
ಇಂಗ್ಲೆಂಡ್ ಕ್ರಿಕೆಟ್ ತಂಡದ ಸ್ಟಾರ್ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಅವರ ತಂದೆ ಜೆಡ್ ಸ್ಟೋಕ್ಸ್ ಮಿದುಳು ಕ್ಯಾನ್ಸರ್‌ನಿಂದ ನಿಧನರಾಗಿದ್ದಾರೆ. ನ್ಯೂಜಿಲೆಂಡ್ ರಗ್ಬಿ ತಂಡದ ಮಾಜಿ ಆಟಗಾರನಾಗಿದ್ದ ಜೆಡ್ ಸ್ಟೋಕ್ಸ್ ಸುದೀರ್ಘ ಕಾಲದಿಂದ ಮೆದುಳು ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. 65ನೇ ವಯಸ್ಸಿನಲ್ಲಿ ಅವರು ನಿಧನರಾಗಿದ್ದಾರೆ.
ಜೆಡ್ ಸ್ಟೋಕ್ಸ್ ಅವರ ನಿಧನದ ಬಗ್ಗೆ ವರ್ಕಿಂಗ್ಟನ್ ಟೌನ್ ರಗ್ಬಿ ಕ್ಲಬ್ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿದೆ. ಜೆಡ್ ಸ್ಟೋಕ್ಸ್ ವರ್ಕಿಂಗ್ಟನ್ ಟೌನ್ ಕ್ಲಬ್‌ನ ಪರವಾಗಿ 1982-83ರ ಅವಧಿಯಲ್ಲಿ ಕಣಕ್ಕಿಳಿದಿದ್ದರು. ಬಳಿಕ ಅದೇ ಕ್ಲಬ್‌ನ ಕೋಚ್ ಆಗಿ 2003 ರಲ್ಲಿ ಕರ್ತವ್ಯ ನಿರ್ವಹಿಸಿದ್ದರು.
"ಮಾಜಿ ಆಟಗಾರ ಹಾಗೂ ಕೋಚ್ ಜೆಡ್ ಸ್ಟೋಕ್ಸ್ ಅಗಲಿದ್ದಾರೆ ಎಂಬ ಸುದ್ದಿ ತಿಳಿದು ಅತ್ಯಂತ ದುಃಖ ಉಂಟಾಗಿದೆ. ಅವರ ಸಾಧನೆ ಕ್ಲಬ್ ಇತಿಹಾಸದಲ್ಲಿ ಅಚ್ಚಳಿಯದೆ ಉಳಿಯಲಿದೆ. ಅವರನ್ನು ನಾವು ಕಳೆದುಕೊಂಡಿದ್ದೇವೆ" ಎಂದು ವರ್ಕಿಂಗ್ಟನ್ ಟೌನ್ ಕ್ಲಬ್ ಟ್ವೀಟ್‌ನಲ್ಲಿ ಶೋಕ ವ್ಯಕ್ತಪಡಿಸಿದೆ.
ಬೆನ್ ಸ್ಟೋಕ್ಸ್ ನ್ಯೂಜಿಲೆಂಡ್ ಮೂಲದವರಾಗಿದ್ದು ಇಂಗ್ಲೆಂಡ್ ಕ್ರಿಕೆಟ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಕಳೆದ ಆಗಸ್ಟ್ ತಿಂಗಳಿನಲ್ಲಿ ಇಂಗ್ಲೆಂಡ್ ಬೇಸಿಗೆ ಸರಣಿಯನ್ನು ತಂದೆಯ ಅನಾರೊಗ್ಯದ ಹಿನ್ನೆಲೆಯಲ್ಲಿ ಅರ್ಧಕ್ಕೆ ಮೊಟಕು ಗೊಳಿಸಿ ನ್ಯೂಜಿಲೆಂಡ್‌ಗೆ ಮರಳಿದ್ದರು. ಐಪಿಎಲ್‌ನಲ್ಲೂ ಆರಂಭಿಕ ಎರಡು ವಾರಗಳ ಕಾಲ ಇದೇ ಕಾರಣಕ್ಕೆ ತಪ್ಪಿಸಿಕೊಂಡಿದ್ದರು.
ವರ್ಕಿಂಗ್ಟನ್ ರ್ಟನ್ ಪರವಾಗಿ ಕೋಚ್ ಆಗಿ ಕರ್ತವ್ಯ ನಿರ್ವಹಿಸಲು ಜೆಡ್ ಸ್ಟೋಕ್ಸ್ ಕುಟುಂಬ ಇಂಗ್ಲೆಂಡ್‌ಗೆ ತೆರಳಿತ್ತು. ಆಗ ಬೆನ್‌ಸ್ಟೋಕ್ಸ್‌ಗೆ 12 ವರ್ಷ ವಯಸ್ಸಾಗಿತ್ತು. 2013ರಲ್ಲಿ ಜೆಡ್ ಸ್ಟೋಕ್ಸ್ ಹಾಗೂ ಅವರ ಪತ್ನಿ ಮತ್ತೆ ನ್ಯೂಜಿಲೆಂಡ್‌ನ ಕ್ರೈಸ್ಟ್‌ಚರ್ಚ್‌ಗೆ ಮರಳಿದ್ದರು. ಅದೇ ವರ್ಷ ಬೆನ್ ಸ್ಟೋಕ್ಸ್ ಇಂಗ್ಲೆಂಡ್ ಕ್ರಿಕೆಟ್ ತಂಡಕ್ಕೆ ಪದಾರ್ಪಣೆಯನ್ನು ಮಾಡಿದ್ದರು.