ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಮುಕ್ತಾವಾಗಿದ್ದು ಇದೀಗ ಟೆಸ್ಟ್ ಕ್ರಿಕೆಟ್ ಅಭಿಮಾನಿಗಳು ಆಶಸ್ ಸರಣಿಯ ಮೇಲೆ ಚಿತ್ತ ನೆಟ್ಟಿದ್ದಾರೆ. ಇಂಗ್ಲೆಂಡ್ ತವರಿನಲ್ಲಿ ಈ ಬಾರಿಯ ಆಶಸ್ ಸರಣಿ ನಡೆಯಲಿದ್ದು ಆಸ್ಟ್ರೇಲಿಯಾ ತಂಡ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಗೆದ್ದು ಈ ಸರಣಿಗೆ ಕಣಕ್ಕಿಳಿಯುತ್ತಿದ್ದರೆ 'Bazball' ಮಾದರಿಯಲ್ಲಿ ಯಶಸ್ಸು ಸಾಧಿಸುತ್ತಿರುವ ಇಂಗ್ಲೆಂಡ್ ತಂಡ ಅದೇ ಯಶಸ್ಸನ್ನು ಆಶಸ್ ಸರಣಿಯಲ್ಲಿಯೂ ಮುಂದುವರಿಸುವ ಆತ್ಮವಿಶ್ವಾಸದಲ್ಲಿದೆ.
ಇದೀಗ ಆಶಸ್ ಸರಣಿಯ ಹಿನ್ನೆಲೆಯಲ್ಲಿ ಟೆಸ್ಟ್ ಕ್ರಿಕೆಟ್‌ನಿಮದ ನಿವೃತ್ತಿ ವಾಪಾಸ್ ಪಡೆದು ಆಶಸ್ ಸರಣಿಯಲ್ಲಿ ಭಾಗವಹಿಸಲಿರುವ ಇಂಗ್ಲೆಂಡ್ ತಂಡದ ಆಲ್‌ರೌಂಡರ್ ಮೊಯೀನ್ ಅಲಿ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಅವರು ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ವಾಪಾಸ್ ಪಡೆದುಕೊಂಡ ಬಗ್ಗೆ ಕಾರಣವನ್ನು ವಿವರಿಸಿದ್ದಾರೆ.

ಟೆಸ್ಟ್ ನಾಯಕ ಬೆನ್ ಸ್ಟೋಕ್ಸ್ ಹಾಗೂ ಕೋಚ್ ಬ್ರೆಂಡನ್ ಮೆಕ್ಕಲಮ್ ನಾಯಕತ್ವದಲ್ಲಿ ಟೆಸ್ಟ್ ಆಡುವ ಹಪಾಹಪಿಯನ್ನು ತಡೆದುಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಮೊಯೀನ್ ಅಲಿ ಹೇಳಿಕೊಂಡಿದ್ದಾರೆ. ಆಶಸ್ ಸರಣಿಯ ಮೊದಲ ಎರಡು ಪಂದ್ಯಗಳಿಗೆ ಆಯ್ಕೆ ಮಾಡರುವ ತಂಡದಲ್ಲಿ ಸ್ಥಾನ ಪಡೆದುಕೊಂಡಿರುವ ಅಲಿ ಆಡುವ ಬಳಗದಲ್ಲಿಯೂ ಸ್ಥಾನ ಪಡೆಯುವ ಸಾಧ್ಯತೆ ದಟ್ಟವಾಗಿದೆ.
ಅಉಭವಿ ಸ್ಪಿನ್ನರ್ ಜಾಕ್ ಲೀಚ್ ಗಾಯದಿಂದಾಗಿ ಅಲಭ್ಯವಾಗಿರುವ ಕಾರಣದಿಂದಾಗಿ ಆಲ್‌ರೌಂಡರ್ ಮೊಯೀನ್ ಅಲಿಗೆ ಆಶಸ್ ಸರಣಿಯಲ್ಲಿ ಅವಕಾಶ ದೊರೆತಿದೆ. ಮೊಯೀನ್ ಅಲಿ ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರವಾಗಿ ಕಣಕ್ಕಿಳಿದಿದ್ದು ಚಾಂಪಿಯನ್ ತಂಡದ ಭಾಗವಾಗಿದ್ದರು. ಇನ್ನು 2021ರ ಸೆಪ್ಟೆಂಬರ್‌ನಲ್ಲಿ ಕೊನೆಯ ಟೆಸ್ಟ್ ಪಂದ್ಯವನ್ನಾಡಿದ್ದ ಮೊಯೀನ್ ಅಲಿ ನಂತರ ಟೆಸ್ಟ್ ಮಾದರಿಗೆ ನಿವೃತ್ತಿ ಹೇಳಿದ್ದರು.
ತಂಡದ ನಾಯಕ ಬೆನ್ ಸ್ಟೋಕ್ಸ್ ಹಾಗೂ ಕೋಚ್ ಬ್ರೆಂಡನ್ ಮೆಕ್ಕಲಮ್ ಅವರೊಂದಿಗೆ ಚರ್ಚೆ ನಡೆಸಿದ ಬಳಿಕ ಮೊಯೀನ್ ಅಲಿ ನಿವೃತ್ತಿಯ ನಿರ್ಧಾರದಿಂದ ವಾಪಾಸಾಗಿದ್ದಾರೆ. ಈ ಸಂದರ್ಭದಲಿ ಆಶಸ್ ಸರಣಿಯ ಬಳಿಕವೂ ಟೆಸ್ಟ್ ಮಾದರಿಯಲ್ಲಿ ಮುಂದುವರಿಯುವ ಇರಾದೆ ಇದೆಯಾ ಎಂಬ ಪ್ರಶ್ನೆ ಮೊಯೀನ್ ಅಲಿಗೆ ಎದುರಾಯಿತು. ಈ ಸಂದರ್ಭದಲ್ಲಿ ಅವರು ಸದ್ಯ ನನ್ನ ಗಮನವಿರುವುದು ಆಶಸ್‌ನ ಮೊದಲ ಎರಡು ಪಂದ್ಯಗಳ ಮೇಲೆ ಮಾತ್ರ ಎಂದಿದ್ದಾರೆ.
"ನಿಜಾಂಶವೇನೆಂದರೆ ಇದು ಆಶಸ್. ನಿಜಕ್ಕೂ ಇದೊಂದು ಅತ್ಯಂತ ದೊಡ್ಡ ಸರಣಿ. ಇದರ ಭಾಗವಾಗುವುದು ಬಹಳ ಅದ್ಭುತವಾದ ಅನುಭವ. ಅಲ್ಲದೆ ಈಗ ತಂಡ ಆಡುತ್ತಿರುವ ಆಟ ಉತ್ಸಾಹವನ್ನು ಮತ್ತಷ್ಟು ಹೆಚ್ಚಿಸಿದೆ" ಎಂದಿದ್ದಾರೆ ಮೊಯೀನ್ ಅಲಿ. ತನ್ನ ಬ್ಯಾಟಿಂಗ್ ಶೈಲಿಗೆ ಇದು ಅತ್ಯಂತ ಸೂಕ್ತವಾಗಿದೆ ಎಂದು ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಹೇಳಿರುವುದಾಗಿ ಅಲಿ ಹೇಳಿಕೆ ನೀಡಿದ್ದಾರೆ.
"ನನ್ನಿಂದ ಏನು ನಿರೀಕ್ಷೆ ಮಾಡಬಹುದು ಎಂಬುದರ ಬಗ್ಗೆ ಅವರಿಗೆ ಅರಿವಿದೆ. ಇಲ್ಲಿ ಹೆಚ್ಚು ಮೇಡನ್ ಓವರ್‌ಗಳು ಇರುವುದಿಲ್ಲ. ಎದುರಾಳಿ ಮೇಲೆ ಒತ್ತಡ ಹೇರಲು ಕೆಲ ಕಾಲ ಸಮಯ ಬೇಕಾಬಹುದು. ನನ್ನ ಮುಂದೆ ಏನಿದೆ ಅದಕ್ಕೆ ಮೂರಕವಾಗಿ ನಾನು ಆಡುತ್ತೇನೆ" ಎಂದಿದ್ದಾರೆ ಇಂಗ್ಲೆಂಡ್ ತಂಡದ ಆಲ್‌ರೌಂಡರ್ ಮೊಯೀನ್ ಅಲಿ.