ಆಶಸ್ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಆಘಾತಕಾರಿಯಾಗಿ ಸೋಲು ಕಂಡಿದೆ. ಈ ಮೂಲಕ ತನ್ನ ಬ್ಯಾಸ್‌ಬಾಲ್ ಶೈಲಿಯ ಆಟದಲ್ಲಿ ಹಿನ್ನಡೆ ಕಂಡಿತು. ಈ ಸೋಲಿನ ಬಳಿಕ ಇಂಗ್ಲೆಂಡ್ ತಂಡದ ಕೆಲ ನಿರ್ಧಾರಗಳ ಬಗ್ಗೆ ಸಾಕಷ್ಟು ಚರ್ಚೆಗಳು, ವಿಮರ್ಶೆಗಳು ನಡೆಯುತ್ತಿದೆ. ಅದರಲ್ಲೂ ಕೆಲ ಕ್ರಿಕೆಟ್ ಪಂಡಿತರು ಇಂಗ್ಲೆಂಡ್‌ನ ಈ ಬ್ಯಾಸ್‌ಬಾಲ್ ಆಟಕ್ಕೆ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.
ಆದರೆ ಇಂಗ್ಲೆಂಡ್ ಕ್ರಿಕೆಟ್ ತಂಡ ತನ್ನ ನಿಲುವಿನಲ್ಲಿ ಯಾವುದೇ ಬದಲಾವಣೆಯಿರುವುದಿಲ್ಲ ಎಂಬುದನ್ನು ಈಗಾಗಲೇ ಸ್ಪಷ್ಟಪಡಿಸಿದೆ. ನಾಯಕ ಬೆನ್ ಸ್ಟೋಕ್ಸ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು ಮುಂದಿನ ಪಂದ್ಯಗಳಲ್ಲಿಯೂ ಇದೇ ಮಾದರಿಯಲ್ಲಿ ಆಟವನ್ನು ಮುಂದುವರಿಸುವುದಾಗಿ ಹೇಳಿದ್ದರು. ಇದೀಗ ಕೋಚ್ ಮೆಕ್ಕಲಮ್ ಕೂಡ ಪ್ರತಿಕ್ರಿಯೆ ನೀಡಿದ್ದು ಇಂಗ್ಲೆಂಡ್ ತಂಡ ಮುಂದಿನ ಪಂದ್ಯಗಳಲ್ಲಿ ಆಸ್ಟ್ರೇಲಿಯಾ ವಿರುದ್ಧ ಮತ್ತಷ್ಟು ಆಕ್ರಮಣಕಾರಿಯಾಗುವ ಸೂಚನೆ ನೀಡಿದ್ದಾರೆ.

"ಅವರು ನಮ್ಮ ರಣತಂತ್ರದ ಪ್ರಕಾರವೇ ಮುಂದಿವರಿಯುತ್ತಾರೆ ಎಂಬ ವಿಶ್ವಾಸವಿದೆ. ಅದು ಬಹಳ ಮುಖ್ಯ. ಯಾಕೆಂದರೆ ಮುಂದೆ ನಾವು ಇದಕ್ಕಿಂತಲೂ ಆಕ್ರಮಣಕಾರಿಯಾಗಿ ಮುನ್ನುಗ್ಗಲಿದ್ದೇವೆ. ನಾವು ಆಡಿದ ರೀತಿ ನಮ್ಮ ಆಟದ ಶೈಲಿಯನ್ನು ಒಪ್ಪಿಕೊಳ್ಳುವಂತೆ ಮಾಡಿದೆ. ಸ್ವಲ್ಪ ಅದೃಷ್ಟ ನಮ್ಮಪಾಳಿಗಿದ್ದರೆ ನಾವು ಫಲಿತಾಂಶದ ತ್ತೊಂದು ಭಾಗದಲ್ಲಿರುತ್ತಿದ್ದೆವು" ಎಂದಿದ್ದಾರೆ ಇಂಗ್ಲೆಂಡ್ ತಂಡದ ಕೋಚ್ ಬ್ರೆಂಡನ್ ಮೆಕ್ಕಲಮ್.
ಇಂಗ್ಲೆಂಡ್ ತಮ್ಮ ಅವಕಾಶಗಳನ್ನು ಬಳಸಿಕೊಂಡು ಆಸ್ಟ್ರೇಲಿಯಾವನ್ನು ಒತ್ತಡಕ್ಕೆ ಸಿಲುಕಿಸಲು ಪ್ರಯತ್ನಿಸುತ್ತದೆ ಎಂದು ಮೆಕ್ಕಲಮ್ ಹೇಳಿಕೆ ನೀಡಿದ್ದಾರೆ. ಆಸ್ಟ್ರೇಲಿಯಾದ ನಾಯಕ ಪ್ಯಾಟ್ ಕಮ್ಮಿನ್ಸ್ 5ನೇ ದಿನದಾಟದಲ್ಲಿ ಆಸ್ಟ್ರೇಲಿಯಾ ಬಹುತೇಕ ಸೋಲಿನ ಅಂಚಿನಲ್ಲಿದ್ದಾಗ ಅಮೋಘ ಹೋರಾಟವನ್ನು ಪ್ರದರ್ಶಿಸಿ ಗೆಲುವಿನತ್ತ ಕೊಂಡೊಯ್ದಿದ್ದರು. ಈ ಅಮೋಘ ಪ್ರದರ್ಶನದಿಮದಾಗಿ ಆಸ್ಟ್ರೇಲಿಯಾ 2 ವಿಕೆಟ್‌ಗಳ ಅಂತರದಿಂದ ಪಂದ್ಯವನ್ನು ಗೆದ್ದುಕೊಂಡಿದೆ.
"ನಮ್ಮ ಹುಡುಗರು ಹಾಕಿರುವ ಪ್ರಯತ್ನದ ಬಗ್ಗೆ ಹೆಮ್ಮೆ ಪಟ್ಟುಕೊಂಡಿರುತ್ತಾರೆ. ಹಾಗಾಗಿ ನಾವು ಲಾರ್ಡ್ಸ್ ಪಂದ್ಯಕ್ಕೆ ಸಾಕಷ್ಟು ಆತ್ಮವಿಶ್ವಾಸದೊಮದಿಗೆ ತೆರಳಲಿದ್ದೇವೆ ಎಂಬ ವಿಶ್ವಾಸದಲ್ಲಿದ್ದೇನೆ. ನಾಉ ಆಟವನ್ನು ಯಾವಾಗಲೂ ಮುಂದುವರಿಸಲು ಬಯಸುತ್ತೇವೆ. ಎದುರಾಳಿಯನ್ನು ಒತ್ತಡಕ್ಕೆ ಸಿಲುಕಿಸುವ ಯಾವೆಲ್ಲಾ ಅವಕಾಶಗಳು ದೊರೆಯುತ್ತದೆಯೋ ಅದನ್ನು ನಾವು ಖಂಡಿತವಾಗಿಯೂ ಸಂಪೂರ್ಣವಾಗಿ ಬಳಸಿಕೊಳ್ಳುತ್ತೇವೆ ಎಂದಿದ್ದಾರೆ ಮೆಕ್ಕಲಮ್.
ಇನ್ನು ಇದಕ್ಕೂ ಮುನ್ನ ನಾಯಕ ಬೆನ್ ಸ್ಟೋಕ್ಸ್ ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದರು. "ಸೋಲು ಅಂದರೆ ಅದು ಸೋಲು. ಆದರೆ ನಾವು ಹೇಗೆ ಕಾರ್ಯನಿರ್ವಹಿಸಲಿದ್ದೇವೆ ಎಂದು ಈಗಾಗಲೇ ಹೇಳಿದ್ದೇವೆ. ಸೋಲಿನಿಂದ ನೋವುಂಟಾಗುತ್ತದೆ ಮತ್ತು ಗೆಲ್ಲುವುದು ಒಂದು ಅದ್ಭುತ ಭಾವನೆ. ಇದು ಸರಿಯಾದ ಸಮಯ ಎಂದುಕೊಂಡು ನಾವು ಮುಂದುವರಿಯುತ್ತೇವೆ. ಈ ರೀತಿಯ ಫಲಿತಾಂಶಗಳ ಮೂಲಕ ನಮ್ಮ ವಿರುದ್ಧ ಫಲಿತಾಂಗಳು ಬಂದಾಗಲೂ ಅದರ ಬಗ್ಗೆ ದೂರುವುದಿಲ್ಲ" ಎಂದು ಪಂದ್ಯ ಮುಕ್ತಾಯದ ಬಳಿಕದ ಕಾ್ಯಕ್ರಮದಲ್ಲಿ ಬೆನ್ ಸ್ಟೋಕ್ಸ್ ಮಾತನಾಡುತ್ತಾ ಪ್ರತಿಕ್ರಿಯಿಸಿದ್ದಾರೆ.
ಇನ್ನು ಈ ಪಂದ್ಯದ ಮೊದಲ ದಿನದಾಟದಲ್ಲಿ ಜೋ ರೂಟ್ ಶತಕ ಸಿಡಿಸಿ ಉತ್ತಮವಾಗಿ ಬ್ಯಾಟಿಂಗ್ ನಡೆಸುತ್ತಿರುವಾಗ ಇಂಗ್ಲೆಂಡ್ ತನ್ನ ಮೊದಲ ಇನ್ನಿಂಗ್ಸನ್ನು ಎಂಟು ವಿಕೆಟ್ ನಷ್ಟಕ್ಕೆ 393 ರನ್‌ಗಳಿಸಿದ್ದಾಗ ಡಿಕ್ಲೇರ್ ಮಾಡಿಕೊಂಡಿತು. ಈ ನಿರ್ಧಾರ ಅನೇಕರನ್ನು ಆಶ್ಚರ್ಯಗೊಳಿಸಿತು. ಆದರೆ ಸ್ಟೋಕ್ಸ್ ಈ ನಿರ್ಧಾರದ ಹಿಂದಿನ ಕಾರಣವನ್ನು ಕೂಡ ವಿವರಿಸಿದ್ದಾರೆ.
"ಇದು ಆಸ್ಟ್ರೇಲಿಯಾದ ಮೇಲೆ ಸವಾರಿ ಮಾಡಲು ನಮಗೆ ಸಿಕ್ಕ ಅವಕಾಶವಾಗಿತ್ತು. ದಿನದ ಕೊನೆಯ 20 ನಿಮಿಷಗಳ ಆಟದಲ್ಲಿ ಯಾವುದೇ ಬ್ಯಾಟ್ಸ್‌ಮನ್ ಔಟಾಗುವುದನ್ನು ಬಯಸುವುದಿಲ್ಲ. ಈ ಹಂತದಲ್ಲಿ ನಾನು ಎರಡು ವಿಕೆಟ್‌ಗಳನ್ನು ಪಡೆಯುವ ಅವಕಾಶವನ್ನು ಗ್ರಹಿಸಿದೆ" ಎಂದು ಸ್ಟೋಕ್ಸ್ ವಿವರಿಸಿದರು.