದರು. ಈ ಜೋಡಿ ಮೊದಲ ವಿಕೆಟ್‌ಗೆ 8.4 ಓವರ್‌ಗಳಲ್ಲಿ 68 ರನ್ ಸೇರಿಸಿತು. ಆದರೆ ಮಧ್ಯಮ ಕ್ರಮಾಂಕದಲ್ಲಿ ಯಾವೊಬ್ಬ ಬ್ಯಾಟರ್ ಜವಾಬ್ದಾರಿ ಅರಿತು ಬ್ಯಾಟ್ ಮಾಡಲಿಲ್ಲ. ಅಲೆಕ್ಸ್ ಕ್ಯಾರಿ, ಸೀನ್ ಅಬೋಟ್ ಅವರನ್ನು ಹೊರತು ಪಡಿಸಿದರೆ ಉಳಿದ ಆಟಗಾರರು ಸಿಂಗಲ್ ಡಿಜಿಟ್‌ನಲ್ಲೇ ಆಟ ಮುಗಿಸಿದರು.
ಇಂಗ್ಲೆಂಡ್ ಪರ ಮ್ಯಾಥ್ಯೂ ಪಾಟ್ಸ್ 38 ರನ್ ನೀಡಿ 4 ವಿಕೆಟ್ ಕಬಳಿಸಿದರು. ಬ್ರೈಡನ್ ಕಾರ್ಸ್ 3, ಜೋಫ್ರಾ ಆರ್ಚರ್ 2 ವಿಕೆಟ್ ತಮ್ಮದಾಗಿಸಿಕೊಂಡರು.
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ತಂಡದ ಆರಂಭ ಸಾಧಾರಣವಾಗಿತ್ತು. ಇಂಗ್ಲೆಂಡ್ ತಂಡದ ಆರಂಭಿಕರಾದ ಫಿಲ್ ಸಾಲ್ಟ್ ಹಾಗೂ ಬೆನ್ ಡಕೆಟ್ ಜೋಡಿ ತಂಡಕ್ಕೆ 48 ರನ್ ಕಾಣಿಕೆ ನೀಡಿತು. ಫಿಲ್ ಸಾಲ್ಟ್ ರೂಪದಲ್ಲಿ ತಂಡ ಮೊದಲ ವಿಕೆಟ್ ಕಳೆದುಕೊಂಡಿತು. ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಮಾಡಲು ಬಂದ ವಿಲ್ ಜಾಕ್ಸ್ 10 ರನ್‌ಗಳಿಗೆ ಆಟ ಮುಗಿಸಿದರು.
ಮೂರನೇ ವಿಕೆಟ್‌ಗೆ ಆರಂಭಿಕ ಬೆನ್ ಡಕೆಟ್ ಅವರನ್ನು ಸೇರಿಕೊಂಡ ನಾಯಕ ಹ್ಯಾರಿ ಬ್ರೂಕ್ ತಂಡಕ್ಕೆ ಆಧಾರವಾದರು. ಆಸ್ಟ್ರೇಲಿಯಾ ಬೌಲರ್‌ಗಳ ತಂತ್ರವನ್ನು ಅರಿತು ಬ್ಯಾಟ್ ಮಾಡಿದ ಜೋಡಿ ಅಬ್ಬರಿಸಿತು. ಕೇವಲ 53 ಎಸೆತಗಳಲ್ಲಿ ಈ ಜೋಡಿ 79 ರನ್ ಸೇರಿಸಿ ತಂಡಕ್ಕೆ ಆಧಾರವಾಯಿತು. ಅಲ್ಲದೆ ತಂಡದ ಮೊತ್ತವನ್ನು ಹಿಗ್ಗಿಸುವಲ್ಲಿ ಶ್ರಮಿಸಿತು. ಬೆನ್ ಡಕೆಟ್ 6 ಬೌಂಡರಿ, 1 ಸಿಕ್ಸರ್ ಸಹಾಯದಿಂದ 63 ರನ್ ಬಾರಿಸಿ ಔಟ್ ಆದರು.
ನಾಲ್ಕನೇ ವಿಕೆಟ್‌ಗೆ ಜೇಮ್ ಸ್ಮಿತ್ ಹಾಗೂ ನಾಯಕ ಬ್ರೂಕ್ ತಂಡದ ಮೊತ್ತವನ್ನು ಹಿಗ್ಗಿಸುವಲ್ಲಿ ಶ್ರಮಿಸಿದರು. ಈ ಜೋಡಿ 75 ರನ್ ಕಾಣಿಕೆ ನೀಡಿತು. ಹ್ಯಾರಿ ಬ್ರೂಕ್ 11 ಬೌಂಡರಿ, 1 ಸಿಕ್ಸರ್ ಸಹಾಯದಿಂದ 87 ರನ್ ಸಿಡಿಸಿ ಔಟ್ ಆದರು. ಸ್ಮಿತ್ ಆಟ 39 ರನ್‌ಗಳಿಗೆ ಸೀಮಿತವಾಯಿತು.
ಭರವಸೆಯ ಆಟಗಾರ ಲೀಯಾಮ್ ಲಿವಿಂಗ್‌ಸ್ಟೋನ್ 3 ಬೌಂಡರಿ, 7 ಸಿಕ್ಸರ್ ಸಹಾಯದಿಂದ ಕೇವಲ 27 ಎಸೆತಗಳಲ್ಲಿ 62 ರನ್ ಚಚ್ಚಿದರು. ಅಂತಿಮವಾಗಿ ಇಂಗ್ಲೆಂಡ್ 5 ವಿಕೆಟ್‌ಗೆ 312 ರನ್ ಸೇರಿಸಿತು. ಆಸೀಸ್ ಪರ ಆಡಂ ಜಂಪಾ ಎರಡು ವಿಕೆಟ್ ಪಡೆದರು.