ಭಾರತ vs ಇಂಗ್ಲೆಂಡ್: ಚೆಂಡು ವಿರೂಪಗೊಳಿಸುವ ಕಳ್ಳಾಟ ಆಡಿದ್ರಾ ಇಂಗ್ಲೆಂಡ್ ಆಟಗಾರರು?

ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯ ಎರಡನೇ ಪಂದ್ಯ ಲಾರ್ಡ್ಸ್ ಅಂಗಳದಲ್ಲಿ ನಡೆಯುತ್ತಿದೆ. ಎರಡು ತಂಡಗಳು ಕೂಡ ಸಾಕಷ್ಟು ಪೈಪೋಟಿಯ ಪ್ರದರ್ಶನ ನೀಡುತ್ತಿರುವ ಕಾರಣದಿಂದಾಗಿ ಪಂದ್ಯದಲ್ಲಿ ಫಲಿತಾಂಶದ ಬಗ್ಗೆ ಸಾಕಷ್ಟು ಕುತೂಹಲ ಮೂಡಿದೆ. ಈ ಮಧ್ಯೆ ನಾಲ್ಕನೇ ದಿನದಲ್ಲಿ ಇಂಗ್ಲೆಂಡ್ ಆಟಗಾರರ ಒಂದು ವರ್ತನೆ ಕಳ್ಳಾಟದ ಅನುಮಾನ ಮೂಡಿಸಿದೆ. ಚೆಂಡನ್ನು ವಿರೂಪಗೊಳಿಸುವ ಪ್ರಯತ್ನ ನಡೆಸಿದರಾ ಎಂಬ ಪ್ರಶ್ನೆ ಉದ್ಭವಿಸುವಂತೆ ಮಾಡಿದೆ. ಈ ಬಗ್ಗೆ ಟ್ವಿಟ್ಟರ್‌ನಲ್ಲಿ ಕೂಡ ಈಗ ಸಾಕಷ್ಟು ಬಿಸಿ ಬಿಸಿ ಚರ್ಚೆಗಳು ಆರಂಭವಾಗಿದೆ.
ನಾಲ್ಕನೇ ದಿನದಾಟದ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ಇಬ್ಬರು ಆಟಗಾರರು ಚೆಂಡು ನೆಲದಲ್ಲಿರುವಂತೆ ಚೆಂಡಿನ ಮೇಲೆ ತಮ್ಮ ಶೂಗಳ ಸ್ಪೈಕ್‌ಅನ್ನು ಇಟ್ಟು ಅನುಮಾನಾಸ್ಪದ ರೀತಿಯಲ್ಲಿ ವರ್ತಿಸಲಾಗಿದೆ. ಬಳಿಕ ಹಾಗೆಯೇ ಕಾಲಿನಿಂದ ತಳ್ಳಿ ಇನ್ನೋರ್ವ ಆಟಗಾರನಿಗೆ ಚೆಂಡನ್ನು ಪಾಸ್ ಮಾಡಲಾಗಿದೆ. ಆ ಆಟಗಾರ ಕೂಡ ಚೆಂಡಿನ ಮೇಲೆ ಘಾಸಿಯಾಗುವಂತೆ ಮಾಡುವ ಪ್ರಯತ್ನಗಳು ದೃಶ್ಯದಲ್ಲಿ ದಾಖಲಾಗಿದೆ. ಈ ದೃಶ್ಯದಲ್ಲಿನ ವರ್ತನೆಗಳು ಅನುಮಾನಾಸ್ಪದವಾಗಿ ಕಂಡುಬಂದಿದೆ. ಪಂದ್ಯದ 34ನೇ ಓವರ್‌ನಲ್ಲಿ ಈ ಘಟನೆ ನಡೆದಿದೆ. ಈ ದೃಶ್ಯಗಳನ್ನು ನೇರಪ್ರಸಾರದ ಸಂದರ್ಭದಲ್ಲಿ ಬಿತ್ತರಿಸಲಾಗಿದ್ದು ಅಭಿಮಾನಿಗಳು ಇಂಗ್ಲೆಂಡ್ ಆಟಗಾರರ ವರ್ತನೆಯ ಬಗ್ಗೆ ಆಕ್ರೋಶಗಳನ್ನು ವ್ಯಕ್ತಪಡಿಸುತ್ತಿದ್ದಾರೆ.
ಈ ಬಗ್ಗೆ ಟೀಮ್ ಇಂಡಿಯಾದ ಮಾಜಿ ಆಟಗಾರ ಆಕಾಶ್ ಚೋಪ್ರಾ ಕೂಡ ಟ್ವಿಟ್ಟರ್‌ನಲ್ಲಿ ತಮ್ಮ ಅನುಮಾನವನ್ನು ವ್ಯಕ್ತಪಡಿಸಿದ್ದಾರೆ. "ಬಾಲ್ ಟ್ಯಾಂಪರಿಂಗ್ ಆಗುತ್ತಿದೆಯಾ" ಎಂದು ಆಕಾಶ್ ಚೋಪ್ರಾ ತಮ್ಮ ಅನುಮಾನವನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಕೂಡ ಪ್ರತಿಕ್ರಿಯಿಸುತ್ತಿದ್ದಾರೆ.

ಅನುಮಾನ ವ್ಯಕ್ತಪಡಿಸಿದ ಶಾನ್ ಪೊಲಕ್
ಇನ್ನು ಈ ಸಂದರ್ಭದಲ್ಲಿ ಕಾಮೆಂಟರಿಯಲ್ಲಿದ್ದ ಶಾನ್ ಪೊಲಾಕ್ ಕೂಡ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದು ಈ ರೀತಿಯ ವರ್ತನೆ ಸರಿಯಲ್ಲ ಎಂದಿದ್ದಾರೆ. ಬಳಿಕ ಭಾರತದ ಕಾಮೆಂಟೇಟರ್ ಹರ್ಷ ಬೋಗ್ಲೆ ಕೂಡ ಪ್ರತಿಕ್ರಿಯೆ ನೀಡಿದ್ದು ಈ ವರ್ತನೆಗೆ ವಿರೋಧವನ್ನು ವ್ಯಕ್ತಪಡಿಸಿದರು. ಗಮನಾರ್ಹ ಸಂಗತಿಯೆಂದರೆ ಈ ಘಟನೆಯಾದ ಬಳಿಕವೂ ಚೆಂಡನ್ನು ಬದಲಾಯಿಸದೆ ಅದೇ ಚೆಂಡಿನಲ್ಲಿ ಆಟವನ್ನು ಮುಂದುವರಿಸಲಾಯಿತು. ಈ ವಿಚಾರವಾಗಿ ಶಾನ್ ಪೊಲಕ್ ಪ್ರತಿಕ್ರಿಯಿಸಿದ್ದು ಪಂದ್ಯದ ರೆಫ್ರೀ ಈ ಘಟನೆಯ ಬಗ್ಗೆ ಗಮನಹರಿಸಬೇಕು ಎಂದು ಹೇಳಿದ್ದಾರೆ.

ಆಕಸ್ಮಿಕ ಘಟನೆ ಎಂದ ಸ್ಟುವರ್ಟ್ ಬ್ರಾಡ್
ಇನ್ನು ಈ ಬಗ್ಗೆ ಭಾರತೀಯ ಕ್ರಿಕೆಟ್ ತಂಡದ ಅಭಿಮಾನಿಯೋರ್ವ ಕೇಳಿದ ಪ್ರಶ್ನೆಗೆ ಇಂಗ್ಲೆಂಡ್ ತಮಡದ ವೇಗಿ ಸ್ಟುವರ್ಟ್ ಬ್ರಾಡ್ ಟ್ವಿಟ್ಟರ್‌ನಲ್ಲಿಯೇ ಪ್ರತ್ಯುತ್ತರವನ್ನು ನೀಡಿದ್ದಾರೆ. ಇದೊಂದು ಕೇವಲ ಆಕಸ್ಮಿಕ ಘಟನೆ ಎಂದಿದ್ದಾರೆ ಸ್ಟುವರ್ಟ್ ಬ್ರಾಡ್. "ನೀವು ಈ ಘಟನೆಯ ಸಂಪೂರ್ಣ ದೃಶ್ಯಾವಳಿಯನ್ನು ನೋಡಿರುತ್ತೀರಿ ಎಂದು ಭಾವಿಸುತ್ತೇನೆ. ಇದು ಉದ್ದೇಶಪೂರ್ವವಾಗಿ ಮಾಡಿರುವುದಲ್ಲ. ಇಲ್ಲಿಗೆ ಕಥೆ ಮುಗಿಯಿತು" ಎಂದು ಘಟನೆಗೆ ಇತಿಶ್ರೀ ಹಾಡುವ ಪ್ರಯತ್ನ ನಡೆಸಿದ್ದಾರೆ.

ರೋಚಕ ಹಂತದಲ್ಲಿ ದ್ವಿತೀಯ ಟೆಸ್ಟ್
ಇನ್ನು ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿ ಈಗ ರೋಚಕ ಹಂತವನ್ನು ತಲುಪಿದೆ. ಎರಡನೇ ಇನ್ನಿಂಗ್ಸ್‌ನ ಆರಂಭದಲ್ಲಿ ಭಾರತದ ಮೂರು ವಿಕೆಟ್ ಕೀಳುವ ಮೂಲಕ ಆರಂಭಿಕ ಆಘಾತವನ್ನು ನೀಡುವಲ್ಲಿ ಇಂಗ್ಲೆಂಡ್ ತಂಡ ಯಶಸ್ವಿಯಾಗಿತ್ತು. ಆದರೆ ಎರಡನೇ ಸೆಶನ್‌ನಲ್ಲಿ ಟೀಮ್ ಇಂಡಿಯಾದ ಅನುಭವಿಗಳಾದ ಚೇತೇಶ್ವರ್ ಪೂಜಾರ ಹಾಗೂ ಅಜಿಂಕ್ಯಾ ರಹಾನೆ ಎಚ್ಚರಿಕೆಯ ಪ್ರದರ್ಶನ ನೀಡುವ ಮೂಲಕ ತಂಡಕ್ಕೆ ಆಧಾರವಾಗಿದ್ದಾರೆ. ಎರಡನೇ ಸೆಶನ್‌ನ ಅಂತ್ಯಕ್ಕೆ ಭಾರತ 105 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡಿದೆ. ಈ ಅವಧಿಯಲ್ಲಿ ಭಾರತ 78 ರನ್‌ಗಳ ಮುನ್ನಡೆಯನ್ನು ಸಾಧಿಸಿತ್ತು. ಚೇತೇಶ್ವರ್ ಪೂಜಾರ 29 ರನ್ ಹಾಗೂ ಅಜಿಂಕ್ಯಾ ರಹಾನೆ 24 ರನ್ ಸಿಡಿಸಿ ಕ್ರೀಸ್‌ನಲ್ಲಿದ್ದರು.

ಭಾರತ ಹಾಗೂ ಇಂಗ್ಲೆಂಡ್ ಆಡುವ ಬಳಗ
ಇಂಗ್ಲೆಂಡ್ ಪ್ಲೇಯಿಂಗ್ XI: ರೋರಿ ಬರ್ನ್ಸ್, ಡೊಮಿನಿಕ್ ಸಿಬ್ಲಿ, ಹಸೀಬ್ ಹಮೀದ್, ಜೋ ರೂಟ್ (ನಾಯಕ), ಜಾನಿ ಬೈರ್‌ಸ್ಟೊ, ಜೋಸ್ ಬಟ್ಲರ್ (ವಿಕೆಟ್ ಕೀಪರ್), ಮೊಯೀನ್ ಅಲಿ, ಸ್ಯಾಮ್ ಕರನ್, ಒಲ್ಲಿ ರಾಬಿನ್ಸನ್, ಮಾರ್ಕ್ ವುಡ್, ಜೇಮ್ಸ್ ಆ್ಯಂಡರ್ಸನ್.
ಬೆಂಚ್: ಝ್ಯಾಕ್ ಕ್ರಾಲಿ, ಡೇನಿಯಲ್ ಲಾರೆನ್ಸ್, ಕ್ರೇಗ್ ಓವರ್‌ಟನ್, ಸಾಕಿಬ್ ಮಹಮೂದ್, ಓಲ್ಲಿ ಪೋಪ್, ಜ್ಯಾಕ್ ಲೀಚ್.
ಭಾರತ ಪ್ಲೇಯಿಂಗ್ XI: ರೋಹಿತ್ ಶರ್ಮಾ, ಕೆಎಲ್ ರಾಹುಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ, ರಿಷಭ್ ಪಂತ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಇಶಾಂತ್ ಶರ್ಮಾ, ಜಸ್ಪ್ರೀತ್ ಬೂಮ್ರಾ, ಮೊಹಮ್ಮದ್ ಸಿರಾಜ್.
ಬೆಂಚ್: ಉಮೇಶ್ ಯಾದವ್, ಸೂರ್ಯಕುಮಾರ್ ಯಾದವ್, ಹನುಮ ವಿಹಾರಿ, ರವಿಚಂದ್ರನ್ ಅಶ್ವಿನ್, ಅಕ್ಸರ್ ಪಟೇಲ್, ಅಭಿಮನ್ಯು ಈಶ್ವರನ್, ಪೃಥ್ವಿ ಶಾ, ಮಯಾಂಕ್ ಅಗರ್ವಾಲ್, ವೃದ್ಧಿಮಾನ್ ಸಹಾ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications