ಈ ತಿಂಗಳಾಂತ್ಯದಲ್ಲಿ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ತಂಡಗಳ ನಡುವಿನ ಪ್ರತಿಷ್ಠಿತ ಆಶಸ್ ಟೆಸ್ಟ್ ಸರಣಿ ಆರಂಭವಾಗಲಿದೆ. ಈ ಬಾರಿ ಇಂಗ್ಲೆಂಡ್ ನೆಲದಲ್ಲಿ ನಡೆಯಲಿರುವ ಈ ಸರಣಿ ಸಾಕಷ್ಟು ಕುತೂಹಲ ಕೆರಳಿಸಿದ್ದು ಎರಡು ತಂಡಗಳು ಕೂಡ ಅದ್ಭುತ ಫಾರ್ಮ್‌ನಲ್ಲಿದ್ದು ಯಾರಿಗೆ ಮೇಲುಗೈ ದೊರೆಯಲಿದೆ ಎಂಬುದು ಕಾತುರತೆ ಮೂಡಿಸಿದೆ. ಈ ಸಂದರ್ಭದಲ್ಲಿ ಇಂಗ್ಲೆಂಡ್ ತಂಡದ ಅನುಭವಿ ವೇಗಿ ಸ್ಟುವರ್ಟ್ ಬ್ರಾಡ್ ಆಸ್ಟ್ರೇಲಿಯಾ ತಂಡಕ್ಕೆ ಕಟು ಎಚ್ಚರಿಕೆ ಸಂದೇಶವೊಂದನ್ನು ರವಾನಿಸಿದ್ದಾರೆ.
ಇಂಗ್ಲೆಂಡ್ ತಂಡ ಪ್ರಸ್ತುತ ಐರ್ಲೆಂಡ್ ವಿರುದ್ಧ ಟೆಸ್ಟ್ ಏಕೈಕ ಟೆಸ್ಟ್ ಪಂದ್ಯವನ್ನು ಆಡುತ್ತಿದ್ದು ಐತಿಹಾಸಿಕ ಲಾರ್ಡ್ಸ್ ಮೈದಾನದಲ್ಲಿ ಈ ಪಂದ್ಯ ಆಯೋಜನೆಗೊಳ್ಳುತ್ತಿದೆ. ಈ ಪಂದ್ಯದ ಮೊದಲ ದಿನದಾಟದಲ್ಲಿ ಸ್ಟೂವರ್ಟ್ ಬ್ರಾಡ್ ಅಮೋಘ ಪ್ರದರ್ಶನ ನೀಡಿದ್ದು ಐದು ವಿಕೆಟ್‌ಗಳ ಗೊಂಚಲು ಪಡೆದು ಅಬ್ಬರಿಸಿದ್ದಾರೆ. ಈ ಮೂಲಕ ಆಶಸ್ ಸರಣಿಗೂ ಮುನ್ನ ಉತ್ತಮ ಲಯದಲ್ಲಿರುವುದನ್ನು ಖಚಿತಪಡಿಸಿದ್ದಾರೆ ಇಂಗ್ಲೆಂಡ್ ವೇಗಿ.

ಐರ್ಲೆಂಡ್ ವಿರುದ್ಧ ನಡೆಯುತ್ತಿರುವ ಟೆಸ್ಟ್ ಸರಣಿಯ ಮೊದಲ ದಿನದಾಟದ ಆರಂಭದಲ್ಲಿಯೇ ಬ್ರಾಡ್ ಐರಿಷ್ ಪಡೆಯ ವಿರುದ್ಧ ಮೇಲುಗೈ ಸಾಧಿಸಲು ಆರಂಭಿಸಿದ್ದರು. ಬ್ರಾಡ್ ತೀಕ್ಷ್ಣ ದಾಳಿಕೆ ತತ್ತರಿಸಿದ ಐರ್ಲೆಂಡ್ ತಂಡ ಈ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 172 ರನ್‌ಗಳಿಸಿ ಆಲೌಟ್ ಆಗಿದೆ. ಉಳಿದ ಐದು ವಿಕೆಟ್‌ಗಳನ್ನು ಮ್ಯಾಥ್ಯೂ ಪಾಟ್ಸ್ ಹಾಗೂ ಜಾಕ್ ಲೀಚ್ ಹಂಚಿಕೊಂಡಿದ್ದಾರೆ.
ಉತ್ತಮ ಲಯದಲ್ಲಿದ್ದೇನೆ ಎಂದ ಬ್ರಾಡ್
ಇನ್ನು ಮೊದಲ ದಿನದಾಟದ ಮುಕ್ತಾಯದ ಬಳಿಕ ಮಾತನಾಡಿದ ಸ್ಟುವರ್ಟ್ ಬ್ರಾಡ್ "ಈ ಕ್ರಿಕೆಟ್ ಋತುವಿನ ಆರಂಭದಲ್ಲಿ ನಾನು ಅದ್ಭುತ ಲಯದಲ್ಲಿದ್ದೇನೆ ಎಂಬ ಭಾವನೆ ಮೂಡುತ್ತಿದೆ. ಅಂತಾರಾಷ್ಟ್ರೀಯ ಋತುವಿನಲ್ಲಿ ಮೊದಲ ಪಂದ್ಯವನ್ನಾಡಲು ಇಳಿದಾಗ ಇದು ನಿಜಕ್ಕೂ ಕೂಡ ಅದ್ಭುತವಾದ ಆರಂಭವಾಗಿದೆ. ನನ್ನ ವಯಸ್ಸಿನಲ್ಲಿ ನಾನು ಆತ್ಮವಿಶ್ವಾಸವನ್ನು ಅವಲಂಬಿಸುವುದಿಲ್ಲ, ನಾನು ಚೆನ್ನಾಗಿ ಬೌಲ್ ಮಾಡಬಲ್ಲೆ ಮತ್ತು ಚೆಂಡಿನ ಮೇಲೇ ನಿಯಂತ್ರಣ ಸಾಧಿಸುವುದು ನನಗೆ ತಿಳಿದಿದೆ. ಆದರೆ ವಿಕೆಟ್‌ಗಳು ದೊರೆತಾದ ಅದು ನಿಮ್ಮಲ್ಲಿ ಮತ್ತಷ್ಟು ಹಿಮ್ಮಸ್ಸು ಮೂಡಿಸುತ್ತದೆ" ಎಂದಿದ್ದಾರೆ ಸ್ಟುವರ್ಟ್ ಬ್ರಾಡ್.
ಸದ್ಯ ಆಸ್ಟ್ರೇಲಿಯಾ ತಂಡ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯವನ್ನಾಡಲು ಸಜ್ಜಾಗುತ್ತಿದೆ. ಅದಾದ ಬಳಿಕ ಆಶಸ್ ಸರಣಿಯಲ್ಲಿ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗಲಿದೆ. ಈ ಬಾರಿ ತವರಿನಲ್ಲಿ ಆಶಸ್ ನಡೆಯುತ್ತಿರುವ ಕಾರಣ ಬ್ರಾಡ್ ಆಸ್ಟ್ರೇಲಿಯಾ ವಿರುದ್ಧ ಮೇಲುಗೈ ಸಾಧಿಸುವ ನಿಟ್ಟಿನಲ್ಲಿ ರಣತಂತ್ರಗಳನ್ನು ಹೆಣೆಯುತ್ತಿದ್ದಾರೆ. ಐರ್ಲೆಂಡ್ ವಿರುದ್ಧದ ಮೊದಲ ದಿನದಾಟದಲ್ಲಿ ದೊರೆಯ ಯಶಸ್ಸು ಅದಕ್ಕೆ ಪೂರಕವಾಗಿದೆ.
ಇಂಗ್ಲೆಂಡ್ ಆಡುವ ಬಳಗ: ಬೆನ್ ಡಕೆಟ್, ಝಾಕ್ ಕ್ರಾಲಿ, ಆಲಿ ಪೋಪ್, ಜೋ ರೂಟ್, ಬೆನ್ ಸ್ಟೋಕ್ಸ್ (ನಾಯಕ), ಹ್ಯಾರಿ ಬ್ರೂಕ್, ಜಾನಿ ಬೈರ್‌ಸ್ಟೋವ್ (ವಿಕೆಟ್ ಕೀಪರ್), ಸ್ಟುವರ್ಟ್ ಬ್ರಾಡ್, ಮ್ಯಾಥ್ಯೂ ಪಾಟ್ಸ್, ಜೋಶ್ ಟಂಗ್, ಜ್ಯಾಕ್ ಲೀಚ್
ಬೆಂಚ್: ಕ್ರಿಸ್ ವೋಕ್ಸ್, ಆಲಿ ರಾಬಿನ್ಸನ್, ಮಾರ್ಕ್ ವುಡ್, ಜೇಮ್ಸ್ ಆಂಡರ್ಸನ್, ಡೇನಿಯಲ್ ಲಾರೆನ್ಸ್
ಐರ್ಲಂಡ್ ಆಡುವ ಬಳಗ: ಜೇಮ್ಸ್ ಮೆಕಲ್ಲಮ್, ಪೀಟರ್ ಮೂರ್, ಆಂಡ್ರ್ಯೂ ಬಾಲ್ಬಿರ್ನಿ (ನಾಯಕ), ಹ್ಯಾರಿ ಟೆಕ್ಟರ್, ಪಾಲ್ ಸ್ಟಿರ್ಲಿಂಗ್, ಲೋರ್ಕನ್ ಟಕರ್ (ವಿಕೆಟ್ ಕೀಪರ್), ಕರ್ಟಿಸ್ ಕ್ಯಾಂಫರ್, ಆಂಡಿ ಮೆಕ್‌ಬ್ರೈನ್, ಮಾರ್ಕ್ ಅಡೇರ್, ಫಿಯಾನ್ ಹ್ಯಾಂಡ್, ಗ್ರಹಾಂ ಹ್ಯೂಮ್
ಬೆಂಚ್:ಜಾರ್ಜ್ ಡಾಕ್ರೆಲ್, ಕ್ರೇಗ್ ಯಂಗ್, ಮ್ಯಾಥ್ಯೂ ಫೋಸ್ಟರ್, ಥಾಮಸ್ ಮೇಯಸ್