

ಲಂಡನ್, ಜುಲೈ 26: ಕುತೂಹಲ ಮೂಡಿಸಿರುವ ಭಾರತ vs ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯಕ್ಕಾಗಿ ಸ್ಪಿನ್ನರ್ ಆದಿಲ್ ರಶೀದ್ ಇಂಗ್ಲೆಂಡ್ ತಂಡ ಸೇರಿಕೊಂಡಿದ್ದಾರೆ. ಈ ನಡುವೆ ತಾನು ನಿಗದಿತ ಓವರ್ ಕ್ರಿಕೆಟ್ ನತ್ತ ಗಮನ ಹರಿಸಬೇಕಾದ ಅಗತ್ಯವಿದೆ ಎಂದೂ ರಶೀದ್ ಹೇಳಿಕೊಂಡಿದ್ದಾರೆ.
ಕಳೆದ ಫೆಬ್ರವರಿಯಲ್ಲಿ ಯಾರ್ಕ್ ಶೈರ್ ನೊಂದಿಗೆ ಮಾತ್ರ ವೈಟ್ ಬಾಲ್ (ನಿಗದಿತ ಓವರ್) ಕ್ರಿಕೆಟ್ ಆಡುವ ಒಪ್ಪಂದಕ್ಕೆ ರಶೀದ್ ಸಹಿ ಹಾಕಿದ್ದರು. ಸ್ವತಃ ರಶೀದ್ ಅವರೇ ಹೇಳುವಂತೆ ಅವರಿನ್ನೂ ಟೆಸ್ಟ್ ಕ್ರಿಕೆಟ್ ಗೆ ಸಂಪೂರ್ಣ ಸಜ್ಜಾಗಿಲ್ಲವಂತೆ.
ಈ ಹಿಂದೆ ಯಾರ್ಕ್ ಶೈರ್ ಮತ್ತು ಇಂಗ್ಲೆಂಡ್ ತಂಡಕ್ಕಾಗಿ ರಶೀದ್ ಆಡಿದ್ದರು. ಹೀಗಾಗಿ ಇಂಗ್ಲೆಂಡ್ ಕ್ರಿಕೆಟ್ ನ ಈ ಸಡನ್ ಆಯ್ಕೆ ನಿರ್ಧಾರ ಅಚ್ಚರಿ ತಂದಿದೆ ಎಂದು ಯಾರ್ಕ್ ಶೈರ್ ತಿಳಿಸಿದೆ. ಜೊತೆಗೆ ಇಂಗ್ಲೆಂಡ್ ಮಾಜಿ ನಾಯಕ ಮೈಕಲ್ ವಾಘನ್ ಅವರು 'ಇದೊಂದು ಹಾಸ್ಯಾಸ್ಪದ ನಿರ್ಧಾರ' ಎಂದಿದ್ದಾರೆ.
ಎಜ್ ಬಾಸ್ಟನ್ ನಲ್ಲಿ ಭಾರತ-ಇಂಗ್ಲೆಂಡ್ ಮೊದಲ ಟೆಸ್ಟ್ ಒಂದ್ಯ ನಡೆಯಲಿದ್ದು, ಇಂಗ್ಲೆಂಡ್ ವೇಗಿ ಜೇಮೀ ಪೋರ್ಟರ್ ಅವರನ್ನೂ ಮೊದಲ ಬಾರಿಗೆ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಆಲ್ ರೌಂಡರ್ ಮೊಯೀನ್ ಆಲಿ ಕೂಡ ತಂಡದಲ್ಲಿರಲಿದ್ದಾರೆ.