
ಬಾಂಗ್ಲಾದೇಶ ಪ್ರವಾಸ ಕೈಗೊಂಡಿರುವ ಇಂಗ್ಲೆಂಡ್ ತಂಡ ಈ ಪ್ರವಾಸದಲ್ಲಿ ಮೊದಲ ಸೋಲು ಕಂಡಿದೆ. ಸರಣಿಯ ಮೊದಲ ಎರಡು ಪಂದ್ಯಗಳಲ್ಲಿ ಗೆದ್ದು ಸರಣಿ ವಶಕ್ಕೆ ಪಡೆದುಕೊಂಡಿದ್ದ ಇಂಗ್ಲೆಂಡ್ ತಂಡ ಅಂತಿಮ ಪಂದ್ಯದಲ್ಲಿ 50 ರನ್‌ಗಳ ಅಂತರದ ದೊಡ್ಡ ಸೋಲು ಕಂಡಿದೆ. ಈ ಪಂದ್ಯದಲ್ಲಿ ಬಾಂಗ್ಲಾ ಅನುಭವಿ ಆಟಗಾರ ಶಕೀಬ್ ಅಲ್ ಹಸನ್ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡು ವಿಭಾಗದಲ್ಲಿಯೂ ಅಬ್ಬರಿಸಿದ್ದಾರೆ. ಈ ಮೂಲಕ ಸರಣಿ ಸೋಲು ಕಂಡಿದ್ದರೂ ಬಾಂಗ್ಲಾದೇಶ ವೈಟ್‌ವಾಶ್ ಮುಖಭಂಗದಿಂದ ತಪ್ಪಿಸಿಕೊಳ್ಳಲು ಯಶಸ್ವಿಯಾಗಿದೆ.
ಈ ಪಂದ್ಯದಲ್ಲಿ ಮೊದಲಿಗೆ ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ ತಂಡ ಆರಂಭಿಕ ಹಿನ್ನಡೆಯ ಹೊರತಾಗಿಯೂ ಅದ್ಭುತ ಪ್ರದರ್ಶನ ನೀಡಿದೆ. ಮಧ್ಯಮ ಕ್ರಮಾಂಕದ ಆಟಗಾರರ ಜವಾಬ್ಧಾರಿಯುತ ಪ್ರದರ್ಶನ ಬಾಂಗ್ಲಾದೇಶ ತಂಡಕ್ಕೆ ನೆರವಾಯಿತು. ನಜ್ಮುಲ್ ಹುಸೇನ್ ಶಂಟೋ, ಮುಷ್ಫಿಕರ್ ರಹೀಮ್ ಹಾಗೂ ಶಕೀಬ್ ಅಲ್ ಹಸನ್ ಭರ್ಜರಿ ಅರ್ಧ ಶತಕ ಸಿಡಿಸಿ ಗಮನ ಸೆಳೆದಿದ್ದಾರೆ. ಮುಷ್ಫಿಕರ್ ರಹೀಮ್ 70 ರನ್‌ಗಳಿಸಿದರೆ ಶಕೀಬ್ 75 ರನ್‌ಗಳಿಸಿ ಅಬ್ಬರಿಸಿದರು.
ಇನ್ನು ಕೆಳ ಕ್ರಮಾಂಕದ ಆಟಗಾರರಿಂದ ಉತ್ತಮ ಪ್ರದರ್ಶನ ಬಾರಲಿಲ್ಲ. ಹೀಗಾಗಿ ಬಾಂಗ್ಲಾದೇಶ ತಂಡ 48.5 ಓವರ್‌ಗಳಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು 246 ರನ್‌ಗಳನ್ನು ಗಳಿಸಿತು. ಇಂಗ್ಲೆಂಡ್ ತಂಡದ ಪರವಾಗಿ ಜೋಫ್ರ ಆರ್ಚರ್ ಮೂರು ವಿಕೆಟ್ ಪಡೆದು ಮಿಂಚಿದ್ದರೆ ಸ್ಯಾಮ್ ಕರನ್ ಹಾಗೂ ಆದಿಲ್ ರಶೀದ್ ತಲಾ ಎರಡು ವಿಕೆಟ್ ಪಡೆದಿದ್ದಾರೆ.
ಇನ್ನು ಈ ಮೊತ್ತವನ್ನು ಬೆನ್ನಟ್ಟಿದ ಇಂಗ್ಲೆಂಡ್ ತಂಡಕ್ಕೆ ಉತ್ತಮ ಆರಂಭ ದೊರೆಯಿತು. ಮೊದಲ ವಿಕೆಟ್‌ಗೆ 54 ರನ್‌ಗಳ ಜೊತೆಯಾಟ ಬಂದ ಬಳಿಕ ಕುಸಿತ ಕಂಡ ಇಂಗ್ಲೆಂಡ್ 55 ರನ್‌ಗೆ 3 ವಿಕೆಟ್ ಕಳೆದುಕೊಂಡಿತು. ನಂತರವೂ ಇಂಗ್ಲೆಂಡ್ ಪರವಾಗಿ ದೊಡ್ಡ ಜೊತೆಯಾಟ ಪಡೆಯಲು ವಿಫಲವಾಯಿತು. ಜೇಮ್ಸ್ ವಿನ್ಸ್, ಕ್ರಿಸ್ ವೋಕ್ಸ್ ಸಾಧಾರಣ ಹೋರಾಟ ನಿಡಿದರಾದರೂ ಅದು ಇಂಗ್ಲೆಂಡ್ ತಂಡಕ್ಕೆ ಸಾಕಾಲಿಲ್ಲ.
ಇನ್ನು ಬೌಲಿಂಗ್‌ನಲ್ಲಿಯೂ ಇಂಗ್ಲೆಂಡ್ ತಂಡಕ್ಕೆ ಆಘಾತ ನೀಡಿದ್ದು ಶಕೀಬ್ ಅಲ್ ಹಸನ್. ಬ್ಯಾಟಿಂಗ್‌ನಲ್ಲಿ ಅಬ್ಬರಿಸಿದ್ದ ಶಕೀಬ್ ಬೌಲಿಂಗ್‌ನಲ್ಲಿ 10 ಓವರ್‌ಗಳಲ್ಲಿ 35 ರನ್ ನೀಡಿ 4 ವಿಕೆಟ್ ಪಡೆದಿದ್ದಾರೆ. ಈ ಮೂಲಕ ಇಂಗ್ಲೆಂಡ್ ತಂಡವನ್ನು 196 ರನ್‌ಗಳಿಗೆ ಕಟ್ಟಿ ಹಾಕುವಲ್ಲಿ ಯಶಸ್ವಿಯಾಯಿತು ಬಾಂಗ್ಲಾದೇಶ. ಈ ಮೂಲಕ ಈ ಪಂದ್ಯದಲ್ಲಿ 50 ರನ್‌ಗಳ ಗೆಲುವು ಸಾಧಿಸಿದೆ.
ಆದರೆ ಸರಣಿಯ ಮೊದಲ ಎರಡು ಪಂದ್ಯಗಳಲ್ಲಿ ಇಂಗ್ಲೆಂಡ್ ತಂಡ ಗೆಲುವು ಸಾಧಿಸಿದ್ದು ಸರಣಿಯನ್ನು ತನ್ನ ವಶಕ್ಕೆ ಪಡೆದುಕೊಂಡಿದೆ.
ಬಾಂಗ್ಲಾದೇಶ: ತಮೀಮ್ ಇಕ್ಬಾಲ್ (ನಾಯಕ), ಲಿಟನ್ ದಾಸ್, ನಜ್ಮುಲ್ ಹೊಸೈನ್ ಶಾಂಟೊ, ಮುಶ್ಫಿಕರ್ ರಹೀಮ್ (ವಿಕೆಟ್ ಕೀಪರ್), ಶಕೀಬ್ ಅಲ್ ಹಸನ್, ಮಹಮ್ಮದುಲ್ಲಾ, ಅಫೀಫ್ ಹೊಸೈನ್, ಮೆಹಿದಿ ಹಸನ್ ಮಿರಾಜ್, ತೈಜುಲ್ ಇಸ್ಲಾಂ, ಎಬಾಡೋತ್ ಹೊಸೈನ್, ಮುಸ್ತಫಿಜುರ್ ರೆಹಮಾನ್
ಬೆಂಚ್: ತಸ್ಕಿನ್ ಅಹ್ಮದ್, ತೌಹಿದ್ ಹೃದಯ್, ಹಸನ್ ಮಹಮೂದ್, ಶಮೀಮ್ ಹೊಸೈನ್
ಇಂಗ್ಲೆಂಡ್: ಜೇಸನ್ ರಾಯ್, ಫಿಲಿಪ್ ಸಾಲ್ಟ್, ಡೇವಿಡ್ ಮಲನ್, ಜೇಮ್ಸ್ ವಿನ್ಸ್, ಜೋಸ್ ಬಟ್ಲರ್ (ನಾಯಕ & ವಿಕೆಟ್ ಕೀಪರ್), ಸ್ಯಾಮ್ ಕರ್ರಾನ್, ಮೊಯಿನ್ ಅಲಿ, ಕ್ರಿಸ್ ವೋಕ್ಸ್, ರೆಹಾನ್ ಅಹ್ಮದ್, ಆದಿಲ್ ರಶೀದ್, ಜೋಫ್ರಾ ಆರ್ಚರ್
ಬೆಂಚ್: ಸಾಕಿಬ್ ಮಹಮೂದ್, ಮಾರ್ಕ್ ವುಡ್, ರೀಸ್ ಟೋಪ್ಲಿ