ಇಂಗ್ಲೆಂಡ್ ತಂಡ ಆಶಸ್ ಟೆಸ್ಟ್ ಸರಣಿಗೆ ಸಿದ್ಧವಾಗುತ್ತಿದೆ. ಐರ್ಲೆಂಡ್ ವಿರುದ್ಧ ನಡೆದ ಏಕೈಕ ಟೆಸ್ಟ್ ಪಂದ್ಯದಲ್ಲಿ ಅಮೋಘ ಗೆಲುವು ಸಾಧಿಸಿರುವ ಇಂಗ್ಲೆಂಡ್ ಪ್ರತಿಷ್ಠಿತ ಸರಣಿಗೆ ಸಿದ್ಧತೆ ಆರಂಭಿಸಿದೆ. ಈ ಸಂದರ್ಭದಲ್ಲಿ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಫಿಟ್‌ನೆಸ್ ಬಗ್ಗೆ ಅಭಿಮಾನಿಗಳು ಕಳವಳ ವ್ಯಕ್ತಪಡಿಸಿದ್ದಾರೆ. ತಮ್ಮ ಫಿಟ್‌ನೆಸ್ ವಿಚಾರದ ಬಗೆಗಿನ ಪ್ರಶ್ನೆಗಳಿಗೆ ಸ್ವತಃ ಇಂಗ್ಲೆಂಟ್ ಟೆಸ್ಟ್ ನಾಯಕ ಬೆನ್ ಸ್ಟೋಕ್ಸ್ ಪ್ರತಿಕ್ರಿಯೆ ನೀಡಿದ್ದಾರೆ.
ಬೆನ್ ಸ್ಟೋಕ್ಸ್ ಹಲವು ಸಮಯಗಳಿಂದ ಫಿಟ್‌ನೆಸ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಕಳೆದ ಐಪಿಎಲ್ ಟೂರ್ನಿಯಲ್ಲಿಯೂ ಅವರು ಬೆಂಚ್ ಕಾದಿದ್ದೇ ಹೆಚ್ಚು. ಕೇವಲ ಎರಡು ಪಂದ್ಯಗಳಲ್ಲಿ ಮಾತ್ರ ಸ್ಟೋಕ್ಸ್ ಕಣಕ್ಕಿಳಿದಿದ್ದರು. ಇನ್ನು ಐರ್ಲೆಂಡ್ ವಿರುದ್ಧ ನಡೆದ ಟೆಸ್ಟ್ ಪಂದ್ಯದಲ್ಲಿ ಸ್ಟೋಕ್ಸ್ ಬೌಲಿಂಗ್ ನಡೆಸಲು ಕಣಕ್ಕಿಳಿಯಲೇ ಇಲ್ಲ. ಇನ್ನು ಬ್ಯಾಟಿಂಗ್ ನಡೆಸುವ ಅವಕಾಶವೂ ಅವರಿಗೆ ದೊರೆಯಲಿಲ್ಲ. ಹೀಗಾಗಿ ಬೆನ್ ಸ್ಟೋಲ್ಸ್ ಫಿಟ್ ಆಗಿದ್ದಾರಾ ಎಂಬ ಪ್ರಶ್ನೆಗಳು ಅಭಿಮಾನಿಗಳಿಗೆ ಹೆಚ್ಚಾಗಿ ಕಾಡಿತ್ತು. ಈ ಹಿನ್ನೆಲೆಯಲ್ಲಿ ಬೆನ್ ಸ್ಟೊಕ್ಸ್ ತಮ್ಮ ಫಿಟ್‌ನೆಸ್ ಬಗ್ಗೆ ಪ್ರತಿಕ್ರಿಯೆ ನೀಡುವ ಮೂಲಕ ಗೊಂದಲಕ್ಕೆ ತೆರೆ ಎಸೆಳೆಯುವ ಪ್ರಯತ್ನ ಮಾಡಿದ್ದಾರೆ.

ಐರ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಐರ್ಲೆಂಡ್‌ನ ಕರ್ಟೀಸ್ ಕ್ಯಾಂಫರ್ ಅವರ ಕ್ಯಾಚ್ ಪಡೆಯುವ ಸಂದರ್ಭದಲ್ಲಿ ಬೆನ್ ಸ್ಟೋಕ್ಸ್ ನೋವು ಅನುಭವಿಸುತ್ತಿರುವುದು ಕಂಡುಬಂದಿತ್ತು. ಈ ವಿಚಾರವಾಗಿ ಅವರು ಪ್ರತಿಕ್ರಿಯಿಸಿದರು. "ಆ ಕ್ಯಾಚ್ ಪಡೆಯುವ ಸಂದರ್ಭದಲ್ಲಿ ನೆಲಕ್ಕೆ ಬಿದ್ದೆ. ನನ್ನ ತೋಕ ಮೊಣಕಾಲಿನ ಮೇಲೆ ಹೆಚ್ಚಾಗಿ ಬಿದ್ದಿತ್ತು" ಎಂದು ಗಾಯದ ಬಗ್ಗೆ ವಿವರಿಸಿದ್ದಾರೆ ಬೆನ್ ಸ್ಟೋಕ್ಸ್.
ಮುಂದುವರಿದು ಬೆನ್ ಸ್ಟೋಕ್ಸ್ "ನಾನು ಇಂದು ಬೌಲಿಂಗ್ ಮಾಡಿದ್ದೇನೆ. ಇಂಡಿಯನ್ ಪ್ರೀಮಿಯರ್ ಲೀಗ್‌ನಿಂದ ಬಂದ ಬಳಿಕ ನಾನು ಮೊದಲ ಬಾರಿಗೆ ಬೌಲಿಂಗ್ ಅಭ್ಯಾಸ ನಡೆಸಿದ್ದೇನೆ. ಅದರ ಬಗ್ಗೆ ನನಗೆ ಖುಷಿಯಿದೆ. ಗಾಯದ ಬಗ್ಗೆ ಅತಂಕಪಡುವ ಯಾವುದೇ ಅಗತ್ಯವಿಲ್ಲ" ಎಂದಿದ್ದಾರೆ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್.
ಇಂಗ್ಲೆಂಡ್ ನಾಯಕನಾಗಿರುವ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಕಳೆದ ನಾಲ್ಕು ಟೆಸ್ಟ್ ಪಂದ್ಯಗಳಲ್ಲಿ ಕೇವಲ 17 ಓವರ್ ಬೌಲಿಂಗ್ ಮಾತ್ರವೇ ನಡೆಸಿದ್ದಾರೆ. ಇನ್ನು ಒಂದು ಓವರ್ ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರವಾಗಿ ಮಾಡಿದ್ದಾರೆ. ಇನ್ನು ಐರ್ಲೆಂಡ್ ವಿರುದ್ಧದ ಏಕಕ ಟೆಸ್ಟ್ ಪಂದ್ಯದಲ್ಲಿ ಬೆನ್ ಸ್ಟೋಕ್ಸ್ ಬೌಲಿಂಗ್ ಅಥವಾ ಬ್ಯಾಟಿಂಗ್ ಯಾವುದನ್ನೂ ನಡೆಸಿಲ್ಲ.
ಇಂಗ್ಲೆಂಡ್ ಆಡುವ ಬಳಗ: ಬೆನ್ ಡಕೆಟ್, ಝಾಕ್ ಕ್ರಾಲಿ, ಆಲಿ ಪೋಪ್, ಜೋ ರೂಟ್, ಬೆನ್ ಸ್ಟೋಕ್ಸ್ (ನಾಯಕ), ಹ್ಯಾರಿ ಬ್ರೂಕ್, ಜಾನಿ ಬೈರ್‌ಸ್ಟೋವ್ (ವಿಕೆಟ್ ಕೀಪರ್), ಸ್ಟುವರ್ಟ್ ಬ್ರಾಡ್, ಮ್ಯಾಥ್ಯೂ ಪಾಟ್ಸ್, ಜೋಶ್ ಟಂಗ್, ಜ್ಯಾಕ್ ಲೀಚ್
ಬೆಂಚ್: ಕ್ರಿಸ್ ವೋಕ್ಸ್, ಆಲಿ ರಾಬಿನ್ಸನ್, ಮಾರ್ಕ್ ವುಡ್, ಜೇಮ್ಸ್ ಆಂಡರ್ಸನ್, ಡೇನಿಯಲ್ ಲಾರೆನ್ಸ್
ಐರ್ಲಂಡ್ ಆಡುವ ಬಳಗ: ಜೇಮ್ಸ್ ಮೆಕಲ್ಲಮ್, ಪೀಟರ್ ಮೂರ್, ಆಂಡ್ರ್ಯೂ ಬಾಲ್ಬಿರ್ನಿ (ನಾಯಕ), ಹ್ಯಾರಿ ಟೆಕ್ಟರ್, ಪಾಲ್ ಸ್ಟಿರ್ಲಿಂಗ್, ಲೋರ್ಕನ್ ಟಕರ್ (ವಿಕೆಟ್ ಕೀಪರ್), ಕರ್ಟಿಸ್ ಕ್ಯಾಂಫರ್, ಆಂಡಿ ಮೆಕ್‌ಬ್ರೈನ್, ಮಾರ್ಕ್ ಅಡೇರ್, ಫಿಯಾನ್ ಹ್ಯಾಂಡ್, ಗ್ರಹಾಂ ಹ್ಯೂಮ್
ಬೆಂಚ್:ಜಾರ್ಜ್ ಡಾಕ್ರೆಲ್, ಕ್ರೇಗ್ ಯಂಗ್, ಮ್ಯಾಥ್ಯೂ ಫೋಸ್ಟರ್, ಥಾಮಸ್ ಮೇಯಸ್