
ಐಪಿಎಲ್ 2021ರ ಆವೃತ್ತಿಯ ಹರಾಜಿಗೆ ಕೆಲವೇ ಕ್ಷಣಗಳು ಮಾತ್ರವೇ ಬಾಕಿಯಿದೆ. ಈ ಸಂದರ್ಭದಲ್ಲಿ ಇಂಗ್ಲೆಂಡ್‌ನ ಆಟಗಾರನೋರ್ವ ಹರಾಜು ಪ್ರಕ್ರಿಯೆಯಿಂದ ಹೊರಗುಳಿಯುವ ನಿರ್ಧಾರ ಪ್ರಕಟಿಸಿದ್ದಾರೆ. ಐಪಿಎಲ್ ಹರಾಜಿನಲ್ಲಿ ಹೆಸರನ್ನು ನೊಂದಾಯಿಸಿಕೊಂಡು ಬಳಿಕ ಅಂತಿಮ 292 ಆಟಗಾರರ ಪಟ್ಟಿಯಲ್ಲಿ ಹೆಸರನ್ನು ಹೊಂದಿದ್ದ ಇಂಗ್ಲೆಂಡ್ ವೇಗಿ ಮಾರ್ಕ್ ವುಡ್ ಈ ನಿರ್ಧಾರ ತೆಗೆದುಕೊಂಡ ಆಟಗಾರನಾಗಿದ್ದಾರೆ.
ಇಂಗ್ಲೆಂಡ್ ವೇಗಿ ಮಾರ್ಕ್ ವುಡ್ ತೆಗೆದುಕೊಂಡಿರುವ ಈ ನಿರ್ಧಾರವನ್ನು ಐಪಿಎಲ್ ಮ್ಯಾನೇಜ್‌ಮೆಂಟ್ ಎಲ್ಲಾ ಫ್ರಾಂಚೈಸಿಗಳ ಪ್ರತಿನಿಧಿಗಳಿಗೆ ಬುಧವಾರ ರಾತ್ರಿಯೇ ಮಾಹಿತಿ ನೀಡಿದ್ದಾರೆ. ಹೀಗಾಗಿ ಈ ಬಾರಿಯ ಹರಾಜಿನಲ್ಲಿ ಮಾರ್ಕ್ ವುಡ್ ಹೆಸರನ್ನು ಕರೆಯಲಾಗುವುದಿಲ್ಲ ಎಂಬುದು ಸ್ಪಷ್ಟವಾಗಿದೆ.
ಇಂದು ನಡೆಯುವ ಹರಾಜು ಪ್ರಕ್ರಿಯೆಗೆ ಮಾರ್ಕ್ ವುಡ್ 2 ಕೋಟಿ ಮೂಲ ಬೆಲೆಯನ್ನು ನಿಗದಿಪಡಿಸಿಕೊಂಡಿದ್ದರು. ಆದರೆ ಕುಟುಂಬದೊಂದಿಗೆ ಕಾಲ ಕಳೆಯಬೇಕೆಂಬ ಕಾರಣದಿಂದಾಗಿ ಈ ಬಾರೊಯ ಐಪಿಎಲ್ ಟೂರ್ನಿಯಿಂದ ಹೊರಗುಳಿಯುವ ನಿರ್ಧಾರವನ್ನು ಮಾರ್ಜ್ ವುಡ್ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.
ಮಾರ್ಕ್ ವುಡ್ ಭಾರತದ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಎರಡು ಟೆಸ್ಟ್ ಪಂದ್ಯಗಳಿಂದ ವಿಶ್ರಾಂತಿಯನ್ನು ಪಡೆದುಕೊಂಡಿದ್ದರು. ಆದರೆ ಮೂರು ಹಾಗೂ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ತಂಡವನ್ನು ಸೇರಿಕೊಳ್ಳುವ ಉದ್ದೇಶದಿಂದ ಇತ್ತೀಚೆಗಷ್ಟೇ ಭಾರತಕ್ಕೆ ಬಂದಿಳಿದಿದ್ದಾರೆ.
ಮಾರ್ಕ್ ವುಡ್ ಇಂಗ್ಲೆಂಡ್ ತಂಡದ ಪರವಾಗಿ 18 ಟೆಸ್ಟ್, 53 ಏಕದಿನ ಹಾಗೂ 11 ಟಿ20 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದಾರೆ. 2018ರ ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರವಾಗಿ ಐಪಿಎಲ್‌ನಲ್ಲಿ ಕಣಕ್ಕಿಳಿದಿದ್ದರು. ಮಾರ್ಜ್‌ವುಡ್ ಹೊರನಡೆದ ಕಾರಣ ಈಗ ಹರಾಜಿನಲ್ಲಿ 291 ಆಟಗಾರರು ಉಳಿದುಕೊಂಡಂತಾಗಿದೆ. ಇದರಲ್ಲಿ 164 ಭಾರತೀಯರು ಹಾಗೂ 124 ವಿದೇಶಿ ಆಟಗಾರರಾಗಿದ್ದಾರೆ.