
ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ ತಂಡಗಳು ಟೆಸ್ಟ್ ಸರಣಿಯಲ್ಲಿ ಮುಖಾಮುಖಿಯಾಗಲು ಸಜ್ಜಾಗಿದೆ. ಈ ಸರಣಿಯ ಮೊದಲ ಪಂದ್ಯಕ್ಕೆ ಇಂಗ್ಲೆಂಡ್ ಆಡುವ 11ರ ಬಳಗವನ್ನು ಘೋಷಣೆ ಮಾಡಿದೆ. ಈ ತಂಡದಲ್ಲಿ ಇಂಗ್ಲೆಂಡ್‌ನ ಸ್ಟಾರ್ ವೇಗಿ ಸ್ಟುವರ್ಟ್ ಬ್ರಾಡ್ ಸ್ಥಾನ ಗಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾಗವಹಿಸಲು ಇಂಗ್ಲೆಂಡ್ ತಂಡ ನ್ಯೂಜಿಲೆಂಡ್‌ಗೆ ಪ್ರವಾಸ ಕೈಗೊಂಡಿದೆ. ಮೊದಲ ಪಂದ್ಯ ಫೆಬ್ರವರಿ 16ರಂದು ಮೌಂಟ್ ಮೌಂಗುನ್ಯೂನ ಬೇ ಓವಲ್‌ನಲ್ಲಿ ನಡೆಯಲಿದೆ. ಈ ಪಂದ್ಯಕ್ಕಾಗಿ ಪ್ರವಾಸಿ ಇಂಗ್ಲೆಂಡ್ ತಂಡ ತನ್ನ ಆಡುವ ಬಳಗವನ್ನು ಘೋಷಣೆ ಮಾಡಿದೆ. ಈ ಪಂದ್ಯದಲ್ಲಿ ಬ್ರಾಡ್ ಆಡಲಿದ್ದಾರೆ ಎಂಬುದನ್ನು ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಖಚಿತಪಡಿಸಿದ್ದಾರೆ. ಬ್ರಾಡ್ ತಮ್ಮ ಮೂರನೇ ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದ ಕಾರಣ ಪಾಕಿಸ್ತಾನ ವಿರುದ್ಧದ ಸರಣಿಯಿಂದ ಹೊರಗುಳಿದಿದ್ದರು. ಇದೀಗ ಕಿವೀಸ್ ವಿರುದ್ಧದ ಸರಣಿಯ ಮೂಲಕ ಮತ್ತೆ ತಂಡದಲ್ಲಿ ಆಡಲು ಸಜ್ಜಾಗಿದ್ದಾರೆ.
ಮೊದಲ ಟೆಸ್ಟ್ ಪಂದ್ಯ ಅಹರ್ನಿಶಿಯಾಗಿ ನಡೆಯಲಿದ್ದು ಈ ಪಂದ್ಯಕ್ಕಾಗಿ ಮೂವರು ಸ್ಪೆಶಲಿಸ್ಟ್ ವೇಗಿಗಳನ್ನು ಇಂಗ್ಲೆಂಡ್ ತಂಡ ಕಣಕ್ಕಿಳಿಸಲು ಸಜ್ಜಾಗಿದೆ. ಸ್ಟುವರ್ಟ್ ಬ್ರಾಡ್, ಜೇಮ್ಸ್ ಆಂಡರ್ಸನ್ ಹಾಗೂ ಒಲ್ಲೀ ರಾಬಿನ್ಸನ್ ಕಣಕ್ಕಿಳಿಯಲಿದ್ದಾರೆ. ಇಲ್ಲಿ ಸ್ಟೋನ್ ಹಾಗೂ ಮ್ಯಾಥ್ಯೂ ಪಾಟ್ಸ್ ಆಡುವ ಬಳಗದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲಿ ವಿಫಲವಾಗಿದ್ದಾರೆ.
ಇನ್ನು ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ಅಭ್ಯಾಸ ಪಂದ್ಯದಲ್ಲಿ ಆಡಲು ಇಳಿದಿರಲಿಲ್ಲ. ಅಲ್ಲದೆ ಮಂಗಳವಾರದ ತರಬೇತಿಯಲ್ಲಿ ಕೂಡ ಅವರು ಬೌಲಿಂಗ್ ಮಾಡಿರಲಿಲ್ಲ. ಹಾಗಿದ್ದರೂ ಪಿಂಚ್-ಬಾಲ್ ಟೆಸ್ಟ್‌ನಲ್ಲಿ ಎಲ್ಲಾ ವಿಭಾಗದಲ್ಲಿಯೂ ದಾಳಿಗೆ ತಾನು ಸಿದ್ದ ಎಂದಿದ್ದಾರೆ.
"ಎಲ್ಲವೂ ಅಂದುಕೊಂಡಂತೆಯೇ ಅಗುತ್ತಿದೆ. ಬೌಲಿಂಗ್ ವಿಚಾರವಾಗಿ ಬೌಲಿಂಗ್ ನಡೆಸಲು ಸೂಕ್ತ ಸಮಯದಲ್ಲಿ ನಿರ್ಧಾರ ತೆಗೆದುಕೊಳ್ಳುತ್ತೇನೆ. ಎರಡು ದಿನಘಲ ಅವಕಾಶ ಹೊಂದಿದ್ದು ಅದಕ್ಕೂ ಮುನ್ನ ಅಭ್ಯಾಸಕ್ಕೆ ಎಲ್ಲಾ ರೀತಿಯಲ್ಲೂ ಸಜ್ಜಾಗುತ್ತೇನೆ. ಟೆಸ್ಟ್ ಆರಂಭಕ್ಕೂ ಮುನ್ನ ನಾನು ಎಲ್ಲಾ ರೀತಿಯಲ್ಲೂ ಸಿದ್ಧ ಎಂಬುದನ್ನು ಖಚಿತಪಡಿಸಿಕೊಳ್ಳುತ್ತೇನೆ" ಎಂದಿದ್ದಾರೆ ಇಂಗ್ಲೆಂಡ್ ತಂಡದ ನಾಯಕ ಬೆನ್ ಸ್ಟೋಕ್ಸ್.
ಇನ್ನು ಬೆನ್ ಸ್ಟೋಕ್ಸ್ ನಾಯಕತ್ವದಲ್ಲಿ ಇಂಗ್ಲೆಂಡ್ ತಂಡ ಕಳೆದ ವರ್ಷ ಕೇವಲ ಒಂದು ಟೆಸ್ಟ್ ಪಂದ್ಯದಲ್ಲಿ ಮಾತ್ರವೇ ಸೋಲು ಕಂಡಿದೆ. ಇನ್ನು ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ ತಂಡಗಳು ಕೊನೆಯ ಬಾರಿಗೆ ಇಂಗ್ಲಿಷ್ ನೆಲದಲ್ಲಿ ಮುಖಾಮುಖಿಯಾಗಿದ್ದು ಈ ಸಂದರ್ಭದಲ್ಲಿ ನ್ಯೂಜಿಲೆಂಡ್ ತಂಡವನ್ನು 3-0 ಅಂತರದಿಂದ ಮಣಿಸುವಲ್ಲಿ ಯಶಸ್ವಿಯಾಗಿತ್ತು.
ಇಂಗ್ಲೆಂಡ್ ತಂಡದ ಆಡುವ ಬಳಗ: ಝಾಕ್ ಕ್ರಾಲಿ, ಬೆನ್ ಡಕೆಟ್, ಆಲಿ ಪೋಪ್, ಜೋ ರೂಟ್, ಹ್ಯಾರಿ ಬ್ರೂಕ್, ಬೆನ್ ಸ್ಟೋಕ್ಸ್ (ನಾಯಕ), ಬೆನ್ ಫೋಕ್ಸ್ (ವಿಕೆಟ್ ಕೀಪರ್), ಆಲಿ ರಾಬಿನ್ಸನ್, ಜ್ಯಾಕ್ ಲೀಚ್, ಸ್ಟುವರ್ಟ್ ಬ್ರಾಡ್, ಜೇಮ್ಸ್ ಆಂಡರ್ಸನ್