ಭಾರತದ ವಿರುದ್ಧ 400 ರನ್‌ಗಳಿಸಲಿದೆಯಂತೆ ಇಂಗ್ಲೆಂಡ್!: ಮಾಜಿ ಕ್ರಿಕೆಟಿಗನ ಆತ್ಮವಿಶ್ವಾಸಕ್ಕೆ ಇಂಗ್ಲೆಂಡಿಗರೇ ದಂಗು!

ಟೆಸ್ಟ್ ಟಿ20 ಬಳಿಕ ಭಾರತ ಹಾಗೂ ಇಂಗ್ಲೆಂಡ್ ತಂಡಗಳು ಏಕದಿನ ಮಾದರಿಯಲ್ಲಿ ಮುಖಾಮುಖಿಯಾಗುತ್ತಿದೆ. ಮೂರು ಪಂದ್ಯಗಳ ಈ ಸರಣಿಯಲ್ಲಿ ಯಾವ ತಂಡ ಮೇಲುಗೈ ಸಾಧಿಸಲಿದೆ ಎಂಬುದು ತೀವ್ರ ಕುತೂಹಲ ಮೂಡಿಸಿದೆ. ಟಿ20 ಸರಣಿಯಲ್ಲಿ ಭಾರತ ಅಮೋಘ ಪ್ರದರ್ಶನದ ಮೂಲಕ 2-1 ಅಂತರದಿಂದ ಸರಣಿ ವಶಪಡಿಸಿಕೊಂಡ ಬಳಿಕ ಏಕದಿನ ಸರಣಿಯಲ್ಲಿಯೂ ಆತ್ಮವಿಶ್ವಾಸದಿಂದ ಕಣಕ್ಕಿಳಿಯುತ್ತಿದೆ.
ಆದರೆ ಈ ಸಂದರ್ಭದಲ್ಲಿ ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕಲ್ ವಾನ್ ಪ್ರತಿಕ್ರಿಯಿಸಿದ್ದು ಕುತೂಹಲಕಾರಿ ಹೇಳಿಕೆ ನೀಡುವ ಮೂಲಕ ಗಮನಸೆಳೆದಿದ್ದಾರೆ. ಭಾರತ ವಿರುದ್ಧದ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ಬ್ಯಾಟಿಂಗ್ ವಿಭಾಗದ ಬಗ್ಗೆ ಭಾರೀ ಆತ್ಮವಿಶ್ವಾಸ ವ್ಯಕ್ತಪಡಿಸಿರುವ ಮೈಕಲ್ ವಾನ್ ಜೋಸ್ ಬಟ್ಲರ್ ಪಡೆ ಏಕದಿನ ಪಂದ್ಯದಲ್ಲಿ 400ಕ್ಕೂ ಅಧಿಕ ರನ್ ಗಳಿಸಿದರೆ ಅಚ್ಚರಿಯಿಲ್ಲ ಎಂದಿದ್ದಾರೆ.

ಭಾರತದ ವಿರುದ್ಧ ರನ್ ಹೊಳೆ ಹರಿಸಲಿದೆಯಂತೆ ಇಂಗ್ಲೆಂಡ್!
ಟಿ20 ಸರಣಿಯಲ್ಲಿ ಮೊದಲ ಎರಡು ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಲು ವಿಫಲವಾಗಿದ್ದ ಇಂಗ್ಲೆಂಡ್ ಅಂತಿಮ ಪಂದ್ಯದಲ್ಲಿ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿತ್ತು. ಆದರೆ ಈ ಪಂದ್ಯದಲ್ಲಿಯೂ ಭಾರತ ಬೃಹತ್ ಮೊತ್ತದ ಅತ್ಯಂತ ಸನಿಹಕ್ಕೆ ಬಂದು ನಿಂತಿತ್ತು. ಇದೀಗ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಅದ್ಭುತ ಪ್ರದರ್ಶನ ನೀಡಲಿದೆ ಎಂದಿದ್ದಾರೆ ಮೈಕಲ್ ವಾನ್. ಕ್ರಿಕೆಟ್ ಬಜ್ ಜೊತೆಗೆ ಮಾತನಾಡುತ್ತಾ ಮೈಕಲ್ ವಾನ್ ಆತ್ಮವಿಶ್ವಾಸದ ಮಾತುಗಳನ್ನಾಡಿದ್ದಾರೆ.

"ನೆದರ್ಲೆಂಡ್ಸ್ ವಿರುದ್ಧ 498 ರನ್‌ಗಳಿಸಿತ್ತು"
"ಇಂಗ್ಲೆಂಡ್ ತಂಡ ಬಲಿಷ್ಠವಾಗಿದೆ. ಈ ಪಿಚ್ ಫ್ಲ್ಯಾಟ್ ಆಗಿದೆ. ನೆದರ್ಲೆಂಡ್ಸ್ ವಿರುದ್ಧ ಇಂಗ್ಲೆಂಡ್ 498 ರನ್‌ಗಳನ್ನು ಗಳಿಸಿತ್ತು, ಇದು ಭಾರತದ ವಿರುದ್ಧವೂ ಅಸಾಧ್ಯವಲ್ಲ. ಆದರೆ ಭಾರತದ ವಿರುದ್ಧ ಇಂಗ್ಲೆಂಡ್ ತಂಡ 400 ರನ್‌ಗಳಿಸಿದರೆ ನನಗೆ ಅಚ್ಚರಿಯಾಗಲಾರದು" ಎಂದಿದ್ದಾರೆ ಮಾಜಿ ಕ್ರಿಕೆಟಿಗ ಮೈಕಲ್ ವಾನ್. ಈ ಮೂಲಕ ಭಾರತದ ವಿರುದ್ಧ ಇಂಗ್ಲೆಂಡ್ ತಂಡ ಬೃಹತ್ ಮೊತ್ತವನ್ನು ಗಳಿಸುವುದು ಖಚಿತ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪೂರ್ಣ ಪ್ರಮಾಣದ ಬ್ಯಾಟಿಂಗ್ ವಿಭಾಗದೊಂದಿಗೆ ಕಣಕ್ಕೆ!
ಇಂಗ್ಲೆಂಡ್ ತಂಡ ಸುದೀರ್ಘ ಕಾಲದ ಬಳಿಕ ಪೂರ್ಣ ಪ್ರಮಾಣದ ಬ್ಯಾಟಿಂಗ್ ಲೈನ್‌ಅಪ್‌ನೊಂದಿಗೆ ಭಾರತ ವಿರುದ್ಧದ ಏಕದಿನ ಸರಣಿಯಲ್ಲಿ ಕಣಕ್ಕಿಳಿಯುತ್ತಿದೆ. 2019ರ ಏಕದಿನ ವಿಶ್ವಕಪ್‌ನ ಫೈನಲ್ ಪಂದ್ಯದ ಬಳಿಕ ಇದೇ ಮೊದಲ ಬಾರಿಗೆ ಈ ಬಲಿಷ್ಠ ಬ್ಯಾಟಿಂಗ್ ವಿಭಾಗ ಜೊತೆಯಾಗಿ ಆಡಲಿಳಿಯುತ್ತಿದೆ. ಆದರೆ ಯಾವ ಸಂಯೋಜನೆಯೊಂದಿಗೆ ಇಂಗ್ಲೆಂಡ್ ಕಣಕ್ಕಿಳಿಯಲಿದೆ ಎಂಬುದನ್ನು ಊಹಿಸುವುದು ಅಸಾಧ್ಯ ಎಂದಿದ್ದಾರೆ ಮೈಕಲ್ ವಾನ್. ಲಿವಿಂಗ್ಸ್ಟನ್ ಖಂಡಿತಾ ಆಡುವ ಬಳಗದಲ್ಲಿ ಸ್ಥಾನ ಪಡೆಯಲಿದ್ದಾರೆ. ಜೋ ರೂಟ್, ಜಾನಿ ಬೈರ್‌ಸ್ಟೋವ್ ಹಾಗೂ ಬೆನ್ ಸ್ಟೋಕ್ಸ್ ಈ ಎಲ್ಲರು ಕುಡ ಆಡುವುದು ಖಚಿತ ಎಂದಿದ್ದಾರೆ ಮೈಕಲ್ ವಾನ್.

ಸ್ಕ್ವಾಡ್ ಹೀಗಿದೆ
ಇಂಗ್ಲೆಂಡ್ ತಂಡ: ಜೋಸ್ ಬಟ್ಲರ್ (ನಾಯಕ & ವಿಕೆಟ್ ಕೀಪರ್), ಜೇಸನ್ ರಾಯ್, ಜಾನಿ ಬೈರ್‌ಸ್ಟೋವ್, ಜೋ ರೂಟ್, ಲಿಯಾಮ್ ಲಿವಿಂಗ್‌ಸ್ಟೋನ್, ಬೆನ್ ಸ್ಟೋಕ್ಸ್, ಮೊಯಿನ್ ಅಲಿ, ಡೇವಿಡ್ ವಿಲ್ಲಿ, ಬ್ರೈಡನ್ ಕಾರ್ಸೆ, ಮ್ಯಾಥ್ಯೂ ಪಾರ್ಕಿನ್ಸನ್, ರೀಸ್ ಟೋಪ್ಲಿ, ಕ್ರೇಗ್ ಓವರ್ಟನ್, ಸ್ಯಾಮ್ ಕರನ್, ಫಿಲಿಪ್ ಸಾಲ್ಟ್, ಹ್ಯಾರಿ ಬ್ರೂಕ್
ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ರಿಷಭ್ ಪಂತ್ (ವಿಕೆಟ್ ಕೀಪರ್), ಶಿಖರ್ ಧವನ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ಯುಜುವೇಂದ್ರ ಚಹಾಲ್, ಅಕ್ಷರ್ ಪಟೇಲ್, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್, ಪ್ರಸಿದ್ಧ್ ಕೃಷ್ಣ, ಮೊಹಮ್ಮದ್ ಸಿರಾಜ್, ಅರ್ಷದೀಪ್ ಸಿಂಗ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications