ಕೊನೆಯ ಕ್ಷಣದವರೆಗೆ ಕುತೂಹಲ ಮೂಡಿಸಿದ್ದ ಪಂದ್ಯದಲ್ಲಿ ಇಂಗ್ಲೆಂಡ್‌ಗೆ ಭರ್ಜರಿ ಜಯ
ಮುಂಬೈ: ಕೊನೆಯ ಕ್ಷಣದ ವರೆಗೆ ರೋಚಕತೆ ಹುಟ್ಟಿಸಿದ್ದ ಇಂಗ್ಲೆಂಡ್ ಹಾಗೂ ನೇಪಾಳ ಪಂದ್ಯದಲ್ಲಿ ಆಂಗ್ಲರು 5 ರನ್ ಜಯ ಸಾಧಿಸಿದೆ. ಈ ಮೂಲಕ ಇಂಗ್ಲೆಂಡ್ ಗೆಲುವಿನ ಆರಂಭವನ್ನು ಮಾಡಿದೆ.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ತಂಡದ ಆರಂಭ ಕಳಪೆಯಾಗಿತ್ತು. ಆರಂಭಿಕ ಫಿಲ್ ಸಾಲ್ಟ್ (1) ರನ್ ಕಲೆ ಹಾಕುವಲ್ಲಿ ವಿಫಲರಾದರು. ಜೋಸ್ ಬಟ್ಲರ್ ಹಾಗೂ ಜಾಕಬ್ ಬೆಥೆಲ್ ಜೋಡಿ ಸೊಗಸಾದ ಆಟವನ್ನು ಆಡಿತು. ಈ ಜೋಡಿ 2ನೇ ವಿಕೆಟ್‌ಗೆ 20 ಎಸೆತಗಳಲ್ಲಿ 38 ರನ್ ಸೇರಿಸಿತು. ಜೋಸ್ ಬಟ್ಲರ್ 26 ರನ್ ಬಾರಿಸಿ ಮಿಂಚಿದರು. ಈ ಚುಟುಕು ಇನಿಂಗ್ಸ್ ಮೂಲಕ ಬಟ್ಲರ್ ಹೊಸ ದಾಖಲೆ ಬರೆದರು.

ಟಿ20 ವಿಶ್ವಕಪ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಜೋಸ್ ಬಟ್ಲರ್ ಶ್ರೀಲಂಕಾದ ಮಾಜಿ ಕ್ರಿಕೆಟ್ ದಂತಕಥೆ ಮಹೇಲ ಜಯವರ್ಧನೆ ಅವರನ್ನು ಹಿಂದಿಕ್ಕಿದರು. ಬಟ್ಲರ್ 36 ಟಿ20 ವಿಶ್ವಕಪ್ ಪಂದ್ಯಗಳಲ್ಲಿ 1,039 ರನ್ ಸಿಡಿಸಿದ್ದಾರೆ. ಜಯವರ್ಧನೆ 31 ಪಂದ್ಯಗಳಲ್ಲಿ 1,016 ರನ್ ಗಳಿಸಿದ್ದಾರೆ. ಬಟ್ಲರ್ ಈಗ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರ ದಾಖಲೆಗಳನ್ನು ಮುರಿಯುವ ಗುರಿಯನ್ನು ಹೊಂದಿದ್ದಾರೆ.
ಬೆಥೆಲ್ ಆರ್ಭಟ
ಇಂಗ್ಲೆಂಡ್ ತಂಡದ ಪರ ಟಾಮ್ ಬಾಥಮ್ (2) ರನ್ ಕಲೆ ಹಾಕುವಲ್ಲಿ ವಿಫಲರಾದರು. 4ನೇ ವಿಕೆಟ್‌ಗೆ ಹ್ಯಾರಿ ಬ್ರೂಕ್ ಹಾಗೂ ಜಾಕಬ್ ಜೋಡಿ 45 ಎಸೆತಗಳಲ್ಲಿ 71 ರನ್ ಜೊತೆಯಾಟದ ಕಾಣಿಕೆ ನೀಡಿತು. ನಾಯಕ ಹ್ಯಾರಿ ಬ್ರೂಕ್ 4 ಬೌಂಡರಿ, 3 ಸಿಕ್ಸರ್ ಸಹಾಯದಿಂದ 53 ರನ್ ಸಿಡಿಸಿದ್ದಾರೆ. ಜಾಕಬ್ ಬೆಥೆಲ್ 35 ಎಸೆತಗಳಲ್ಲಿ 4 ಬೌಂಡರಿ, 4 ಸಿಕ್ಸರ್ 55 ರನ್ ಸಿಡಿಸಿ ಆರ್ಭಟಿಸಿದರು. ವಿಲ್ ಜಾಕ್ಸ್ 1 ಬೌಂಡರಿ, 4 ಸಿಕ್ಸರ್ ಅಜೇಯ 39 ರನ್ ಬಾರಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು. ಅಂತಿಮವಾಗಿ ಇಂಗ್ಲೆಂಡ್ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 184 ರನ್ ಸಿಡಿಸಿತು.

ಕೊನೆಯಲ್ಲಿ ಎಡವಿದ ನೇಪಾಳ
ಗುರಿಯನ್ನು ಹಿಂಬಾಲಿಸಿದ ನೇಪಾಳ ತಂಡದ ಆರಂಭಿಕರಾದ ಕುಶಾಲ್ ಭುರ್ತೆಲ್ ಹಾಗೂ ಆಸಿಫ್ ಶೇಖ್ (7) ಜೋಡಿ ತಂಡಕ್ಕೆ 37 ರನ್‌ಗಳ ಜೊತೆಯಾಟದ ಕಾಣಿಕೆ ನೀಡಿದರು. ಆದರೆ ತಂಡ ಪವರ್ ಪ್ಲೇನಲ್ಲಿ ಇಬ್ಬರೂ ಆರಂಭಿಕರನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಮೂರನೇ ವಿಕೆಟ್‌ಗೆ ರೋಹಿತ್ ಪೌಡೆಲ್ ಮತ್ತು ದೀಪೇಂದ್ರ ಸಿಂಗ್ ಐರಿ ಜೋಡಿ 54 ಎಸೆತಗಳಲ್ಲಿ 82 ರನ್ ಸೇರಿಸಿ ಅಬ್ಬರಿಸಿತು. ರೋಹಿತ್ ಪೌಡೆಲ್ 2 ಬೌಂಡರಿ, 2 ಸಿಕ್ಸರ್ ಸಹಾಯದಿಂದ 39 ರನ್ ಬಾರಿಸಿದರು. ದೀಪೇಂದ್ರ ಸಿಂಗ್ ಐರೀ 6 ಬೌಂಡರಿ, 1 ಸಿಕ್ಸರ್ ನೆರವಿನಿಂದ 44 ರನ್ ಬಾರಿಸಿದರು. ಲೋಕೇಶ್ ಬಾಮ್ ಅಜೇಯ 39 ರನ್ ಸಿಡಿಸಿದರು. ಅಂತಿಮವಾಗಿ ನೇಪಾಳ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 180 ರನ್ ಸಿಡಿಸಿ ಸೋಲು ಕಂಡಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications