
ಕೊರೊನಾ ವೈರಸ್‌ನ ಕಾರಣದಿಂದಾಗಿ ಈ ಬಾರಿಯ ಐಪಿಎಲ್ ಆವೃತ್ತಿ ಅರ್ಧಕ್ಕೆ ಮೊಟಕುಗೊಂಡಿದೆ. ಟೂರ್ನಿಯನ್ನು ಮುಂದುವರಿಸಲು ಬಿಸಿಸಿಐ ಸೂಕ್ತ ಸಮಯ ಹಾಗೂ ತಾಣಕ್ಕಾಗಿ ಹುಡುಕಾಟ ನಡೆಸಿದೆ. ಆದರೆ ಇದಕ್ಕೆ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿಯ ನಿರ್ವಾಹಕ ನಿರ್ದೇಶಕ ಆಶ್ಲೇ ಗಿಲ್ಸ್ ಪ್ರತಿಕ್ರಿಯಿಸಿದ್ದು ಬಿಸಿಸಿಐಗೆ ಕಹಿ ಸುದ್ದಿಯೊಂದನ್ನು ನೀಡಿದ್ದಾರೆ.
ಐಪಿಎಲ್ ಪುನಾರಂಭವಾದರೂ ಇಂಗ್ಲೆಂಡ್ ಕ್ರಿಕೆಟ್ ತಂಡದ ಕೇಂದ್ರೀಯ ಗುತ್ತಿಗೆಯನ್ನು ಪಡೆದ ಆಟಗಾರರು ಭಾಗಿಯಾಗುವುದು ಅಸಾಧ್ಯ ಎಂದು ಆಶ್ಲೇ ಗಿಲ್ಸ್ ಹೇಳಿದ್ದಾರೆ. ಹೀಗಾಗಿ ನಾಯಕ ಇಯಾನ್ ಮಾರ್ಗನ್, ಬೆನ್ ಸ್ಟೋಕ್ಸ್, ಜೋಸ್ ಬಟ್ಲ ಸೇರಿದಂತೆ ಇಂಗ್ಲೆಂಡ್‌ನ ಪ್ರಮುಖ ಆಟಗಾರರು ಇಲ್ಲದೆಯೇ ಐಪಿಎಲ್ 14ನೇ ಆವೃತ್ತಿ ಮುಂದುವರಿಯಾಲಿದೆಯಾ ಎಂಬುದು ಪ್ರಶ್ನೆಯಾಗಿದೆ.
ಆಶ್ಲೇ ಗಿಲ್ಸ್ ಈ ಮಾತನ್ನು ಹೇಳುವುದಕ್ಕೂ ಬಲವಾದ ಕಾರಣವಿದೆ. ಇಂಗ್ಲೆಂಡ್ ಕ್ರಿಕೆಟ್ ತಂಡದ ಅಂತಾರಾಷ್ಟ್ರೀಯ ವೇಳಾಪಟ್ಟಿಯಲ್ಲಿ ಬಿಡುವಿಲ್ಲದಂತೆ ದ್ವಿಪಕ್ಷೀಯ ಸರಣಿಗಳು ನಿರ್ಧರಿತವಾಗಿದೆ. ಹೀಗಾಗಿ ಐಪಿಎಲ್ ಮುಂದುವರಿದ ಭಾಗದ ಆಯೋಜನೆ ಅಂತಾರಾಷ್ಟ್ರೀಯ ವೇಳಾಪಟ್ಟಿಗೆ ಅಡ್ಡಿಯಾಗುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಇಂಗ್ಲೆಂಡ್ ಆಟಗಾರರ ಅಲಭ್ಯತೆಯ ಬಗ್ಗೆ ಆಶ್ಲೇ ಗಿಲ್ಸ್ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಐಪಿಎಲ್ ಮುಂದುವರಿದ ಭಾಗದ ಆಯೋಜನೆಯ ಸಮಯ ಹಾಗೂ ತಾಣವನ್ನು ಈಗ ನಿರ್ಧರಿಸುವುದು ಅಸಾಧ್ಯವೆಮದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದರೂ ಮುಂದಿನ ಅಕ್ಟೋಬರ್ ತಿಂಗಳಲ್ಲಿ ನಡೆಯುವ ಟಿ20 ವಿಶ್ವಕಪ್‌ಗೆ ಮುನ್ನ ಸಿಗುವ ಕಾಲಾವಕಾಶದಲ್ಲಿ ನಡೆಸುವ ಸಾಧ್ಯತೆಯ ಸುಳಿವನ್ನು ನೀಡಿದ್ದರು. ಆದರೆ ಈ ಸಂದರ್ಭದಲ್ಲಿ ಇಂಗ್ಲೆಂಡ್ ಕ್ರಿಕೆಟ್ ತಂಡ ಬಾಂಗ್ಲಾದೇಶ ಹಾಗೂ ಪಾಕಿಸ್ತಾನಕ್ಕೆ ಪ್ರವಾಸ ಆಯೋಜನೆಯಾಗಿದೆ.
"ಯೋಜನೆಯಂತೆಯೇ ಈ ಸರಣಿಗಳು ಆಯೋಜನೆಯಾದರೆ ಇಂಗ್ಲೆಂಡ್ ತಂಡದ ಈ ಆಟಗಾರರು ಭಾಗಿಯಾವುದುದನ್ನು ನಾವು ನಿರೀಕ್ಷಿಸುತ್ತೇವೆ. ಇಂಗ್ಲೆಂಡ್ ಆಟಗಾರರು ಇಂಗ್ಲೆಂಡ್ ತಂಡದಲ್ಲಿ ಭಾಗಿಯಾಗುವುದಕ್ಕಾಗಿ ನಾವು ಯೋಜನೆ ರೂಪಿಸುತ್ತೇವೆ" ಎಂದು ಆಶ್ಲೇ ಗಿಲ್ಸ್ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.