
ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ಕ್ರಿಕೆಟ್ ತಂಡ ಗೆಲುವಿನ ಮೇಲೆ ಗೆಲುವು ಸಾಧಿಸುತ್ತಾ ಭರ್ಜರಿಯಾಗಿ ಮುನ್ನುಗ್ಗುತ್ತಿದೆ. ಈಗಾಗಲೇ ಸೆಮಿಫೈನಲ್‌ಗೆ ಪ್ರವೇಶ ಪಡೆದಿರುವ ಇಂಗ್ಲೆಂಡ್ ತಂಡಕ್ಕೆ ಹಿನ್ನಡೆಯೊಂದು ಉಂಟಾಗಿದೆ. ತಂಡದ ಆಟಗಾರನೋರ್ವ ಗಾಯದ ಕಾರಣದಿಂದಾಗಿ ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ.
ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ಈ ಬಗ್ಗೆ ಬುಧವಾರ ಅಧಿಕೃತವಾಗಿ ಮಾಹಿತಿಯನ್ನು ನೀಡಿದೆ. ತಂಡದ ವೇಗಿ ಟೈಮಲ್ ಮಿಲ್ಸ್ ಬಲ ತೊಡೆಯ ಗಾಯಕ್ಕೆ ಒಳಗಾಗಿದ್ದು ವಿಶ್ವಕಪ್‌ನ ಉಳಿದ ಒಂದ್ಯಗಳಿಂದ ಹೊರಬಿದ್ದಿದ್ದಾರೆ ಎಂದು ಮಾಹಿತಿಯನ್ನು ನೀಡಿದೆ.
ಶ್ರೀಲಂಕಾ ವಿರುದ್ಧ ಕಳೆದ ಸೋಮವಾರ ಶಾರ್ಜಾದಲ್ಲಿ ನಡೆದ ಪಂದ್ಯದ ಸಂದರ್ಭದಲ್ಲಿ ಟೈಮಲ್ ಮಿಲ್ಸ್ ಗಾಯಕ್ಕೆ ಒಳಗಾಗಿದ್ದರು. ಹೀಗಾಗಿ ಮಂಗಳವಾರ ಸ್ಕ್ಯಾನಿಂಗ್‌ಗೆ ಒಳಗಾಗಿದ್ದ ಮಿಲ್ಸ್ ಗಾಯದ ತೀವ್ರತೆ ಹೆಚ್ಚಾಗಿರುವ ಕಾರಣದಿಂದಾಗಿ ಟೂರ್ನಿಯಿಂದ ಹೊರಬೀಳುವುದು ಅನಿವಾರ್ಯವಾಗಿದೆ. ಹೀಗಾಗಿ ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್ ಮಂಡಳಿ ಈ ನಿರ್ಧಾರ ತೆಗೆದುಕೊಂಡಿದೆ.
ಇಂಗ್ಲೆಂಡ್ ತಂಡದ ಡೆತ್ ಓವರ್ ಸ್ಪೆಶಲಿಸ್ಟ್ ಆಗಿರುವ ಟೈಮಲ್ ಮಿಲ್ಸ್ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ 14ನೇ ಓವರ್ ಎಸೆಯಲು ಕಣಕ್ಕಿಳಿದಿದ್ದರು. ಆದರೆ ಈ ಸಣದರ್ಭದಲ್ಲಿ ಗಾಯಕ್ಕೆ ಒಳಗಾದ ಕಾರಣ ಈ ಓವರ್ ಸಂಪೂರ್ಣಗೊಳಿಸಲು ಸಾಧ್ಯವಾಗಿರಲಿಲ್ಲ. ನಂತರ ಆ ಓವರ್‌ಅನ್ನು ಕ್ರಿಸ್ ವೋಕ್ಸ್ ಸಂಪೂರ್ಣಗೊಳಿಸಿದ್ದರು. ಟೈಮಲ್ ಮಿಲ್ಸ್ ಗಾಯಗೊಂಡಿರುವ ಕಾರಣದಿಂದಾಗಿ ಆ ಸ್ಥಾನಕ್ಕೆ ಇಂಗ್ಲೆಂಡ್ ತಂಡದ ಜೊತೆಗೆ ಮೀಸಲು ಆಟಗಾರನಾಗಿದ್ದ ರೀಸ್ ಟೋಪ್ಲೆ ಸ್ಕ್ವಾಡ್‌ಗೆ ಸೇರ್ಪಡೆಯಾಗಿದ್ದಾರೆ.
ಇಂಗ್ಲೆಂಡ್ ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಅಜೇಯ ತಂಡವಾಗಿ ಉಳಿದುಕೊಂಡಿದೆ. ಆಡಿದ ನಾಲ್ಕು ಪಂದ್ಯಗಳ ಪೈಕಿ ನಾಲ್ಕು ಗೆಲುವು ಸಾಧಿಸಿರುವ ಇಯಾನ್ ಮಾರ್ಗನ್ ಬಳಗ ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದಾಗಿದೆ. ಸೂಪರ್ 12 ಹಂತದಲ್ಲಿ ಗ್ರೂಫ್ 1ರಲ್ಲಿರುವ ಇಂಗ್ಲೆಂಡ್ 4 ಗೆಲುವುಗಳ ಮೂಲಕ 8 ಅಂಕಗಳನ್ನು ಸಾಧಿಸಿದೆ. ಈ ಮೂಲಕ ಈಗಾಗಲೇ ಸೆಮಿಫೈನಲ್‌ಗೆ ಪ್ರವೇಶ ಪಡೆದುಕೊಂಡಿದೆ. ಇಂಗ್ಲೆಂಡ್ ತಂಡದ ಸೂಪರ್ 12 ಹಂತದ ಕೊನೆಯ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಎದುರಾಳಿಯಾಗಲಿದ್ದು ಈ ಪಂದ್ಯ ಶನಿವಾರ ನಡೆಯಲಿದೆ.
ಈ ಬಾರಿಯ ವಿಶ್ವಕಪ್‌ನಲ್ಲಿ ಮೊದಲ ಪಂದ್ಯವನ್ನು ವೆಸ್ಟ್ ಇಂಡೀಸ್ ವಿರುದ್ಧ ಆಡಿದ್ದ ಇಂಗ್ಲೆಂಡ್ 6 ವಿಕೆಟ್‌ಗಳ ಅಂತರದ ಗೆಲುವು ಸಾಧಿಸಿತ್ತು. ಎರಡನೇ ಪಂದ್ಯದಲ್ಲಿ ಬಾಂಗ್ಲಾದೇಶಕ್ಕೆ 8 ವಿಕೆಟ್‌ಗಳ ಅಂತರದ ಸೋಲಿನ ರುಚಿ ತೋರಿಸಿತ್ತು. ಬಳಿಕ ಆಸ್ಟ್ರೇಲಿಯಾ ವಿರುದ್ಧವೂ ಇದೇ ಪ್ರದರ್ಶನ ಮುಂದುವರಿಸಿದ ಇಂಗ್ಲೆಂಡ್ 8 ವಿಕೆಟ್‌ಗಳ ಅಂತರದ ಮತ್ತೊಂದು ಗೆಲುವು ಸಾಧಿಸಿತು. ಬಳಿಕ ಶ್ರೀಲಂಕಾ ವಿರುದ್ಧ 26 ರನ್‌ಗಳ ಅಂತರದ ವಿಜಯ ಸಾಧಿಸುವಲ್ಲಿ ಯಶಸ್ವಿಯಾಗಿದೆ.
ಇಂಗ್ಲೆಂಡ್ ತಂಡ ಹೀಗಿದೆ: ಜೇಸನ್ ರಾಯ್, ಜೋಸ್ ಬಟ್ಲರ್ (ವಿಕೆಟ್ ಕೀಪರ್), ಡೇವಿಡ್ ಮಲಾನ್, ಜಾನಿ ಬೈರ್‌ಸ್ಟೋವ್, ಲಿಯಾಮ್ ಲಿವಿಂಗ್‌ಸ್ಟೋನ್, ಇಯಾನ್ ಮಾರ್ಗನ್ (ನಾಯಕ), ಮೊಯಿನ್ ಅಲಿ, ಕ್ರಿಸ್ ವೋಕ್ಸ್, ಕ್ರಿಸ್ ಜೋರ್ಡಾನ್, ಆದಿಲ್ ರಶೀದ್, ಡೇವಿಡ್ ವಿಲ್ಲಿ, ಟಾಮ್ ಕರ್ರಾನ್, ಮಾರ್ಕ್ ವುಡ್, ಸ್ಯಾಮ್ ಬಿಲ್ಲಿಂಗ್ಸ್, ರೀಸ್ ಟೋಪ್ಲೆ