ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ 3 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ನ್ಯೂಜಿಲೆಂಡ್ ವೇಗದ ಬೌಲರ್ ಮ್ಯಾಟ್ ಹೆನ್ರಿ ದೊಡ್ಡ ದಾಖಲೆ ಬರೆದಿದ್ದಾರೆ. ಮ್ಯಾಟ್ ಹೆನ್ರಿ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಟೆಸ್ಟ್ ಸರಣಿಯ ಎಲ್ಲಾ ಇನ್ನಿಂಗ್ಸ್‌ಗಳಲ್ಲಿ ಒಂದೇ ಆಟಗಾರನ ವಿಕೆಟ್ ಪಡೆದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಸೆಡನ್ ಪಾರ್ಕ್‌ನಲ್ಲಿ ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್ ಪಂದ್ಯದಲ್ಲಿ ಹೆನ್ರಿ ಈ ವಿಶೇಷ ದಾಖಲೆಯನ್ನು ಮಾಡಿದ್ದಾರೆ.
ಮ್ಯಾಟ್ ಹೆನ್ರಿ ಅವರು ಇಂಗ್ಲೆಂಡ್ ವಿರುದ್ಧದ 3 ಟೆಸ್ಟ್ ಪಂದ್ಯಗಳ 6 ಇನ್ನಿಂಗ್ಸ್‌ಗಳಲ್ಲಿ ಜಾಕ್ ಕ್ರಾಲಿ ವಿಕೆಟ್ ಅನ್ನ ಕಬಳಿಸಿದ್ದಾರೆ. ಮ್ಯಾಟ್ ಹೆನ್ರಿ ಬೌಲಿಂಗ್‌ನಲ್ಲಿ 33 ಎಸೆತಗಳನ್ನು ಎದುರಿಸಿದ ಕ್ರಾಲಿ 29 ಎಸೆತಗಳಲ್ಲಿ ಒಂದೇ ಒಂದು ರನ್ ಗಳಿಸಲಿಲ್ಲ. ಹೆನ್ರಿ ವಿರುದ್ಧ ಕ್ರಾಲಿ 30.3 ಸ್ಟ್ರೈಕ್ ರೇಟ್‌ನಲ್ಲಿ ಕೇವಲ 10 ರನ್ ಗಳಿಸಿದ್ದಾರೆ. 2023ರಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ಕ್ರಾಲಿ ಅವರು ಹೆನ್ರಿ ಬೌಲಿಂಗ್‌ನಲ್ಲಿ 18 ಎಸೆತಗಳನ್ನು ಎದುರಿಸಿದ್ದರು.

ನ್ಯೂಜಿಲೆಂಡ್ ವಿರುದ್ಧ ಮೂರನೇ ಟೆಸ್ಟ್‌ನ ಎರಡನೇ ಇನ್ನಿಂಗ್ಸ್‌ನಲ್ಲಿ ಕ್ರಾಲಿ 17 ಎಸೆತಗಳಲ್ಲಿ ಕೇವಲ 5 ರನ್ ಗಳಿಸಿ ಔಟಾದರು. ಇದರೊಂದಿಗೆ ಅವರು ತಮ್ಮ ಹೆಸರಿನಲ್ಲಿ ಅನಗತ್ಯ ದಾಖಲೆಯನ್ನು ಬರೆದರು. ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಕ್ರಾಲಿ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಆರು ಇನ್ನಿಂಗ್ಸ್‌ಗಳಲ್ಲಿ ಒಂದೇ ಬೌಲರ್‌ನಿಂದ ಔಟಾದ ಮೂರನೇ ಬ್ಯಾಟರ್ ಎನಿಸಿಕೊಂಡಿದ್ದಾರೆ. ಇದರೊಂದಿಗೆ ಕ್ರಾಲಿ ಆಸ್ಟ್ರೇಲಿಯಾದ ಗ್ರೆಗ್ ಮ್ಯಾಥ್ಯೂಸ್ ಮತ್ತು ಮ್ಯಾಥ್ಯೂ ಹೇಡನ್ ಅವರ ಕ್ಲಬ್ ಸೇರಿದ್ದಾರೆ. ಮ್ಯಾಟ್ ಹೆನ್ರಿ ಅವರು ಕ್ರಾಲಿ ಅವರನ್ನು ಆರು ಬಾರಿ ಔಟ್ ಮಾಡಿದ್ದಾರೆ.
ಇಂಗ್ಲೆಂಡ್ ವಿರುದ್ಧ ನ್ಯೂಜಿಲೆಂಡ್ ಮೂರು ಪಂದ್ಯಗಳ ಸರಣಿಯಲ್ಲಿ 0-2 ರಿಂದ ಹಿನ್ನಡೆ ಅನುಭವಿಸಿದೆ. ಇದೀಗ ಅಂತಿಮ ಟೆಸ್ಟ್ ಪಂದ್ಯದಲ್ಲಿ ಕಿವೀಸ್ ಪಡೆ ಗೆಲುವಿನ ಉತ್ಸಾಹದಲ್ಲಿದೆ. ಇಂಗ್ಲೆಂಡ್ ವಿರುದ್ಧ ಕಿವೀಸ್ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಪ್ರಾಬಲ್ಯ ಸಾಧಿಸಿದೆ.
ಟಾಮ್ ಲ್ಯಾಥಮ್ ಮತ್ತು ಮಿಚೆಲ್ ಸ್ಯಾಂಟ್ನರ್ ಅವರ ಅರ್ಧಶತಕಗಳ ನೆರವಿನಿಂದ ಕಿವೀಸ್ ಪಡೆ ಮೊದಲ ಇನ್ನಿಂಗ್ಸ್‌ನಲ್ಲಿ 347 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಆರಂಭಿಸಿದ ಇಂಗ್ಲೆಂಡ್ ಕೇವಲ 143 ರನ್‌ಗಳಿಗೆ ಆಲೌಟಾಯಿತು. ಇಂಗ್ಲೆಂಡ್ ಪರ ಜೋ ರೂಟ್ 32 ರನ್ ಗಳಿಸಿ ಗರಿಷ್ಠ ಸ್ಕೋರರ್ ಆದರು. ಮತ್ತೊಂದೆಡೆ ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಸರಣಿಯಲ್ಲಿ ಅತಿಹೆಚ್ಚು ರನ್ ಗಳಿಸಿರುವ ಹ್ಯಾರಿ ಬ್ರೂಕ್ ಗೋಲ್ಡನ್ ಡಕ್ ಔಟಾದರು. ಕಿವೀಸ್ ಪರ ಮ್ಯಾಟ್ ಹೆನ್ರಿ 4 ವಿಕೆಟ್ ಕಬಳಿಸಿದರೆ, ವಿಲ್ ಒ'ರೂರ್ಕ್ ಮತ್ತು ಮಿಚೆಲ್ ಸ್ಯಾಂಟ್ನರ್ ತಲಾ ಮೂರು ವಿಕೆಟ್ ಪಡೆು ಮಿಂಚಿದರು.
ನ್ಯೂಜಿಲೆಂಡ್ ಎರಡನೇ ಇನ್ನಿಂಗ್ಸ್‌ನಲ್ಲಿ 453 ರನ್ ಗಳಿಸುವ ಮೂಲಕ ಇಂಗ್ಲೆಂಡ್ ಗೆಲುವನ್ನು ದೂರವಿಟ್ಟಿದೆ. ಸ್ಟಾರ್ ಬ್ಯಾಟರ್ ಕೇನ್ ವಿಲಿಯಮ್ಸನ್ 204 ಎಸೆತಗಳಲ್ಲಿ 156 ರನ್ ಗಳಿಸಿ ತಂಡಕ್ಕೆ ಆಸರೆಯಾಗಿದರೆ, ಡೇರಿಲ್ ಮಿಚೆಲ್ ಕೂಡ ಅರ್ಧಶತಕ ಬಾರಿಸಿದ್ದಾರೆ. ಸದ್ಯ ಇಂಗ್ಲೆಂಡ್ ಮೂರನೇ ದಿನದಾಟಕ್ಕೆ 2 ವಿಕೆಟ್ ಕಳೆದುಕೊಂಡು 18 ರನ್ ಗಳಿಸಿದ್ದು, ಗೆಲುವಿಗೆ 640 ರನ್‌ಗಳ ಅವಶ್ಯಕತೆಯಿದೆ.