ಸೆಡನ್ ಪಾರ್ಕ್‌ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್ ಐತಿಹಾಸಿ ಗೆಲುವು ಕಂಡಿದೆ. ಇಂಗ್ಲೆಂಡ್ ತಂಡವನ್ನು 423 ರನ್ ಗಳಿಂದ ಸೋಲಿಸುವ ಮೂಲಕ ನ್ಯೂಜಿಲೆಂಡ್ ಅಚ್ಚರಿ ಮೂಡಿಸಿದೆ. ಟಾಮ್ ಲ್ಯಾಥಮ್ ನೇತೃತ್ವದ ಕಿವೀಸ್ ಪಡೆ ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರೀ ಅಂತರದಲ್ಲಿ ಮತ್ತೊಂದು ಅತಿದೊಡ್ಡ ಟೆಸ್ಟ್ ಜಯವನ್ನು ದಾಖಲಿಸಿದೆ. ನ್ಯೂಜಿಲೆಂಡ್ 2018ರಲ್ಲಿ ಶ್ರೀಲಂಕಾವನ್ನು 423 ರನ್‌ಗಳ ಅಂತರದಿಂದ ಸೋಲಿಸಿತ್ತು. ಇದೀಗ ಇಂಗ್ಲೆಂಡ್ ವಿರುದ್ಧವೂ ಕಿವೀಸ್ ಪಡೆ 423 ರನ್ ಗಳಿಂದ ಗೆಲ್ಲುವ ಮೂಲಕ ತನ್ನ ಹಳೆಯ ಸಾಧನೆಯನ್ನು ಸರಿಗಟ್ಟಿದೆ.
ನ್ಯೂಜಿಲೆಂಡ್ ತಂಡವನ್ನು ಮೊದಲೆರಡು ಪಂದ್ಯಗಳಲ್ಲಿ ಸೋಲಿಸುವ ಮೂಲಕ ಇಂಗ್ಲೆಂಡ್ ಸರಣಿಯನ್ನು ಗೆದ್ದುಕೊಂಡಿದೆ. ಆದರೆ, ನ್ಯೂಜಿಲೆಂಡ್‌ನ ಬೌಲರ್‌ಗಳು ಮೂರನೇ ಟೆಸ್ಟ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿ ಇಂಗ್ಲೆಂಡ್‌ನ ಗೆಲುವಿನ ಓಟವನ್ನು ನಿಲ್ಲಿಸಿದ್ದಾರಡ, ಆದರೆ ಸರಣಿಯ ಅಂತಿಮ ಪಂದ್ಯವನ್ನು ಗೆಲ್ಲುವ ಮೂಲಕ ತಮ್ಮ ಜನಪ್ರಿಯತೆಯನ್ನು ಕಿವೀಸ್ ಪಡೆ ಉಳಿಸಿಕೊಂಡಿದೆ. ಸೋಲಿನ ಹೊರತಾಗಿಯೂ ಇಂಗ್ಲೆಂಡ್ 3 ಪಂದ್ಯಗಳ ಸರಣಿಯನ್ನು 2-1 ರಿಂದ ಸರಣಿ ಗೆಲ್ಲುವಲ್ಲಿ ಯಶಸ್ವಿಯಾಗಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ಟಾಮ್ ಲ್ಯಾಥಮ್ (63) ಮತ್ತು ಮಿಚೆಲ್ ಸ್ಯಾಂಟ್ನರ್ (76) ಅವರ ಅರ್ಧಶತಕಗಳ ನೆರವಿನಿಂದ 347 ರನ್ ಗಳಿಸಿತು. ಇಂಗ್ಲೆಂಡ್ ಪರ ಮ್ಯಾಥ್ಯೂ ಪಾಟ್ಸ್ 4 ವಿಕೆಟ್ ಪಡೆದರೆ, ಗಸ್ ಅಟ್ಕಿನ್ಸನ್ 3 ವಿಕೆಟ್ ಉರುಳಿಸಿದರು. ನಂತರ ಬ್ಯಾಟಿಂಗ್ ಆರಂಭಿಸಿದ ಇಂಗ್ಲೆಂಡ್ ತಂಡ ನ್ಯೂಜಿಲೆಂಡ್ ಎದುರು ಪೈಪೋಟಿ ನೀಡಲಿಲ್ಲ. ಇಂಗ್ಲೆಂಡ್ ಕೇವಲ 143 ರನ್‌ಗಳಿಗೆ ಆಲೌಟಾಯಿತು. ನ್ಯೂಜಿಲೆಂಡ್ ಪರ ಮ್ಯಾಟ್ ಹೆನ್ರಿ 4 ವಿಕೆಟ್ ಪಡೆದರೆ, ವಿಲಿಯಂ ಓ ರೂರ್ಕ್ ಮತ್ತು ಮಿಚೆಲ್ ಸ್ಯಾಂಟ್ನರ್ ತಲಾ 3 ವಿಕೆಟ್ ಕಬಳಿಸಿದರು.
ನ್ಯೂಜಿಲೆಂಡ್ ಎರಡನೇ ಇನ್ನಿಂಗ್ಸ್‌ನಲ್ಲಿ ರನ್ ಹೊಳೆ ಹರಿಸಿತು. ಕೇನ್ ವಿಲಿಯಮ್ಸನ್ ಶತಕದ ಬಲದಿಂದ ನ್ಯೂಜಿಲೆಂಡ್ 453 ರನ್ ಗಳಿಸಿತು. ಜವಾಬ್ದಾರಿಯುತ ಇನ್ನಿಂಗ್ಸ್ ಕಟ್ಟಿದ ಕೇನ್ ವಿಲಿಯಮ್ಸನ್ 156 ರನ್ ಕಲೆ ಹಾಕಿದರು. ಮತ್ತೊಂದೆಡೆ ವಿಲ್ ಯಂಗ್ ಮತ್ತು ಡೇರಿಲ್ ಮಿಚೆಲ್ ಜೋಡಿ ಅರ್ಧಶತಕಗಳನ್ನು ಗಳಿಸಿದರು. ಈ ಮೂಲಕ ಕಿವೀಸ್ ಪಡೆ ಇಂಗ್ಲೆಂಡ್‌ಗೆ 658 ರನ್‌ಗಳ ಬೃಹತ್ ಗುರಿಯನ್ನು ನೀಡಿತು. ಈ ಬೃಹತ್ ಗುರಿಗೆ ಉತ್ತರವಾಗಿ ಇಂಗ್ಲೆಂಡ್ ಎರಡನೇ ಇನ್ನಿಂಗ್ಸ್‌ನಲ್ಲಿ 234 ರನ್‌ಗಳಿಗೆ ಸರ್ವಪತನವಾಯಿತು. ಇದರೊಂದಿಗೆ ನ್ಯೂಜಿಲೆಂಡ್ ಟೆಸ್ಟ್ ಕ್ರಿಕೆಟ್‌ನಲ್ಲಿ ಮತ್ತೊಂದು ಐತಿಹಾಸಿಕ ಗೆಲುವು ಸಾಧಿಸಿತು. ಟೆಸ್ಟ್ ಕ್ರಿಕೆಟ್‌ನಲ್ಲಿ 400ಕ್ಕೂ ಹೆಚ್ಚು ರನ್‌ಗಳಿಂದ ನ್ಯೂಜಿಲೆಂಡ್ ಎರಡು ಬಾರಿಗೆ ಗೆಲುವಿನ ನಗೆ ಬೀರಿದೆ.