ಅಂತಾರಾಷ್ಟ್ರೀಯ ಕ್ರಿಕೆಟ್ ರಂಗದಲ್ಲಿ ಮತ್ತೊಬ್ಬ ಸ್ಟಾರ್ ಆಟಗಾರ ಕ್ರಿಕೆಟ್ ರಂಗದಿಂದ ದೂರ ಸರಿದಿದ್ದಾರೆ. ಇಂಗ್ಲೆಂಡ್ ತಂಡದ ಪರ 15 ವರ್ಷಗಳ ಕಾಲ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಿಂದ ತಂಡಕ್ಕೆ ಆಧಾರವಾಗಿದ್ದ ಪ್ಲೇಯರ್ ಸೋಮವಾರ ತಮ್ಮ ವೃತ್ತಿ ಜೀವನಕ್ಕೆ ವಿದಾಯ ಹೇಳಿದ್ದಾರೆ. ಇಂಗ್ಲೆಂಡ್ ತಂಡದ ಸ್ಟಾರ್ ವೇಗದ ಬೌಲರ್ ಕ್ರಿಸ್ ವೋಕ್ಸ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಇವರು ಇಂಗ್ಲೆಂಡ್ ತಂಡದ ಯಶಸ್ವಿ ಆಟಗಾರರಲ್ಲಿ ಒಬ್ಬರು. ಈ ಬಗ್ಗೆ ವೋಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುವ ಮೂಲಕ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.
ಭಾರತ ಹಾಗೂ ಇಂಗ್ಲೆಂಡ್ ನಡುವಣ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಕ್ರಿಸ್ ವೋಕ್ಸ್ ಮೈದಾನದಲ್ಲಿ ಮಿಂಚು ಹರಿಸಿದ್ದರು. ಅಲ್ಲದೆ ಇವರು ಓವಲ್ ಟೆಸ್ಟ್ ಪಂದ್ಯದಲ್ಲಿ ಕರುಣ್ ನಾಯರ್ ಬಾರಿಸಿದ ಚೆಂಡನ್ನು ತಡೆಯಲು ಹೋಗಿ ಬೌಂಡರಿ ಲೈನ್‌ನಲ್ಲಿ ಗಾಯಕ್ಕೆ ತುತ್ತಾದರು. ಆ ಬಳಿಕ ಅವರು ಬೌಲಿಂಗ್ ನಡೆಸಲಿಲ್ಲ. ಆದರೆ ಎರಡನೇ ಇನಿಂಗ್ಸ್‌ನಲ್ಲಿ ತಂಡಕ್ಕೆ ಅವಶ್ಯಕತೆ ಇದ್ದಾಗ ಒಂದೇ ಕೈಯಿಂದ ಬ್ಯಾಟ್ ಮಾಡಲು ಬಂದು ಎಲ್ಲರ ಮನ ಗೆದ್ದಿದ್ದರು. ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಆಶಸ್ ಟೆಸ್ಟ್ ಸರಣಿಗೆ ಇಂಗ್ಲೆಂಡ್ ತಂಡವನ್ನು ಪ್ರಕಟಿಸಿದಾಗ, ಇವರಿಗೆ ತಂಡದಲ್ಲಿ ಸ್ಥಾಣ ಲಭಿಸಲಿಲ್ಲ.

ಕ್ರಿಸ್ ವೋಕ್ಸ್ ತಮ್ಮ ನಿವೃತ್ತಿ ನಿರ್ಧಾರವನ್ನು ಸಾಮಾಜಿಕ ತಾಣದಲ್ಲಿ ಬಹಿರಂಗ ಪಡಿಸಿದ್ದಾರೆ. ಅಲ್ಲದೆ ಇದು ನಿವೃತ್ತಿಗೆ ಸರಿಯಾದ ಸಮಯ ಎಂದು ತಿಳಿಸಿದ್ದಾರೆ. ಬಾಲ್ಯದಿಂದಲೂ ದೇಶಕ್ಕಾಗಿ ಆಡುವುದು ಕನಸಾಗಿತ್ತು. ಈ ಕನಸು ನನಸಾಗಿದ್ದಕ್ಕೆ ಅವರು ತಮ್ಮನ್ನು ತಾವು ಅದೃಷ್ಟಶಾಲಿ ಎಂದು ಪರಿಗಣಿಸಿದ್ದಾರೆ. ಕಳೆದ 15 ವರ್ಷಗಳಿಂದ ಇಂಗ್ಲೆಂಡ್ ತಂಡದ ಜೊತೆ ಕಣಕ್ಕೆ ಇಳಿಯುವುದು, ದೇಶದ ಲಾಂಛನ ಇರುವ ಜೆರ್ಸಿ ತೊಡುವುದು ಹೆಮ್ಮೆಯ ವಿಷಯ. ಇನ್ನು ಇದೇ ಅಂಗಳದಿಂದ ಸಾಕಷ್ಟು ಸ್ನೇಹಿತರು ಸಹ ಸಿಕ್ಕಿದ್ದಾರೆ ಎಂದು ಕ್ರಿಸ್ ವೋಕ್ಸ್ ಬರೆದುಕೊಂಡಿದ್ದಾರೆ.
ಇದೇ ವೇಳೆ ಕ್ರಿಸ್ ವೋಕ್ಸ್ ತಮ್ಮ ಚೊಚ್ಚಲ ಪಂದ್ಯದ ಬಗ್ಗೆಯೂ ನೆನಪುಗಳನ್ನು ಹರಿ ಬಿಟ್ಟಿದ್ದಾರೆ. 2011ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಪದಾರ್ಪಣೆ ಮಾಡಿರುವುದು ಇಂದಿಗೂ ನಿನ್ನೆ ನಡೆದಷ್ಟೇ ತಾಜಾ ಇದೆ. ಈ ಪಂದ್ಯವನ್ನು ಆನಂದಿಸುತ್ತಿದ್ದಾಗ ಸಮಯ ಕಳೆಯಿತು. 2 ವಿಶ್ವಕಪ್ ವಿಜೇತ ತಂಡದ ಸದಸ್ಯರಾಗುವುದು. ಅಲ್ಲದೆ ಆಶಸ್ ಸರಣಿಯಲ್ಲಿ ತಂಡಕ್ಕಾಗಿ ಕೊಡುಗೆ ನೀಡುವುದರ ಬಗ್ಗೆಯೂ ವೋಕ್ಸ್ ಬರೆದುಕೊಂಡಿದ್ದಾರೆ. ಇದೇ ವೇಳೆ ವೋಕ್ಸ್ ತಮ್ಮ ಪೋಷಕರು, ಪತ್ನಿ, ಮಕ್ಕಳ ಪ್ರೀತಿ ಹಾಗೂ ಬೆಂಬಲ, ತ್ಯಾಗಕ್ಕೆ ಧನ್ಯವಾದ ತಿಳಿಸಿದ್ದಾರೆ.
ಕ್ರಿಸ್ ವೋಕ್ಸ್ ಅವರು ಆಸ್ಟ್ರೇಲಿಯಾ ವಿರುದ್ಧ 2013ರ ಏಕದಿನ ಪಂದ್ಯದ ಮೂಲಕ ಪದಾರ್ಪಣೆ ಮಾಡಿದರು. ಆ ಬಳಿಕ ಟೆಸ್ಟ್ ಕ್ರಿಕೆಟ್‌ಗೂ ಪದಾರ್ಪಣೆ ಮಾಡಿ ಅಬ್ಬರಿಸಿದ್ದಾರೆ. ಅಗಸ್ಟ್‌ನಲ್ಲಿ ಇವರು ಭಾರತದ ವಿರುದ್ಧದ ಕೊನೆಯ ಟೆಸ್ಟ್ ಪಂದ್ಯವೇ ಇವರ ವೃತ್ತಿ ಜೀವನದ ಕೊನೆಯ ಪಂದ್ಯವಾಗಿತ್ತು. ಇವರು ಪಾಕಿಸ್ತಾನ ವಿರುದ್ಧ 2023ರಲ್ಲಿ ಪಾಕಿಸ್ತಾನ ವಿರುದ್ಧ ತಮ್ಮ ಕೊನೆಯ ಪಂದ್ಯವನ್ನು ಆಡಿದ್ದರು. ಇವರು ಈಗಾಗಲೇ ಇಂಗ್ಲೆಂಡ್ ಪರ 62 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 192 ವಿಕೆಟ್ ಪಡೆದಿದ್ದಾರೆ. ಅಲ್ಲದೆ ಇವರು 122 ಪಂದ್ಯಗಳಲ್ಲಿ 173 ವಿಕೆಟ್ ಕಬಳಿಸಿದ್ದಾರೆ. ಇನ್ನು ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 31 ವಿಕೆಟ್ ಉರುಳಿಸಿದ್ದಾರೆ.