
ಇಂಗ್ಲೆಂಡ್ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯ ಎರಡು ಪಂದ್ಯಗಳು ಅಂತ್ಯವಾಗಿದ್ದು ಅಂತಿಮ ಪಂದ್ಯ ಭಾನುವಾರ ನಡೆಯಲಿದೆ. ಈ ಪಂದ್ಯಕ್ಕೆ ಮುನ್ನ ಇಂಗ್ಲೆಂಡ್ ತಂಡಕ್ಕೆ ಆಘಾತವೊಂದು ಎದುರಾಗಿದೆ. ತಂದ ವೇಗಿ ಬ್ರೈಡನ್ ಕೇರ್ಸ್ ಗಾಯಗೊಂಡಿದ್ದು ಸರಣಿಯಿಂದ ಹೊರಬಿದ್ದಿದ್ದಾರೆ. ಹೀಗಾಗಿ ಅಂತಿಮ ಪಂದ್ಯಕ್ಕೆ ಅವರು ಅಲಭ್ಯವಾಗಲಿದ್ದಾರೆ.
ಈ ಸರಣಿಯ ಮೊದಲ ಪಂದ್ಯದ ಸಂದರ್ಭದಲ್ಲಿ ವೇಗದ ಬೌಲರ ಬ್ರೇಡನ್ ಕೇರ್ಸ್ ಗಾಯಕ್ಕೆ ತುತ್ತಾಗಿದ್ದರು. ಹೀಗಾಗಿ ಎರಡನೇ ಪಂದ್ಯದಲ್ಲಿ ಕಣಕ್ಕಿಳಿದಿರಲಿಲ್ಲ. ಶನುವಾರ ಅವರು ಇಂಗ್ಲೀಷ್ ಸ್ಕ್ವಾಡ್ ತೊರೆದಿದ್ದಾರೆ. ಮುಂದಿನ ಒಂದು ವಾರಗಳ ಕಾಲ ಅವರ ಗಾಯದ ಮೇಲೆ ನಿಗಾ ವಹಿಸಲಾಗುತ್ತದೆ ಎಂಬ ಮಾಹಿತಿಯೂ ದೊರೆತಿದೆ.
ದಕ್ಷಿಣ ಆಫ್ರಿಕಾ ವಿರುದ್ಧ ಶುಕ್ರವಾರ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಕೇರ್ಸ್ ಹಾಗೂ ಮ್ಯಾಥ್ಯೂ ಪಾಟ್ಸ್ ಕಣಕ್ಕಿಳಿದಿರಲಿಲ್ಲ. ಓಲ್ಡ್ ಟ್ರಾಫಾರ್ಡ್‌ನಲ್ಲಿ ನಡೆದ ಪಂದ್ಯದಲ್ಲಿ ಈ ಆಟಗಾರರ ಬದಲಿಗೆ ಡೇವಿಡ್ ವಿಲ್ಲಿ ಹಾಗೂ ರಿಸ್ ಪಾಪ್ಲಿ ಆಡಿದ್ದರು. ಈ ಸರಣಿಯ ಮೊದಲ ಪಂದ್ಯದಲ್ಲಿ ಆಡಿದ್ದ ಕೇರ್ಸ್ 14 ರನ್ ಗಳಿಸಿದ್ದಲ್ಲದೆ ಬೌಲಿಂಗ್‌ನಲ್ಲಿ ಹೆನ್ರಿಕ್ ಕ್ಲಾಸಿನ್ ಅವರ ಪ್ರಮುಖ ವಿಕೆಟ್ ಪಡೆದುಕೊಂಡಿದ್ದರು.
ಮೊದಲ ಪಂದ್ಯದಲ್ಲಿ ಹೀನಾಯವಾಗಿ ಸೋತ ಇಂಗ್ಲೆಂಡ್: ಇನ್ನು ದಕ್ಷೀಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಹೀನಾಯ ಪ್ರದರ್ಶನ ನಿಡಿ ಸೋಲು ಅನುಭವಿಸಿತ್ತು. ದಕ್ಷಿಣ ಆಫ್ರಿಕಾ ಭರ್ಜರಿ ಬ್ಯಾಟಿಂಗ್ ನಡೆಸಿ ಈ ಪಂದ್ಯದಲ್ಲಿ 333 ರನ್‌ಗಳನ್ನು ಗಳಿಸಿತ್ತು. ವಾನ್ ಡರ್ ಡಸೆನ್ ಅಮೋಘ ಶತಕ ಸಿಡಿಸಿ ಮಿಂಚಿದ್ದರು. ಜನ್ನೆಮನ್ ಮಲನ್ ಹಾಗೂ ಮಾರ್ಕ್ರಮ್ ಕೂಡ ಅರ್ಥ ಶತಕ ಸಿಡಿಸಿದ್ದರು. ಇದಕ್ಕೆ ಪ್ರತಿಯಾಗಿ ಬ್ಯಾಟಿಂಗ್ ನಡೆಸಿದ ಇಂಗ್ಲೆಂಡ್ ತಂಡದ ಪರವಾಗಿ ಅಕ್ರ ಕ್ರಮಾಂಕದ ಆಟಗಾರರಿಂದ ಉತ್ತಮ ಪ್ರದರ್ಶನ ಬಂದಿದ್ದರೂ ಕೆಳ ಕ್ರಮಾಂಕದ ಆಟಗಾರರ ವೈಫಲ್ಯದಿಂದಾಗಿ 62 ರನ್‌ಗಳ ಬೃಹತ್ ಅಂತರದಿಂದ ಸೋಲು ಅನುಭವಿಸಿತ್ತು.
ಇನ್ನು ಮಳೆಯಿಂದ ಅಡ್ಡಿಯಾಗಿದ್ದ ಎರಡನೇ ಪಂದ್ಯದ 29 ಓವರ್‌ಗಳ ಪಂದ್ಯವಾಗಿ ಬದಲಾಗಿತ್ತು. ಇದರಲ್ಲಿ ಮೊದಲಿಗೆ ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡ 201 ರನ್‌ಗಳಿಸಿ ಆಲೌಟ್ ಆಗಿತ್ತು. ಇದಕ್ಕೆ ಪ್ರತಿಯಾಗಿ ಬ್ಯಾಟಿಂಗ್ ನಡೆಸಿದ ಆಫ್ರಿಕಾ ಪಡೆ ಕೇವಲ 83 ರನ್‌ಗಳಿಗೆ ಆಲೌಟ್ ಆಯಿತು. ಈ ಮೂಲಕ 118 ರನ್‌ಗಳ ಬೃಹತ್ ಗೆಲುವು ಸಾಧಿಸುವಲ್ಲಿ ಆತಿಥೇಯ ಇಂಗ್ಲೆಂಡ್ ಯಶಸ್ವಿಯಾಗಿದೆ. ಇದೀಗ ಸರಣಿಯಲ್ಲಿ ಎರಡು ತಂಡಗಳು ಕೂಡ ತಲಾ ಒಂದು ಗೆಲುವು ಸಾಧಿಸಿರುವ ಕಾರಣ ಭಾನುವಾರದ ಪಂದ್ಯ ನಿರ್ಣಾಯಕವೆನಿಸಿದೆ.
ಸ್ಕ್ವಾಡ್‌ಗಳು ಹೀಗಿದೆ: ಇಂಗ್ಲೆಂಡ್: ಜೇಸನ್ ರಾಯ್, ಜಾನಿ ಬೈರ್‌ಸ್ಟೋ, ಫಿಲಿಪ್ ಸಾಲ್ಟ್, ಜೋ ರೂಟ್, ಜೋಸ್ ಬಟ್ಲರ್ (ನಾಯಕ & ವಿಕೆಟ್ ಕೀಪರ್), ಲಿಯಾಮ್ ಲಿವಿಂಗ್‌ಸ್ಟೋನ್, ಮೊಯಿನ್ ಅಲಿ, ಸ್ಯಾಮ್ ಕರ್ರಾನ್, ಡೇವಿಡ್ ವಿಲ್ಲಿ, ಆದಿಲ್ ರಶೀದ್, ರೀಸ್ ಟೋಪ್ಲಿ, ಮ್ಯಾಟಿ ಪಾಟ್ಸ್, ಕ್ರೇಗ್ ಓವರ್ಟನ್
ದಕ್ಷಿಣ ಆಫ್ರಿಕಾ: ಜಾನ್ನೆಮನ್ ಮಲನ್, ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ರಾಸ್ಸಿ ವ್ಯಾನ್ ಡೆರ್ ಡಸ್ಸೆನ್, ಐಡೆನ್ ಮಾರ್ಕ್ರಾಮ್, ಹೆನ್ರಿಚ್ ಕ್ಲಾಸೆನ್, ಡೇವಿಡ್ ಮಿಲ್ಲರ್, ಡ್ವೈನ್ ಪ್ರಿಟೋರಿಯಸ್, ಕೇಶವ್ ಮಹಾರಾಜ್ (ನಾಯಕ), ಅನ್ರಿಚ್ ನಾರ್ಟ್ಜೆ, ಲುಂಗಿ ಎನ್‌ಗಿಡಿ, ತಬ್ರೈಜ್ ಶಮ್ಸಿ, ರೀಜಾ ಹೆಂಡ್ರಿಕ್ಸ್, ಖಯಾ ಜೊಂಡೋ, ಕೈಲ್ ವೆರ್ರೆನ್ನೆ, ಮಾರ್ಕೊ ಜಾನ್ಸೆನ್, ಲಿಜಾದ್ ವಿಲಿಯಮ್ಸ್