ಮಂಗಳವಾರ, ಅಕ್ಟೋಬರ್ 10ರಂದು ಧರ್ಮಶಾಲಾದಲ್ಲಿ ನಡೆದ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಇಂಗ್ಲೆಂಡ್ ತಂಡವು ಬೃಹತ್ ಮೊತ್ತ ದಾಖಲಿಸಿದಾಗ ಆರಂಭಿಕ ಬ್ಯಾಟ್ಸ್‌ಮನ್ ಡೇವಿಡ್ ಮಲಾನ್ ತಮ್ಮ ಚೊಚ್ಚಲ ವಿಶ್ವಕಪ್ ಶತಕವನ್ನು ಬಾರಿಸಿದರು.
ಇದು ಡೇವಿಡ್ ಮಲಾನ್ ಅವರ 6ನೇ ಏಕದಿನ ಶತಕವಾಗಿದೆ ಮತ್ತು ಈ ಮೂಲಕ 50-ಓವರ್‌ಗಳ ಐಸಿಸಿ ಪಂದ್ಯಾವಳಿಯಲ್ಲಿ ಮೂರಂಕಿ ತಲುಪಿದ 8ನೇ ಇಂಗ್ಲೆಂಡ್ ಆರಂಭಿಕ ಆಟಗಾರ ಎನಿಸಿದರು.
ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂ(ಹೆಚ್‌ಪಿಸಿಎ)ನಲ್ಲಿ ಡೇವಿದ್ ಮಲಾನ್ ಕೇವಲ 91 ಎಸೆತಗಳಲ್ಲಿ 12 ಬೌಂಡರಿ ಮತ್ತು 2 ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ಶತಕ ಪೂರೈಸಿದರು. ಅಂತಿಮವಾಗಿ 107 ಎಸೆತಗಳಲ್ಲಿ 16 ಬೌಂಡರಿ ಹಾಗೂ 5 ಸಿಕ್ಸರ್‌ಗಳ ಸಮೇತ 140 ರನ್ ಬಾರಿಸಿದರು. ಈ ವರ್ಷ ಭಾರತದಲ್ಲಿ ನಡೆದ ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ತಂಡಕ್ಕೆ ಇದು ಮೊದಲ ಶತಕವಾಗಿದೆ.

ಭಾರತದಲ್ಲಿ ನಡೆದ ವಿಶ್ವಕಪ್‌ನಲ್ಲಿ ಈವರೆಗೆ ಕೇವಲ 2 ಇಂಗ್ಲೆಂಡ್ ಬ್ಯಾಟ್ಸ್‌ಮನ್‌ಗಳು ಮಾತ್ರ ಶತಕ ಗಳಿಸಿದ್ದಾರೆ. ಗ್ರಹಾಂ ಗೂಚ್ 1987ರಲ್ಲಿ ಮುಂಬೈನಲ್ಲಿ ಭಾರತದ ವಿರುದ್ಧ 115 ರನ್ ಬಾರಿಸಿದರೆ, ಆಂಡ್ರ್ಯೂ ಸ್ಟ್ರಾಸ್ 2011ರಲ್ಲಿ ಬೆಂಗಳೂರಿನಲ್ಲಿ ಭಾರತದ ವಿರುದ್ಧವೇ 158 ರನ್ ಬಾರಿಸಿದ್ದರು. ಈ ಮೂಲಕ ಭಾರತದಲ್ಲಿ ನಡೆದ ವಿಶ್ವಕಪ್‌ನಲ್ಲಿ ಶತಕ ಬಾರಿಸಿದ ಮೂರನೇ ಇಂಗ್ಲೆಂಡ್ ಬ್ಯಾಟರ್ ಎನಿಸಿದರು.
ಕೇವಲ 32ನೇ ಓವರ್‌ನಲ್ಲಿ ಡೇವಿಡ್ ಮಲಾನ್ ತಮ್ಮ ಶತಕವನ್ನು ಗಳಿಸಿದರು. ಆಗ ಇಂಗ್ಲೆಂಡ್ ಕೇವಲ ಒಂದು ವಿಕೆಟ್ ನಷ್ಟಕ್ಕೆ 200 ರನ್ ಗಳಿಸಿತ್ತು. 2023ರ ವಿಶ್ವಕಪ್‌ನ ಆರಂಭಿಕ ಪಂದ್ಯದ ವೈಫಲ್ಯದ ನಂತರ ಇಂಗ್ಲೆಂಡ್ ಹೆಚ್ಚು ಸುಧಾರಿತ ಪ್ರದರ್ಶನ ನೀಡಿದೆ.
ಡೇವಿಡ್ ಮಲಾನ್ ಅವರು ಮತ್ತೊಬ್ಬ ಆರಂಭಿಕ ಜಾನಿ ಬೈರ್‌ಸ್ಟೋವ್ ಅವರೊಂದಿಗೆ ಮೊದಲ ವಿಕೆಟ್‌ಗೆ 115 ರನ್‌ಗಳ ಜೊತೆಯಾಟ ನೀಡಿದರು. ಈ ವೇಳೆ ಜಾನಿ ಬೈರ್‌ಸ್ಟೋವ್ 52 ರನ್ ಗಳಿಸಿದ್ದಾ ಶಕೀಬ್ ಅಲ್ ಹಸನ್ ಬೌಲಿಂಗ್‌ನಲ್ಲಿ ಔಟಾದರು.
ನಂತರ ಡೇವಿಡ್ ಮಲಾನ್ ಅವರು ವಿಶ್ವಕಪ್ ಪಂದ್ಯಾವಳಿಯನ್ನು ಅದ್ಭುತ ಧಾಟಿಯಲ್ಲಿ ಪ್ರಾರಂಭಿಸಿದ 3ನೇ ಕ್ರಮಾಂಕದ ಬ್ಯಾಟರ್ ಜೋ ರೂಟ್ ಅವರೊಂದಿಗೆ ಮತ್ತೊಂದು ಅತ್ಯುತ್ತಮ ಜೊತೆಯಾಟದಲ್ಲಿ ಪಾಲ್ಗೊಂಡರು.
ಪಂದ್ಯದ 33ನೇ ಓವರ್‌ನಲ್ಲಿ ಡೇವಿಡ್ ಮಲಾನ್ ತಮ್ಮ ವೈಯಕ್ತಿಕ 120 ರನ್‌ಗಳನ್ನು ದಾಟಿದಾಗ ಆಫ್-ಸ್ಪಿನ್ನರ್ ಮೆಹಿದಿ ಹಸನ್ ಮಿರಾಜ್ ಅವರ ಬೌಲಿಂಗ್‌ನಲ್ಲಿ 4, 6, 6, 4 ಬಾರಿಸಿದ ನಂತರ ಬ್ಯಾಟಿಂಗ್ ಅನ್ನು 6ನೇ ಗೇರ್‌ಗೆ ಬದಲಾಯಿಸಿದರು. ಡೇವಿಡ್ ಮಲಾನ್ 38ನೇ ಓವರ್‌ನಲ್ಲಿ ಆಫ್ ಸ್ಪಿನ್ನರ್ ಮಹೇದಿಗೆ ವಿಕೆಟ್ ಒಪ್ಪಿಸಿದರು.

1875- ಡಿಎಲ್ ಅಮಿಸ್ - 137 ರನ್
1987- ಗ್ರಹಾಂ ಗೂಚ್ - 115 ರನ್
2011- ಆಂಡ್ರ್ಯೂ ಸ್ಟ್ರಾಸ್ - 158 ರನ್
2015- ಮೊಯಿನ್ ಅಲಿ - 128 ರನ್
2019- ಜೇಸನ್ ರಾಯ್ - 153 ರನ್
2019- ಜೋ ರೂಟ್ - 100 ರನ್
2019- ಜಾನಿ ಬೈರ್‌ಸ್ಟೋವ್ - 111, 116 ರನ್
2023- ಡೇವಿಡ್ ಮಲಾನ್ - 140 ರನ್
ಜೇಸನ್ ರಾಯ್ ಅವರು ಗಾಯಗೊಂಡು ಏಕದಿನ ವಿಶ್ವಕಪ್ ತಂಡದಿಂದ ಹೊರಗುಳಿದ ನಂತರ, ವಿಶ್ವಕಪ್‌ಗೆ ಆಯ್ಕೆ ಮಾಡುವ ಮೂಲಕ ಆಯ್ಕೆದಾರರು ತನ್ನಲ್ಲಿ ತೋರಿಸಿದ ನಂಬಿಕೆಯನ್ನು ಡೇವಿಡ್ ಮಲಾನ್ ಇದೀಗ ಸಮರ್ಥಿಸಿಕೊಂಡಿದ್ದಾರೆ.
ಅಹಮದಾಬಾದ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧದ ವಿಶ್ವಕಪ್ ಆರಂಭಿಕ ಪಂದ್ಯದಲ್ಲಿ ಡೇವಿಡ್ ಮಲಾನ್ 14 ರನ್‌ಗಳಿಗೆ ಔಟಾದರು. ಆದರೆ ಅವರು ಧರ್ಮಶಾಲಾದಲ್ಲಿ ಉತ್ತಮ ಬ್ಯಾಟಿಂಗ್ ಪಿಚ್‌ನಲ್ಲಿ ತಮ್ಮ ಬ್ಯಾಟಿಂಗ್ ಲಯಕ್ಕೆ ವಾಪಸ್ಸಾಗಿದ್ದಾರೆ.
ಡೇವಿಡ್ ಮಲಾನ್ ತಂದೆಯಾದ ರಜೆಯಿಂದ ಹಿಂದಿರುಗಿದ ನಂತರ, ಕಳೆದ ತಿಂಗಳು ದಕ್ಷಿಣ ಆಫ್ರಿಕಾ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ 96 ರನ್ ಗಳಿಸಿದರು. ಸರಣಿಯ ನಾಲ್ಕನೇ ಮತ್ತು ಅಂತಿಮ ಏಕದಿನ ಪಂದ್ಯದಲ್ಲಿ ಅದೇ ಬ್ಯಾಟಿಂಗ್ ಫಾರ್ಮ್ ಅನುಸರಿಸಿ 114 ಎಸೆತಗಳಲ್ಲಿ 127 ರನ್ ಗಳಿಸಿದರು. ಬೆನ್ನು ಸೆಳೆತದಿಂದಾಗಿ ಖಾಯಂ ಆರಂಭಿಕ ಆಟಗಾರ ಜೇಸನ್ ರಾಯ್ ಅವರು ಎಲ್ಲಾ 4 ಪಂದ್ಯಗಳಿಂದ ಹೊರಗುಳಿದಿದ್ದರು.