ENG vs AUS: ಆಸ್ಟ್ರೇಲಿಯಾ ಗೆಲುವಿನ ಓಟಕ್ಕೆ ಬ್ರೇಕ್ ಹಾಕಿದ ಇಂಗ್ಲೆಂಡ್
ಇಂಗ್ಲೆಂಡ್ ಪ್ರವಾಸದಲ್ಲಿ ಆಸ್ಟ್ರೇಲಿಯಾ ಅಮೋಘ ಪ್ರದರ್ಶನವನ್ನು ನೀಡುತ್ತಿತ್ತು. ಈಗಾಗಲೇ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದ್ದ ಆಸೀಸ್ ಗೆಲುವಿನ ಓಟಕ್ಕೆ ಇಂಗ್ಲೆಂಡ್ ಬ್ರೇಕ್ ಹಾಕಿದೆ. ಮೂರನೇ ಏಕದಿನ ಪಂದ್ಯವನ್ನು ಗೆದ್ದು ಸರಣಿಯನ್ನು ವಶಕ್ಕೆ ಪಡೆಯುವ ಆಸ್ಟ್ರೇಲಿಯಾ ಆಸೆಗೆ ಪೆಟ್ಟು ಬಿದ್ದಿದೆ. ಈ ಮೂಲಕ ಇಂಗ್ಲೆಂಡ್ ಸರಣಿಯಲ್ಲಿ ಭರ್ಜರಿ ಕಮ್‌ಬ್ಯಾಕ್ ಮಾಡಿದೆ.
ಮಳೆ-ಬಾಧಿತ ಪಂದ್ಯದಲ್ಲಿ, ಆತಿಥೇಯ ತಂಡದ ನಾಯಕ ಹ್ಯಾರಿ ಬ್ರೂಕ್ ಇಂಗ್ಲೆಂಡ್ ಪರ ಅದ್ಭುತ ಶತಕ ಬಾರಿಸಿದರು. ಇದರಿಂದಾಗಿ ಇಂಗ್ಲೆಂಡ್ ತಂಡವು ಡಕ್ವರ್ತ್-ಲೂಯಿಸ್ ನಿಯಮದಂತೆ 46 ರನ್‌ಗಳ ಜಯ ದಾಖಲಿಸಿದೆ. ಇಂಗ್ಲೆಂಡಿನ ಈ ಗೆಲುವು ಆಸ್ಟ್ರೇಲಿಯದ ಸತತ 14 ಪಂದ್ಯಗಳ ಗೆಲುವಿನ ಓಟಕ್ಕೂ ಬ್ರೇಕ್ ಹಾಕಿದೆ. ಭಾರತದಲ್ಲಿ ನಡೆದಿದ್ದ ಏಕದಿನ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ಕೊನೆಯ ಸೋಲನ್ನು ಕಂಡಿತ್ತು. ಅಂದಿನಿಂದ ಆಸ್ಟ್ರೇಲಿಯ ತಂಡ ಏಕದಿನ ಪಂದ್ಯಗಳಲ್ಲಿ ಗೆಲುವಿನ ಅಜೇಯ ಓಟವನ್ನು ನಡೆಸಿತ್ತು.

ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಗೆದ್ದಿರುವ ಪಟ್ಟಿಯಲ್ಲಿ ಆಸ್ಟ್ರೇಲಿಯಾ ಕ್ರಮವಾಗಿ ಮೊದಲ ಹಾಗೂ ಎರಡನೇ ಸ್ಥಾನದಲ್ಲಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸೀಸ್ 50 ಓವರ್‌ಗಳಲ್ಲಿ 7 ವಿಕೆಟ್‌ಗೆ 304 ರನ್ ಸೇರಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಇಂಗ್ಲೆಂಡ್ ಬ್ಯಾಟ್ ಮಾಡುತ್ತಿದ್ದಾಗ 37.4 ಓವರ್‌ಗಳಲ್ಲಿ ಮಳೆ ಆರಂಭವಾಯಿತು. ಆಗ ಇಂಗ್ಲೆಂಡ್ 4 ವಿಕೆಟ್‌ಗೆ 254 ರನ್ ಸೇರಿಸಿತ್ತು. ಮಳೆ ಪಂದ್ಯಕ್ಕೆ ಬಹುವಾಗಿ ಕಾಟ ನೀಡಿದ್ದರಿಂದ ಡಕ್ವರ್ತ್-ಲೂಯಿಸ್ ನಿಯಮದಂತೆ ಇಂಗ್ಲೆಂಡ್ ತಂಡವನ್ನು ವಿಜೇತ ಎಂದು ಘೋಷಿಸಲಾಯಿತು.
ಸ್ಮಿತ್, ಗ್ರೀನ್ ಜೊತೆಯಾಟದ ಸೊಬಗು
ಆಸೀಸ್ ಪರ ಇನಿಂಗ್ಸ್ ಆರಂಭಿಸಿದ ಮ್ಯಾಥ್ಯೂ ಶಾರ್ಟ್ 14, ಮಿಚೆಲ್ ಮಾರ್ಷ್ 24 ಈ ಜೋಡಿ ಉತ್ತಮ ಜೊತೆಯಾಟದ ಕಾಣಿಕೆ ನೀಡುವಲ್ಲಿ ವಿಫಲವಾಯಿತು. ಭರವಸೆಯ ಆಟಗಾರ ಸ್ಟೀವನ್ ಸ್ಮಿತ್ ಹಾಗೂ ಕ್ಯಾಮರೂನ್ ಗ್ರೀನ್ ಜೋಡಿ ಮೂರನೇ ವಿಕೆಟ್‌ಗೆ 96 ಎಸೆತಗಳಲ್ಲಿ 84 ರನ್ ಸೇರಿಸಿತು. ಗ್ರೀನ್ 42 ರನ್ ಬಾರಿಸಿ ಮುನ್ನುಗುತ್ತಿದ್ದಾಗ ಔಟ್ ಆದರು. ಭರವಸೆಯ ಆಟಗಾರ ಸ್ಟೀವನ್ ಸ್ಮಿತ್ 5 ಬೌಂಡರಿ ನೆರವಿನಿಂದ 60 ರನ್ ಸಿಡಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು.
ಮಧ್ಯಮ ಕ್ರಮಾಂಕದಲ್ಲಿ ಅಲೆಕ್ಸ್ ಕ್ಯಾರಿ 7 ಬೌಂಡರಿ, 1 ಸಿಕ್ಸರ್ ಸಹಾಯದಿಂದ ಅಜೇಯ 77 ರನ್ ಸಿಡಿಸಿ ತಂಡಕ್ಕೆ ಆಧಾರವಾದರು. ಉಳಿದಂತೆ ಗ್ಲೇನ್ ಮ್ಯಾಕ್ಸ್‌ವೆಲ್ 30 ಹಾಗೂ ಆರನ್ ಹಾರ್ಡಿ 44 ರನ್ ಸಿಡಿಸಿದರು.

ಇಂಗ್ಲೆಂಡ್ ಕಳಪೆ ಆರಂಭ
ಸವಾಲಿನ ಮೊತ್ತವನ್ನು ಹಿಂಬಾಲಿಸಿದ ಇಂಗ್ಲೆಂಡ್ ಆರಂಭ ಕಳಪೆಯಾಗಿತ್ತು. ಕೇವಲ 11 ರನ್ ಆಗುವಷ್ಟರಲ್ಲಿ ಪ್ರಮುಖ ಎರಡು ವಿಕೆಟ್ ಕಳೆದುಕೊಂಡು ತಂಡ ಸಂಕಷ್ಟಕ್ಕೆ ಸಿಲುಕಿತ್ತು. ಮೂರನೇ ವಿಕೆಟ್‌ಗೆ ವಿಲ್ ಜ್ಯಾಕ್ಸ್ ಹಾಗೂ ಹ್ಯಾರಿ ಬ್ರೂಕ್ ಜೊತೆಗೂಡಿ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದರು. ಈ ಜೋಡಿ 148 ಎಸೆತಗಳಲ್ಲಿ 156 ರನ್ ಸಿಡಿಸಿತು. ವಿಲ್ ಜಾಕ್ಸ್ 9 ಬೌಂಡರಿ, 1 ಸಿಕ್ಸರ್ ಸಹಾಯದಿಂದ 84 ರನ್ ಬಾರಿಸಿ ಔಟ್ ಆದರು. ಇಂಗ್ಲೆಂಡ್ ನಾಯಕ ಹ್ಯಾರಿ ಬ್ರೂಕ್ ಅಮೋಘ ಆಟದ ಪ್ರದರ್ಶನ ನೀಡಿದರು. ಇವರು 13 ಬೌಂಡರಿ, 2 ಸಿಕ್ಸರ್ ಸಹಾಯದಿಂದ ಅಜೇಯ 110 ರನ್ ಬಾರಿಸಿ ತಂಡದ ಗೆಲುವಿನಲ್ಲಿ ಮಿಂಚಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications