
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯಕ್ಕಾಗಿ ವಿಮಾನ ಹತ್ತಲು ಸಜ್ಜಾಗಿದ್ದ ಆರ್ ಅಶ್ವಿನ್ ಕೋವಿಟ್ ಪಾಸಿಟಿವ್ ವರದಿ ಬಂದ ಕಾರಣ ಭಾರತದಲ್ಲಿಯೇ ಉಳಿಯುವಂತಾಗಿತ್ತು. ಆದರೆ ಇದೀಗ ಆರ್ ಅಶ್ವಿನ್ ವಿಚಾರವಾಗಿ ಮಹತ್ವದ ವರದಿ ಲಭ್ಯವಾಗಿದೆ. ಇಂಗ್ಲೆಂಡ್ ವಿರುದ್ಧದ ಸರಣಿಗಾಗಿ ಅನುಭವಿ ಆಟಗಾರ ಅಶ್ವಿನ್ ಮುಂದಿನ ಕೆಲ ದಿನಗಳಲ್ಲಿ ಯುಕೆಗೆ ಆಗಮಿಸಲಿದ್ದು ಅಭ್ಯಾಸ ಪಂದ್ಯಕ್ಕಾಗಿ ಭಾರತ ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ. ಜೂನ್ 24 ರಂದು ಭಾರತ ಅಭ್ಯಾಸ ಪಂದ್ಯದಲ್ಲಿ ಭಾಗಿಯಾಗಲಿದೆ.
ಅಶ್ವಿನ್ ಚೇತರಿಸಿಕೊಳ್ಳದಿದ್ದರೆ ಆಫ್ ಸ್ಪಿನ್ನರ್ ಜಯಂತ್ ಯಾದವ್ ಅವರನ್ನು ಬದಲಿ ಆಟಗಾರನಾಗಿ ಸೇರ್ಪಡೆಗೊಳಿಸಲಾಗುತ್ತದೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ. ಆರ್ ಅಶ್ವಿನ್ ಈ ಸರಣಿಯ ಮೊದಲ ನಾಲ್ಕು ಟೆಸ್ಟ್ ಪಂದ್ಯಗಳು ಕಳೆದ ವರ್ಷ ಇಂಗ್ಲೆಂಟ್‌ನಲ್ಲಿ ನಡೆದಾಗ ಭಾರತ ತಂಡದ ಆಡುವ ಬಳಗದಲ್ಲಿ ಸ್ಥಾನವನ್ನು ಪಡೆದುಕೊಂಡಿರಲಿಲ್ಲ. ಇದು ಸಾಕಷ್ಟ ಚರ್ಚೆಗೂ ಕಾರಣವಾಗಿತ್ತು. ಆದರೆ ಅವರು ಕಳೆದ ಮಾರ್ಚ್‌ನಲ್ಲಿ ಬೆಂಗಳೂರಿನಲ್ಲಿ ನಡೆದ ಶ್ರೀಲಂಕಾ ತಂಡದ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಆಡಿ ಮಿಂಚಿದ್ದಾರೆ. ಆ ಪಂದ್ಯದಲ್ಲಿ ಆರು ವಿಕೆಟ್‌ಗಳನ್ನು ಪಡೆದ ಅಶ್ವಿನ್ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ 100 ವಿಕೆಟ್‌ಗಳನ್ನು ಕಬಳಿಸಿದ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ.
ಆರ್ ಅಶ್ವಿನ್ ಐಸಿಸಿ ಟೆಸ್ಟ್ ಶ್ರೇಯಾಂಕ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಆಲ್‌ರೌಂಡರ್. ಟೆಸ್ಟ್ ಮಾದರಿಯಲ್ಲಿ 450 ವಿಕೆಟ್‌ಗಳ ಮೈಲಿಗಲ್ಲು ತಲುಪಲು ಆರ್ ಅಶ್ವಿನ್‌ಗೆ ಇನ್ನು ಕೇವಲ 8 ವಿಕೆಟ್‌ಗಳ ಅಗತ್ಯವಿದ್ದರೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 700 ವಿಕೆಟ್‌ಗಳ ಮೈಲಿಗಲ್ಲು ತಲುಪಲು 46 ವಿಕೆಟ್‌ಗಳ ಅವಶ್ಯಕತೆಯಿದೆ. ಇನ್ನು ಟೆಸ್ಟ್ ಕ್ರಿಕೆಟ್‌ನಲ್ಲಿ ಬ್ಯಾಟಿಂಗ್‌ನಲ್ಲಿಯೂ ಮಿಂಚುತ್ತಿರುವ ಅಶ್ವಿನ್ 3000 ರನ್ ಪೂರೈಸಲು 69 ರನ್‌ಗಳ ಅಗತ್ಯವಿದೆ.
ಇನ್ನು ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭಾಗಿಯಾಗಲು ಬ್ಯಾಟರ್‌ಗಳಾದ ಶ್ರೇಯಸ್ ಅಯ್ಯರ್ ಮತ್ತು ರಿಷಬ್ ಪಂತ್ ಹಾಗೂ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಈಗಾಗಲೇ ಇಂಗ್ಲೆಂಡ್‌ಗೆ ತಲುಪಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ ತವರಿನಲ್ಲಿ T20 ಸರಣಿ ಅಂತ್ಯವಾದ ಬಳಿಕ ಲೀಸೆಸ್ಟರ್‌ನಲ್ಲಿ ಭಾರತ ಟೆಸ್ಟ್ ತಂಡದ ಇತರ ಆಟಗಾರರನ್ನು ಸೇರಿಕೊಂಡಿದ್ದಾರೆ. ಇನ್ನು ಗಾಯದಿಂದಾಗಿ ಈ ಸರಣಿಯಿಂದ ಹೊರಗುಳಿದಿರುವ ಕೆಎಲ್ ರಾಹುಲ್‌ಗೆ ಬದಲಿ ಆಟಗಾರನ್ನು ಬಿಸಿಸಿಐ ಈವರೆಗೂ ಘೋಷಣೆ ಮಾಡಿಲ್ಲ.
ಟೀಮ್ ಇಂಡಿಯಾ ಸ್ಕ್ವಾಡ್: ರೋಹಿತ್ ಶರ್ಮಾ (ನಾಯಕ), ಶುಬ್ಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಹನುಮ ವಿಹಾರಿ, ರಿಷಭ್ ಪಂತ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್ , ಶ್ರೀಕರ್ ಭಾರತ್ (ವಿಕೆಟ್ ಕೀಪರ್).