
ಲಂಡನ್, ಮೇ 29: ಕ್ರಿಕೆಟ್ ಜನಕರಾದ ಇಂಗ್ಲೆಂಡ್ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಈವರೆಗೆ ಒಮ್ಮೆಯೂ ಪ್ರಶಸ್ತಿ ಗೆದ್ದಿಲ್ಲ ಎಂಬುದು ವಿಪರ್ಯಾಸವೇ ಸರಿ. ಆದರೆ, ಈ ಬಾರಿಯ ವಿಶ್ವಕಪ್‌ನಲ್ಲಿ ಆತಿಥೇಯ ಇಂಗ್ಲೆಂಡ್ ಟ್ರೋಫಿ ಗೆಲ್ಲುವ ಫೇವರಿಟ್ ತಂಡವಾಗಿ ಕಣಕ್ಕಿಳಿಯುತ್ತಿದ್ದು, ದಕ್ಷಿಣ ಆಫ್ರಿಕಾ ವಿರುದ್ಧದ ಉದ್ಘಾಟನಾ ಪಂದ್ಯದಲ್ಲಿ ಶುಭಾರಂಭ ಮಾಡುವ ವಿಶ್ವಾಸದಲ್ಲಿದೆ.
ಇತ್ತಂಡಗಳ ಮುಖಾಮುಖಿ ದಾಖಲೆಗಳ ವಿವರಕ್ಕಾಗಿ ಕ್ಲಿಕ್ ಮಾಡಿ
ಅಂದಹಾಗೆ ಏಕದಿನ ಕ್ರಿಕೆಟ್ ವಿಶ್ವಕಪ್ ಇತಿಹಾಸದಲ್ಲಿ ಇಂಗ್ಲೆಂಡ್ ರೀತಿಯಲ್ಲಿ ದಕ್ಷಿಣ ಆಫ್ರಿಕಾ ಕೂಡ ಒಮ್ಮೆಯೂ ಪ್ರಶಸ್ತಿ ಗೆದ್ದಿಲ್ಲ. ಪ್ರಮುಖವಾಗಿ ಸೆಮಿಫೈನಲ್ಸ್‌ಗೆ ಹಲವು ಬಾರಿ ಪ್ರವೇಶ ಪಡೆದರೂ ಫೈನಲ್‌ವರೆಗು ಮುನ್ನಡೆಯಲು ಸಾಧ್ಯವಾಗದೆ ಒತ್ತಡ ನಿಭಾಯಿಸದೆ ಸೋಲನುಭವಿಸುವ 'ಚೋಕರ್ಸ್' ಎಂದೇ ಕರೆಸಿಕೊಂಡಿದೆ. ಈ ನಿಟ್ಟಿನಲ್ಲಿ ಪ್ರಸಕ್ತ ವಿಶ್ವಕಪ್‌ನಲ್ಲಿ 'ಚೋಕರ್ಸ್' ಹಣೆಪಟ್ಟಿಯನ್ನು ಕಳಚಲು ಹರಿಣ ಪಡೆ ಎದುರು ನೋಡುತ್ತಿದೆ.
ಗೆಲ್ಲುವ ನೆಚ್ಚಿನ ತಂಡ ಯಾವುದು ಎಂದು ಪ್ರಿಡಿಕ್ಟ್ ಮಾಡಲಿ ಇಲ್ಲಿ ಕ್ಲಿಕ್ ಮಾಡಿ
2015ರ ವಿಶ್ವಕಪ್‌ನ ನಂತರ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ಲ್ಲಿನ ಪ್ರದರ್ಶನ ಗಮನಿಸಿದರೆ ಇಂಗ್ಲೆಂಡ್ ಅದ್ಭುತ ಆಟವಾಡಿದ್ದು, ಐಸಿಸಿ ಶ್ರೇಯಾಂಕ ಪಟ್ಟಿಯಲ್ಲಿ ನಂ.1 ಸ್ಥಾನದಲ್ಲಿದೆ. ವಿಶ್ವಕಪ್ ಗೆಲ್ಲಲು ಬೇಕಿರುವ ಬ್ಯಾಟಿಂಗ್ ಮತ್ತು ಬೌಲಿಂಗ್ ಸಾಮರ್ಥ್ಯ ಐಯಾನ್ ಮಾರ್ಗನ್ ಸಾರಥ್ಯದ ಇಂಗ್ಲೆಂಡ್ ತಂಡದಲ್ಲಿದೆ. ಜೊತೆಗೆ ಇತ್ತೀಚೆಗೆ ಅಂತ್ಯಗೊಂಡ ಪಾಕಿಸ್ತಾನ ವಿರುದ್ಧದ 5 ಪಂದ್ಯಗಳ ಸರಣಿಯಲ್ಲಿ 4-0 ಅಂತರದ ಜಯ ದಾಖಲಿಸಿ ಆತ್ಮವಿಶ್ವಾಸ ಅಲೆಯಲ್ಲಿ ವಿಶ್ವಕಪ್ ಅಖಾಡಕ್ಕೆ ಇಳಿಯುತ್ತಿದೆ.
ಜೇಸನ್ ರಾಯ್, ಜಾನಿ ಬೈರ್‌ಸ್ಟೋವ್, ಜೋ ರೂಟ್, ಐಯಾನ್ ಮಾರ್ಗನ್ ಮತ್ತು ಬೆನ್ ಸ್ಟೋಕ್ಸ್ ಇಂಗ್ಲೆಂಡ್ ತಂಡದ ಮ್ಯಾಚ್ ವಿನ್ನರ್‌ಗಳಾಗಿದ್ದಾರೆ.
ಮತ್ತೊಂದೆಡೆ ದಕ್ಷಿಣ ಆಫ್ರಿಕಾ ತಂಡಕ್ಕೆ ಉದ್ಘಾಟನಾ ಪಂದ್ಯಕ್ಕೂ ಮೊದಲೇ ಆಘಾತ ಎದುರಾಗಿದ್ದು, ತಂಡದ ಅನುಭವಿ ವೇಗದ ಬೌಲರ್ ಡೇಲ್ ಸ್ಟೇನ್ ಸೇವೆ ಇಲ್ಲವಾಗಿದೆ. ಭುಜದ ಗಾಯದ ಸಮಸ್ಯೆಯಿಂದ ಚೇತರಿಸಿದ ಸ್ಟೇನ್, ಮೊದಲ ಪಂದ್ಯದಿಂದ ಹೊರಗುಳಿಯುತ್ತಿರುವುದಾಗಿ ತಂಡ ಮಂಗಳವಾರ ತಿಳಿಸಿತ್ತು.
ಆದರೆ, ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುವ ಫೇವರಿಟ್ಸ್‌ಗಳಲ್ಲಿ ದಕ್ಷಿಣ ಆಫ್ರಿಕಾ ಕೂಡ ಒಂದು ಎಂದರೆ ತಪ್ಪಾಗಲಾರದು. ಏಕೆಂದರೆ, ಯಾವುದೇ ಸಂದರ್ಭದಲ್ಲಿ ಪುಟಿದೆದ್ದು ಜಯ ದಕ್ಕಿಸಿಕೊಳ್ಳುವ ಬಲಿಷ್ಠ ತಂಡ ದಕ್ಷಿಣ ಆಫ್ರಿಕಾ. ಲುಂಗಿ ಎನ್ಗಿಡಿ, ಕಗಿಸೊ ರಬಾಡ ತಂಡದ ಪ್ರಮುಖ ಬೌಲಿಂಗ್ ಅಸ್ತ್ರವಾದರೆ, ಬ್ಯಾಟಿಂಗ್ ವಿಭಾಗದಲ್ಲಿಕ್ವಿಂಟನ್ ಡಿ'ಕಾಕ್, ಹಶೀಮ್ ಆಮ್ಲಾ, ಫಾಫ್ ಡು'ಪ್ಲೆಸಿಸ್ ಹಾಗೂ ಡೆವಿಡ್ ಮಿಲ್ಲರ್ ತಂಡದ ಬೆನ್ನೆಲುಬಾಗಿದ್ದಾರೆ. ಇನ್ನು ಲೆಗ್ ಸ್ಪಿನ್ನರ್ ಇಮ್ರಾನ್ ತಾಹಿರ್ ಹರಿಣ ಪಡೆಯ ಟ್ರಂಪ್ ಆಟಗಾರ.
ಇಂಗ್ಲೆಂಡ್: ಐಯಾನ್ ಮಾರ್ಗನ್ (ನಾಯಕ), ಜಾನಿ ಬೈರ್‌ಸ್ಟೋವ್, ಜೇಸನ್ ರಾಯ್, ಜೋ ರೂಟ್, ಬೆನ್ ಸ್ಟೋಕ್ಸ್, ಜೋಸ್ ಬಟ್ಲರ್, ಮೊಯೀನ್ ಅಲಿ, ಕ್ರಿಸ್ ವೋಕ್ಸ್, ಲಿಯಾಮ್ ಡಾಸನ್, ಆದಿಲ್ ರಶೀದ್, ಮಾರ್ಕ್ ವುಡ್, ಟಾಮ್ ಕರ್ರನ್, ಲಿಯಾಮ್ ಪ್ಲಂಕೆಟ್, ಜೇಮ್ಸ್ ವಿನ್ಸ್, ಜೋಫ್ರಾ ಆರ್ಚರ್.
ದಕ್ಷಿಣ ಆಫ್ರಿಕಾ: ಫಾಫ್ ಡು ಪ್ಲೆಸಿಸ್ (ನಾಯಕ), ಏಡೆನ್ ಮಾರ್ಕ್ರಮ್, ಕ್ವಿಂಟನ್ ಡಿ'ಕಾಕ್, ಹಶೀಮ್ ಆಮ್ಲಾ, ಡಾಸಿ ವ್ಯಾನ್ ಡೆರ್ ದುಸ್ಸಾನ್, ಡೇವಿಡ್ ಮಿಲ್ಲರ್, ಆಂಡಿಲ್ ಫೆಹ್ಲುಕ್ವಾಯೊ, ಜೆಪಿ ಡುಮಿನಿ, ಡ್ವೇನ್ ಪ್ರೆಟೊರಿಯಸ್, ಡೇಲ್ ಸ್ಟೇನ್, ಕಗಿಸೊ ರಬಾಡ, ಲುಂಗಿ ಎನ್ಗಿಡಿ, ಎನ್ರಿಚ್ ಎನ್‌ಓರ್ಜೆ, ಇಮ್ರಾನ್ ತಾಹಿರ್, ತಬ್ರೇಜ್ ಶಾಮ್ಸಿ.