ಈ ಭಾರತ ತಂಡ ಟಿ20, ಏಕದಿನ ವಿಶ್ವಕಪ್ ಹಾಗೂ ಚಾಂಪಿಯನ್ಸ್ ಟ್ರೋಫಿಯನ್ನು ಗೆಲ್ಲಬೇಕು ಎಂದ ಮೈಕಲ್ ವಾನ್

ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿದ ಭಾರತ 10 ವಿಕೆಟ್‌ಗಳ ಅಂತರದಿಂದ ಗೆಲುವು ಸಾಧಿಸಿದೆ. ಈ ಗೆಲುವಿನ ಬಳಿಕ ಇಂಗ್ಲೆಂಡ್ ಮಾಜಿ ನಾಯಕ ಮೈಕಲ್ ವಾನ್ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಸದಾ ಭಾರತ ತಂಡದ ವಿರುದ್ಧ ಹೇಳಿಕೆ ನೀಡುವ ಮೂಲಕ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗುವ ವಾನ್ ಈ ಬಾರಿ ಭಾರತ ತಂಡದ ಪರವಾಗಿ ಹೇಳಿಕೆ ನೀಡಿದ್ದಾರೆ.
ಈಗಿನ ಭಾರತ ವೈಟ್‌ಬಾಲ್ ತಂಡ ಐಸಿಸಿ ಸೀಮಿತ ಓವರ್‌ಗಳ ಎಲ್ಲಾ ಟೂರ್ನಿಯನ್ನು ಗೆಲ್ಲಬೇಕು ಎಂದಿದ್ದಾರೆ ಮೈಕಲ್ ವಾನ್. ಏಕದಿನ, ಟಿ20 ವಿಶ್ವಕಪ್ ಹಾಗೂ ಚಾಂಪಿಯನ್ ಟ್ರೋಫಿಯನ್ನು ಕೂಡ ಭಾರತ ತಂಡ ಗೆಲ್ಲಬೇಕು ಎಂದಿದ್ದಾರೆ ಇಂಗ್ಲೆಂಡ್ ಮಾಜಿ ನಾಯಕ ಮೈಕಲ್ ವಾನ್.

ಭಾರತ ತಂಡವನ್ನು ಹೊಗಳಿದ ವಾನ್
ಇಂಗ್ಲೆಂಡ್ ತಂಡದ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿ ಗೆಲುವು ಸಾಧಿಸಿದ ಬಳಿಕ ಮೈಕಲ್ ವಾನ್ ಭಾರತ ತಂಡದ ಬಗ್ಗೆ ವಿಶೇಷ ಮಾತುಗಳನ್ನಾಡಿದ್ದಾರೆ. ಮುಂದಿನ ದಿನಗಳಲ್ಲಿ ಬರುವ ಎಲ್ಲಾ ಐಸಿಸಿ ಟ್ರೋಫಿಗಳನ್ನು ಭಾರತ ಗೆಲ್ಲಬೇಕು. ಭಾರತ ತಂಡದಲ್ಲಿ ಅದಕ್ಕೆ ಪೂರಕವಾದ ಆಟಗಾರರು ತುಂಬಿದ್ದಾರೆ. ಎಲ್ಲಾ ಪರಿಸ್ಥಿರಿಯಲ್ಲಿಯೂ ಎದುರಾಳಿಗಳನ್ನು ಮಣಿಸುವ ತಂಡವಾಗಿದೆ ಭಾರತ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಗೆಲುವು ಪಡೆಯುತ್ತಾ ಮುನ್ನಡೆಯಬೇಕು
ಮುಂದಿನ ಒಂದೂವರೆ ವರ್ಷದಲ್ಲಿ ಪರಿಸ್ಥಿತಿ ಬದಲಾಗಿರುತ್ತದೆ. ಆದರೆ ಭಾರತ ವೈಟ್‌ಬಾಲ್ ಕ್ರಿಕೆಟ್‌ನಲ್ಲಿ ಇದೇ ಪ್ರದರ್ಶನವನ್ನು ಮುಂದುವರಿಸಿಕೊಂಡು ಹೋಗಬೇಕಿದೆ. ಭಾರತ ಈ ಗೆಲುವಿನ ಕ್ಷಣಗಳನ್ನು ಬೆಳೆಸುತ್ತಾ ಸಾಗಬೇಕಿದೆ. ಟಿ20 ಮಾದರಿಯಲ್ಲಿ ಅವರು ಇದನ್ನು ಈಗಾಗಲೇ ಮಾಡಿಕೊಂಡು ಬರುತ್ತಿದ್ದಾರೆ. ಆಕ್ರಮಣಕಾರಿತನದ ಬಗ್ಗೆ ನಾವು ಮಾತನಾಡುತ್ತೇವೆ. ಅವರು ಇಂದು ಬೌಲಿಂಗ್‌ನಲ್ಲಿ ಆಕ್ರಮಣಕಾರಿಯಾಗಿದ್ದರು. ಫೀಲ್ಡಿಂಗ್‌ನಲ್ಲಿಯೂ ಆಕ್ರಮಣಕಾರಿಯಾಗಿದ್ದರು" ಎಂದಿದ್ದಾರೆ ಮೈಕಲ್ ವಾನ್.

ಟಿ20 ಗೆಲ್ಲುವ ನೆಚ್ಚಿನ ತಂಡ ಭಾರತ ಎಂದ ವಾನ್
ಭಾರತ ವೈಟ್‌ಬಾಲ್ ಆಟಗಾರರ ತಂಡ ಐಪಿಎಲ್‌ನ ಆಧಾರದಲ್ಲಿ ರಚಿತವಾಗಿದೆ. ಅವರು ವಿಶ್ವದ ಎಲ್ಲಾ ಪರಿಸ್ಥಿತಿಯಲ್ಲಿಯೂ ಮುನ್ನುಗ್ಗಿ ಗೆಲ್ಲಬೇಕು. ಮುಂದಿನ ವರ್ಷ ತವರಿನಲ್ಲಿ ನಡೆಯುವ ವಿಶ್ವಕಪ್‌ನಲ್ಲಿ ಮಾತ್ರವೇ ಗೆಲ್ಲಬಾರದು. ಮುಂದಿನ ಕೆಲವೇ ತಿಂಗಳಿನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನಲ್ಲಿಯೂ ಗೆಲ್ಲಬೇಕಿದೆ. ಅವರು ಟಿ20 ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡವಾಗಿದೆ" ಎಂದಿದ್ದಾರೆ ಮೈಕಲ್ ವಾನ್.

ಭಾರತ ಐಸಿಸಿ ಟ್ರೋಫಿ ಗೆಲ್ಲದೆ 9 ವರ್ಷ
ಅತ್ಯುತ್ತಮ ತಂಡವನ್ನು ಹೊಂದಿದ ಹೊರತಾಗಿಯೂ ಭಾರತ ಕಳೆದ 9 ವರ್ಷಗಳಲ್ಲಿ ಭಾರತ ಯಾವುದೇ ಐಸಿಸಿ ಟ್ರೋಫಿ ಗೆಲ್ಲಲು ವಿಫಲವಾಗಿದೆ. 2013ರಲ್ಲಿ ಭಾರತ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದ ಬಳಿಕ ಪ್ರತಿ ಐಸಿಸಿ ಟೂರ್ನಿಯಲ್ಲಿಯೂ ನಿರಾಸೆ ಅನುಭವಿಸಿಕೊಂಡು ಬಂದಿದೆ. 2011ರಲ್ಲಿ ಭಾರತ ಕೊನೆಯ ಬಾರಿಗೆ ವಿಶ್ವಕಪ್ ಗೆದ್ದಿದ್ದರೆ 2007ರಲ್ಲಿ ಮೊದಲ ಹಾಗೂ ಕೊನೆಯ ಟಿ20 ವಿಶ್ವಕಪ್ ಜಯಸಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications