
ವಿಶ್ವದ ಶ್ರೀಮಂತ ಫ್ರಾಂಚೈಸಿ ಕ್ರಿಕೆಟ್ ಟೂರ್ನಮೆಂಟ್ ಇಂಡಿಯನ್ ಪ್ರೀಮಿಯರ್ ಲೀಗ್‌ನ ಹದಿನೈದನೇ ಆವೃತ್ತಿ ಕಳೆದ ಭಾನುವಾರ ಮುಕ್ತಾಯವಾಗುತ್ತಿದ್ದಂತೆ, ವಿಶ್ವದ ಹಲವು ಅಂತರರಾಷ್ಟ್ರೀಯ ಕ್ರಿಕೆಟ್ ಸರಣಿಗಳು ಆರಂಭಗೊಳ್ಳುತ್ತಿವೆ. ಹೌದು, ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ವಿಶ್ವದ ಹಲವು ಕ್ರಿಕೆಟಿಗರು ಭಾಗವಹಿಸಿದ್ದ ಕಾರಣ, ಹೆಚ್ಚು ಅಂತರಾಷ್ಟ್ರೀಯ ಕ್ರಿಕೆಟ್ ಸರಣಿಗಳು ಈ 2 ತಿಂಗಳುಗಳಲ್ಲಿ ನಡೆದಿರಲಿಲ್ಲ. ಹೀಗಾಗಿ ಐಪಿಎಲ್ ಮುಗಿಯುತ್ತಿದ್ದಂತೆ ಹಲವು ಸರಣಿಗಳ ಆಯೋಜನೆಯಾಗಿದ್ದು, ಜೂನ್ 17ರಿಂದ ಇಂಗ್ಲೆಂಡ್ ಮತ್ತು ನೆದರ್ಲೆಂಡ್ಸ್ ತಂಡಗಳ ನಡುವೆ 3 ಪಂದ್ಯಗಳ ಏಕದಿನ ಸರಣಿ ಕೂಡ ಆರಂಭಗೊಳ್ಳುತ್ತಿದೆ.
ಈ ಸರಣಿಗೆ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ 14 ಆಟಗಾರರ ತಂಡವನ್ನು ಪ್ರಕಟಿಸಿದ್ದು, 2019ರ ಏಕದಿನ ವಿಶ್ವಕಪ್‌ನಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದ ಇಂಗ್ಲೆಂಡ್ ತಂಡವನ್ನು ನಾಯಕನಾಗಿ ಮುನ್ನಡೆಸಿದ್ದ ಇಯಾನ್ ಮಾರ್ಗನ್ ಈ ಸರಣಿಯಲ್ಲಿಯೂ ಇಂಗ್ಲೆಂಡ್ ತಂಡವನ್ನು ನಾಯಕನಾಗಿ ಮುನ್ನಡೆಸಲಿದ್ದಾರೆ. ಈ ಸರಣಿಗೆ ಪ್ರಕಟಿಸಲಾಗಿರುವ ತಂಡದಲ್ಲಿ ಅನ್ ಕ್ಯಾಪ್ಡ್ ಆಟಗಾರರಾದ ಲ್ಯೂಕ್ ವುಡ್ ಮತ್ತು ಡೇವಿಡ್ ಪೇಯ್ನ್ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಇದು ಲ್ಯೂಕ್ ವುಡ್ ಅವರಿಗೆ ಮೊದಲ ಅಂತರರಾಷ್ಟ್ರೀಯ ಕರೆಯಾಗಿದ್ದರೆ, ಡೇವಿಡ್ ಪೇಯ್ನ್ ಕಳೆದ ಪಾಕಿಸ್ತಾನ ವಿರುದ್ಧದ ಏಕದಿನ ಸರಣಿಗೆ ಪ್ರಕಟವಾಗಿದ್ದ ಇಂಗ್ಲೆಂಡ್ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದರು, ಆದರೆ ಆಡುವ ಅವಕಾಶವನ್ನು ಪಡೆದುಕೊಂಡಿರಲಿಲ್ಲ.
ಇನ್ನು ಇತ್ತಂಡಗಳ ನಡುವಿನ ಈ 3 ಪಂದ್ಯಗಳ ಏಕದಿನ ಸರಣಿ ನೆದರ್ಲೆಂಡ್ಸ್ ನೆಲದಲ್ಲಿ ನಡೆಯಲಿದ್ದು, ನೆದರ್ಲೆಂಡ್ಸ್ ತಂಡಕ್ಕೆ ತವರಿನ ಅನುಕೂಲವಿರಲಿದ್ದರೂ ಸಹ ಇಂಗ್ಲೆಂಡ್ ಬಲಿಷ್ಠತೆಯ ಮುಂದೆ ನೆದರ್ಲೆಂಡ್ಸ್ ಯಶಸ್ವಿಯಾಗುತ್ತಾ ಎಂಬುದೇ ದೊಡ್ಡ ಪ್ರಶ್ನೆಯಾಗಿದೆ.
ನೆದರ್ಲೆಂಡ್ಸ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಗೆ ಪ್ರಕಟವಾದ ಇಂಗ್ಲೆಂಡ್ ತಂಡ: ಇಯಾನ್ ಮಾರ್ಗನ್ (ನಾಯಕ), ಮೊಯಿನ್ ಅಲಿ, ಜೋಸ್ ಬಟ್ಲರ್, ಬ್ರೈಡನ್ ಕಾರ್ಸೆ, ಸ್ಯಾಮ್ ಕರ್ರಾನ್, ಲಿಯಾಮ್ ಲಿವಿಂಗ್‌ಸ್ಟೋನ್, ಡೇವಿಡ್ ಮಲನ್, ಡೇವಿಡ್ ಪೇನ್, ಆದಿಲ್ ರಶೀದ್, ಜೇಸನ್ ರಾಯ್, ಫಿಲ್ ಸಾಲ್ಟ್, ರೀಸ್ ಟೋಪ್ಲಿ, ಡೇವಿಡ್ ವಿಲ್ಲಿ, ಲ್ಯೂಕ್ ವುಡ್
ಪಂದ್ಯಗಳ ವೇಳಾಪಟ್ಟಿ
1ನೇ ಏಕದಿನ ಪಂದ್ಯ ಶುಕ್ರವಾರ 17 ಜೂನ್
2ನೇ ಏಕದಿನ ಪಂದ್ಯ ಭಾನುವಾರ 19 ಜೂನ್
3ನೇ ಏಕದಿನ ಪಂದ್ಯ ಬುಧವಾರ 22 ಜೂನ್