Eng Vs Nz Test: ಹ್ಯಾರಿ ಬ್ರೂಕ್, ಜೋ ರೂಟ್ ಭರ್ಜರಿ ಶತಕ : ಮೊದಲ ದಿನವೇ ಅಬ್ಬರಿಸಿದ ಆಂಗ್ಲರು!

ನ್ಯೂಜಿಲೆಂಡ್‌ನ ವೆಲ್ಲಿಂಗ್ಟನ್‌ನಲ್ಲಿರುವ ಬೇಸಿನ್ ರಿಸರ್ವ್ ಅಂಗಳದಲ್ಲಿ ಇಂಗ್ಲೆಂಡ್ ತಂಡ ಮೊದಲನೇ ದಿನವೇ ಆತಿಥೇಯ ನ್ಯೂಜಿಲೆಂಡ್ ಬೌಲರ್ ಗಳ ವಿರುದ್ಧ ಅಬ್ಬರಿಸಿದರು. ಮೊದಲನೇ ದಿನದಾಟ ಮಳೆಯಿಂದಾಗಿ ಬೇಗನೆ ಅಂತ್ಯಗೊಂಡಿದ್ದು, ಇಂಗ್ಲೆಂಡ್ 65 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು 315 ರನ್ ಗಳಿಸಿದೆ.
ಟಾಸ್ ಗೆದ್ದ ನ್ಯೂಜಿಲೆಂಡ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು. ಅದಕ್ಕೆ ತಕ್ಕಂತೆ ಉತ್ತಮ ಆರಂಭ ಪಡೆಯುವಲ್ಲಿ ಕೂಡ ಯಶಸ್ವಿಯಾಯಿತು. ಜ್ಯಾಕ್ ಕ್ರಾಲಿ 2 ರನ್ ಗಳಿಸಿದ್ದಾಗ ಔಟಾದರೆ, ಬೆನ್ ಡಕೆಟ್ 9 ರನ್ ಗಳಿಸುವಷ್ಟರಲ್ಲಿ ಪೆವಿಲಿಯನ್ ಸೇರಿಕೊಂಡರು.
ಒಲೀ ಪೋಪ್ ಕೂಡ 10 ರನ್ ಗಳಿಸಿ ಔಟಾಗುವ ಮೂಲಕ ಇಂಗ್ಲೆಂಡ್ 21 ರನ್ ಗಳಿಸುವಷ್ಟರಲ್ಲಿ ಆರಂಭಿಕ 3 ವಿಕೆಟ್ ಕಳೆದುಕೊಂಡಿತು. ಟಾಸ್ ಗೆದ್ದು ಬೌಲಿಂಗ್ ಮಾಡಲು ನಿರ್ಧರಿಸಿದ ತಮ್ಮ ನಿರ್ಣಯ ಸರಿ ಇದೆ ಎಂದುಕೊಂಡಿದ್ದ ನ್ಯೂಜಿಲೆಂಡ್ ಬೌಲರ್ ಗಳಿಗೆ ಶಾಕ್ ಕೊಟ್ಟಿದ್ದು ಜೋ ರೂಟ್ ಮತ್ತು ಯುವ ಬ್ಯಾಟರ್ ಹ್ಯಾರಿ ಬ್ರೂಕ್.
ಅನುಭವಿ ಬ್ಯಾಟರ್ ಜೋ ರೂಟ್ ಒಂದು ಕಡೆ ನಿಧಾನವಾಗಿ ರನ್ ಗಳಿಸುತ್ತಿದ್ದರೆ, ಮತ್ತೊಂದು ತುದಿಯಲ್ಲಿ ಅಬ್ಬರಿಸಿದ ಹ್ಯಾರಿ ಬ್ರೂಕ್ ನ್ಯೂಜಿಲೆಂಡ್ ಬೌಲರ್ ಗಳ ಬೆವರಿಳಿಸಿದರು. ಟೆಸ್ಟ್ ಮಾದರಿಯಲ್ಲಿ ಟಿ20 ಬ್ಯಾಟಿಂಗ್ ಮಾಡಿದ ಬ್ರೂಕ್ ತಮ್ಮ 4ನೇ ಟೆಸ್ಟ್ ಶತಕವನ್ನು ದಾಖಲಿಸಿದರು.

ಹ್ಯಾರಿ ಬ್ರೂಕ್ ದಾಖಲೆಯ ಶತಕ
24 ವರ್ಷದ ಹ್ಯಾರಿ ಬ್ರೂಕ್ ಟೆಸ್ಟ್ ಕ್ರಿಕೆಟ್‌ನಲ್ಲಿ ಅಸಾಧಾರಣ ಪ್ರದರ್ಶನ ನೀಡುತ್ತಿದ್ದಾರೆ. ತಮ್ಮ 6ನೇ ಟೆಸ್ಟ್ ಪಂದ್ಯವನ್ನಾಡುತ್ತಿರುವ ಬ್ರೂಕ್ 9 ಇನ್ನಿಂಗ್ಸ್‌ಗಳಿಂದ 4ನೇ ಶತಕವನ್ನು ದಾಖಲಿಸಿದ್ದಾರೆ. ಮೊದಲನೇ ದಿನಾಟದ ಅಂತ್ಯಕ್ಕೆ 169 ಎಸೆತಗಳಲ್ಲಿ 24 ಬೌಂಡರಿ 5 ಭರ್ಜರಿ ಸಿಕ್ಸರ್ ಸಹಿತ ಅಜೇಯ 184 ರನ್ ಗಳಿಸಿದ್ದಾರೆ.
ಎರಡನೇ ದಿನಕ್ಕೆ ವಿಕೆಟ್ ಕಾಯ್ದುಕೊಂಡಿರುವ ಹ್ಯಾರಿ ಬ್ರೂಕ್ ತಮ್ಮ ಚೊಚ್ಚಲ ದ್ವಿಶತಕ ಸಿಡಿಸುವ ಉತ್ಸಾಹದಲ್ಲಿದ್ದಾರೆ. 9 ಟೆಸ್ಟ್ ಇನ್ನಿಂಗ್ಸ್‌ಗಳಿಂದ ಅವರು 100.88 ಸರಾಸರಿಯಲ್ಲಿ 807 ರನ್ ಗಳಿಸಿದ್ದಾರೆ.

ಜೋ ರೂಟ್ ತಾಳ್ಮೆಯ ಶತಕ
ಇಂಗ್ಲೆಂಡ್ ತಂಡದ ಅನುಭವಿ ಬ್ಯಾಟರ್ ಜೋ ರೂಟ್ ತಾಳ್ಮೆಯ ಇನ್ನಿಂಗ್ಸ್ ಆಡಿದರು. ಹ್ಯಾರಿ ಬ್ರೂಕ್ ಒಂದು ಕಡೆ ರಭಸವಾಗಿ ರನ್ ಗಳಿಸುತ್ತಿದ್ದರೆ. ರೂಟ್ ಮತ್ತೊಂದು ಕಡೆಯಲ್ಲಿ ತಾಳ್ಮೆಯಿಂದ ರನ್ ಗಳಿಸಿದರು. 182 ಎಸೆತಗಳನ್ನು ಎದುರಿಸಿದ ರೂಟ್ 7 ಬೌಂಡರಿ ಸಹಿತ ಅಜೇಯ 101 ರನ್ ಗಳಿಸಿದ್ದಾರೆ.
ರೂಟ್ ಮತ್ತು ಹ್ಯಾರಿ ಬ್ರೂಕ್ ಜೋಡಿ 4ನೇ ವಿಕೆಟ್‌ಗೆ ಅಜೇಯ 294 ರನ್‌ಗಳನ್ನು ಕಲೆಹಾಕಿದ್ದು, ಎರಡನೇ ದಿನಕ್ಕೆ ವಿಕೆಟ್ ಉಳಿಸಿಕೊಂಡಿದ್ದಾರೆ. ಮಳೆ ಪಂದ್ಯಕ್ಕೆ ಅಡ್ಡಿಪಡಿಸಿದ ಕಾರಣ, ಮೊದಲನೇ ದಿನದಾಟ 65 ಓವರ್ ಗಳಿಗೆ ಮುಕ್ತಾಯವಾಗಿದೆ.
ನ್ಯೂಜಿಲೆಂಡ್ ವಿರುದ್ಧದ 2 ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಇಂಗ್ಲೆಂಡ್ ಮೊದಲನೇ ಪಂದ್ಯದಲ್ಲಿ ಜಯ ಸಾಧಿಸಿದ್ದು 1-0 ಮುನ್ನಡೆ ಸಾಧಿಸಿದೆ. ಎರಡನೇ ಟೆಸ್ಟ್ ಪಂದ್ಯವನ್ನು ಗೆಲ್ಲುವ ಮೂಲಕ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡುವ ಉತ್ಸಾಹದಲ್ಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications