ಇಂಗ್ಲೆಂಡ್ ತಂಡದ ಬ್ಯಾಟರ್ ಜೋಸ್ ಬಟ್ಲರ್ ಫಾರ್ಮ್‌ಗೆ ಮರಳಿದ್ದಾರೆ. ಈ ಸುದ್ದಿ ಭಾರತದಲ್ಲಿನ ಅವರ ಫ್ಯಾನ್ಸ್‌ಗೆ ಖುಷಿ ತಂದಿದೆ. ಮುಂಬರುವ ಐಪಿಎಲ್ ಋತುವಿಗೂ ಮುನ್ನ ಬಟ್ಲರ್ ಅಬ್ಬರ ನಡೆಸಿರುವುದು ಖುಷಿ ತಂದಿದೆ.
ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ಇಂಗ್ಲೆಂಡ್ ಕ್ರಿಕೆಟ್ ತಂಡದ ನಾಯಕ ಜೋಸ್ ಬಟ್ಲರ್ ಅರ್ಧಶತಕ (58) ಬಾರಿಸಿದ್ದಾರೆ. ಇವರ ಜವಾಬ್ದಾರಿಯುತ ಆಟದ ನೆರವಿನಿಂದ ಇಂಗ್ಲೆಂಡ್ ಎರಡನೇ ಏಕದಿನ ಪಂದ್ಯವನ್ನು 6 ವಿಕೆಟ್ ಗಳಿಂದ ಗೆದ್ದು ಕೊಂಡಿದೆ. ಈ ಮೂಲಕ ಸರಣಿಯನ್ನು ಸಮನಾಗಿಸಿದೆ.

ಮೊದಲು ಬ್ಯಾಟ್ ಮಾಡಿದ ವೆಸ್ಟ್‌ಇಂಡೀಸ್ 39.4 ಓವರ್‌ಗಳಲ್ಲಿ 202 ರನ್‌ಗೆ ಆಲೌಟ್ ಆಯಿತು. ಇಂಗ್ಲೆಂಡ್ ಪರ ಸ್ಯಾಮ್ ಕರನ್ ಹಾಗೂ ಲಿವಿಂಗ್‌ಸ್ಟೋನ್ ತಲಾ ಮೂರು ವಿಕೆಟ್ ಕಬಳಿಸಿದರು. ಇಂಗ್ಲೆಂಡ್ 32.5 ಓವರ್ ಗಳಲ್ಲಿ 206 ರನ್ ಸೇರಿಸಿ ಜಯ ಸಾಧಿಸಿತು.
ಬಟ್ಲರ್ 45 ಎಸೆತಗಳಲ್ಲಿ 4 ಬೌಂಡರಿ ಹಾಗೂ 3 ಸಿಕ್ಸರ್‌ಗಳ ನೆರವಿನಿಂದ ಅಜೇಯ 58 ರನ್ ಗಳಿಸಿದರು. ಇವರಿಗೆ ಹ್ಯಾರಿ ಬ್ರೂಕ್ (43*) ಉತ್ತಮ ಸಾಥ್ ನೀಡಿದರು. ಈ ಜೋಡಿ ಐದನೇ ವಿಕೆಟ್‌ಗೆ ಅಜೇಯ 90 ಜೊತೆಯಾಟವನ್ನು ನೀಡಿತು. ಇದು ಬಟ್ಲರ್ ಅವರ ODI ವೃತ್ತಿಜೀವನದಲ್ಲಿ 26 ನೇ ಅರ್ಧಶತಕವಾಗಿದೆ ಮತ್ತು ಕೆರಿಬಿಯನ್ ತಂಡದ ವಿರುದ್ಧ ಅವರ ಎರಡನೇ ಅರ್ಧಶತಕವಾಗಿದೆ.

ಏಕದಿನ ಕ್ರಿಕೆಟ್ ನಲ್ಲಿ ಜೋಸ್ ಬಟ್ಲರ್ ವಿಶೇಷ ದಾಖಲೆಯನ್ನು ಬರೆದಿದ್ದಾರೆ. ಏಕದಿನ ಫಾರ್ಮೆಟ್‌ನಲ್ಲಿ ಐದು ಸಾವಿರ ರನ್ ಗಡಿ ದಾಟಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಬಟ್ಲರ್‌ಗಿಂತ ಮೊದಲು ಇಂಗ್ಲೆಂಡ್ ಪರ ಏಕದಿನ ಕ್ರಿಕೆಟ್‌ನಲ್ಲಿ ಇಯಾನ್ ಮಾರ್ಗನ್ (6,957), ಜೋ ರೂಟ್ (6,522), ಇಯಾನ್ ಬೆಲ್ (5,416) ಮತ್ತು ಪಾಲ್ ಕಾಲಿಂಗ್‌ವುಡ್ (5,092) ಮಾತ್ರ ಈ ಸಾಧನೆ ಮಾಡಿದ್ದಾರೆ.
ಬಟ್ಲರ್ ತಮ್ಮ 180ನೇ ಏಕದಿನ ಪಂದ್ಯದಲ್ಲಿ 5000 ರನ್ ಪೂರೈಸಿದ್ದಾರೆ. ಈ ಸಾಧನೆಯ ಹಿಂದೆ ಅವರದ್ದೇ ತಂಡದ ಆಟಗಾರ ಅಲೆಕ್ ಸ್ಟೀವರ್ಟ್ ಇದ್ದು, ಅವರು 170 ಪಂದ್ಯಗಳಲ್ಲಿ 4,677 ರನ್ ಗಳಿಸಿದ್ದಾರೆ. ಬಟ್ಲರ್ 2012 ರಲ್ಲಿ ಪಾಕಿಸ್ತಾನ ವಿರುದ್ಧ ಮೊದಲ ODI ಪಂದ್ಯವನ್ನು ಆಡಿದರು. ಇಲ್ಲಿಯವರೆಗೆ, ಈ ಆಟಗಾರ ಇಂಗ್ಲೆಂಡ್ ಪರ 180 ಪಂದ್ಯಗಳ 153 ಇನ್ನಿಂಗ್ಸ್‌ಗಳಲ್ಲಿ 39.85 ಸರಾಸರಿಯಲ್ಲಿ 5,022 ರನ್ ಗಳಿಸಿದ್ದಾರೆ. ಅವರ ಸ್ಟ್ರೈಕ್ ರೇಟ್ 117.14 ಆಗಿದೆ. ಬಟ್ಲರ್ ತಮ್ಮ ODI ವೃತ್ತಿಜೀವನದಲ್ಲಿ 11 ಶತಕ ಮತ್ತು 26 ಅರ್ಧ ಶತಕಗಳನ್ನು ಗಳಿಸಿದ್ದಾರೆ. ಈ ಮಾದರಿಯಲ್ಲಿ ಅವರ ಅತ್ಯುತ್ತಮ ಸ್ಕೋರ್ 162 ರನ್.