ಆಗಸ್ಟ್ 5 ಸೋಮವಾರ, ಕಳೆದೊಂದು ದಶಕದಿಂದ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಟ್ರೋಫಿಗಾಗಿ ಭಾರತ ತಂಡ ಹೋರಾಟ ನಡೆಸುತ್ತಿತ್ತು. ಆದರೆ ರಾಹುಲ್ ದ್ರಾವಿಡ್ ಮಾರ್ಗದರ್ಶನದಲ್ಲಿ ರೋಹಿತ್ ಶರ್ಮಾ ನಾಕಯತ್ವದ ಭಾರತ ತಂಡವು 2024ರ ಟಿ20 ವಿಶ್ವಕಪ್ ಗೆದ್ದಿತ್ತು. ಈ ಮೂಲಕ ಟೀಮ್ ಇಂಡಿಯಾ ಐಸಿಸಿ ಟ್ರೋಫಿ ಬರವನ್ನು ನೀಗಿಸಿಕೊಂಡಿತ್ತು.
ಈ ಚುಟುಕು ಟೂರ್ನಿ ಬಳಿಕ ರಾಹುಲ್ ದ್ರಾವಿಡ್ ತಮ್ಮ ಕೋಚ್ ಸ್ಥಾನದಿಂದ ಕೆಳಗಿಳಿದಿದ್ದರು. ಇದಕ್ಕೂ ಮುನ್ನ ನಡೆದ 2023 ಏಕದಿನ ವಿಶ್ವಕಪ್ ಸಂದರ್ಭದಲ್ಲೇ ದ್ರಾವಿಡ್ ಅವರ ಟೀಮ್ ಇಂಡಿಯಾ ಕೋಚ್ ಅಧಿಕಾರಾವಧಿ ಪೂರ್ಣಗೊಂಡಿತ್ತು.

ಆದರೆ, ರೋಹಿತ್ ಶರ್ಮಾ ಮತ್ತು ಬಿಸಿಸಿಐ ಕಾರ್ಯದರ್ಶಿ ಅವರ ಒತ್ತಾಯದ ಮೇರೆಗೆ ದ್ರಾವಿಡ್ ಅವರು ಟೀಮ್ ಇಂಡಿಯಾದ ಹೆಡ್ ಕೋಚ್ ಆಗಿ ಮುಂದುವರೆದಿದ್ದರು. ಇದಾದ ಬಳಿಕ ಟೀಮ್ ಇಂಡಿಯಾ ಟಿ20 ವಿಶ್ವಕಪ್ ಗೆದ್ದು ದ್ರಾವಿಡ್ ಅವರಿಗೆ ಗೌರವ ಸಲ್ಲಿಸಿತ್ತು.
ಇದರೊಂದಿಗೆ ದ್ರಾವಿಡ್ ಅವರ ಭಾರತ ಕ್ರಿಕೆಟ್ ತಂಡದ ಹೆಡ್ ಕೋಚ್ ಒಪ್ಪಂದಾವಧಿ ಕೂಡ ಮುಕ್ತಾಯವಾಗಿದ್ದರಿಂದ ತಮ್ಮ ಹುದ್ದೆಯಿಂದ ಕೆಳಗಿಳಿದಿದ್ದರು. ಇದರ ಬೆನ್ನಲ್ಲೇ ಭಾರತ ತಂಡದ ದಿಗ್ಗಜ ಬ್ಯಾಟರ್ ಗೌತಮ್ ಗಂಭೀರ್ ನೂತನ ಹೆಡ್ ಕೋಚ್ ಆಗಿ ನೇಮಕಗೊಂಡಿದ್ದರು.
ಇಂತಹ ಸಂದರ್ಭದಲ್ಲಿ ರಾಹುಲ್ ದ್ರಾವಿಡ್ ಅವರನ್ನು ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ (ಇಸಿಬಿ) ವೈಟ್ ಬಾಲ್ ಕ್ರಿಕೆಟ್ ತಂಡದ ಹೆಡ್ ಕೋಚ್ ಮಾಡಲು ತೆರೆಮರೆಯಲ್ಲಿ ಕಸರತ್ತು ನಡೆಸುತ್ತಿದೆ ಎಂಬ ಮಾಹಿತಿ ಹೊರಬಿದ್ದಿದೆ.
ಪ್ರಸ್ತುತ ಇಂಗ್ಲೆಂಡ್ ಟೆಸ್ಟ್ ತಂಡಕ್ಕೆ ಬ್ರೆಂಡನ್ ಮೆಕಲಂ ಕೋಚ್ ಆಗಿದ್ದಾರೆ. ಇತ್ತೀಚೆಗೆ ಇಂಗ್ಲೆಂಡ್ ಏಕದಿನ ಮತ್ತು ಟಿ20 ತಂಡದ ಕೋಚ್ ಹುದ್ದೆಯಿಂದ ಕಳೆಗಿಳಿದ ಮ್ಯಾಥ್ಯ ಮೋಟ್ ಅವರ ಸ್ಥಾನ ಖಾಲಿದೆ. ಈ ಜಾಗಕ್ಕೆ ರಾಹುಲ್ ದ್ರಾವಿಡ್ ಆಯ್ಕೆಯಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
2024ರ ಟಿ20 ವಿಶ್ವಕಪ್‌ನಲ್ಲಿ ಬಳಿಕ ಇಂಗ್ಲೆಂಡ್ ಕ್ರಿಕೆಟ್ ತಂಡದಲ್ಲಿ ಆನೇಕ ಬದಲಾವಣೆಗಳು ನಡೆದಿದ್ದು, ಇಂಗ್ಲೆಂಡ್ ತಂಡದ ಕಳಪೆ ಪ್ರದರ್ಶನಕ್ಕಾಗಿ ಕೋಚ್ ಮ್ಯಾಥ್ಯೂ ಮೋಟ್ ಟೀಕೆಗೆ ಗುರಿಯಾಗಿದ್ದರು. ಬಳಿಕ ಮ್ಯಾಥ್ಯ ಮೋಟ್ ಅವರು ತಮ್ಮ ಕೋಚ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಮೋಟ್ ಏಕದಿನ ಮತ್ತು ಟಿ20ಯಲ್ಲಿ ತಂಡದ ಕೋಚ್ ಆಗಿ 4 ವರ್ಷಗಳ ಗುತ್ತಿಗೆ ಪಡೆದಿದ್ದರು.
ಈ ಕುರಿತು ಮಾಧ್ಯಮವೊಂದರ ಜೊತೆ ಪ್ರತಿಕ್ರಿಯಿಸಿರುವ ಇಂಗ್ಲೆಂಡ್ ತಂಡದ ಮಾಜಿ ನಾಯಕ ಇಯಾನ್ ಮಾರ್ಗನ್, ಕೋಚ್ ಸ್ಥಾನಕ್ಕೆ ರಾಹುಲ್ ದ್ರಾವಿಡ್, ರಿಕಿ ಪಾಂಟಿಂಗ್, ಸ್ಟೀಫನ್ ಫ್ಲೆಮಿಂಗ್ ಉತ್ತಮ ಆಯ್ಕೆಯಾಗಿದ್ದಾರೆ. ತಂಡಕ್ಕೆ ಸೂಕ್ತವೆನಿಸುವ ವ್ಯಕ್ತಿಯನ್ನೇ ಕೋಚ್ ಆಗಿ ನೇಮಕ ಮಾಡಬೇಕು ಎಂದಿದ್ದಾರೆ.
ಟಿ20 ವಿಶ್ವಕಪ್ ಗೆಲುವಿನ ಬಳಿಕ ಕೋಚ್ ಸ್ಥಾನದಿಂದ ಕೆಳಗಿಳಿದ ರಾಹುಲ್ ದ್ರಾವಿಡ್ ಐಪಿಎಲ್‌ನಲ್ಲಿ ರಾಜಸ್ತಾನ ರಾಯಲ್ಸ್ ತಂಡಕ್ಕೆ ಕೋಚ್ ಆಗಿ ಮರುಳುತ್ತಾರೆ ಎಂಬ ಚರ್ಚೆಗಳು ನಡೆಯುತ್ತಿದ್ದವು. ಇದೀಗ ಇಂಗ್ಲೆಂಡ್ ವೈಟ್ ಬಾಲ್ ತಂಡಕ್ಕೆ ದ್ರಾವಿಡ್ ಹೆಸರು ಕೇಳಿ ಬಂದಿರುವುದು ಕ್ರಿಕೆಟ್ ಗಲ್ಲಿಯಲ್ಲಿ ಬಿಸಿಬಿಸಿ ಚರ್ಚೆಗೆ ವೇದಿಕೆಯಾಗಿದೆ.