
ಲೀಡ್ಸ್, ಆಗಸ್ಟ್ 25: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯ ಮೂರನೇ ಪಂದ್ಯ ಆರಂಭವಾಗಿದೆ. ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪಂದ್ಯದ ಟಾಸ್ ಗೆದ್ದುದ್ದು ಮೊದಲಿಗೆ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಲೀಡ್ಸ್‌ನ ಹೆಡಿಂಗ್ಲೆ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಮೂರನೇ ಪಂದ್ಯವಾಗಿದೆ.
ಆರ್ ಅಶ್ವಿನ್, ಶಾರ್ದೂಲ್‌ಗೆ ಇಲ್ಲ ಸ್ಥಾನ: ಈ ಬಾರಿಯ ಟೆಸ್ಟ್ ಸರಣಿಯ ಆರಂಭದ ಪಂದ್ಯದಿಂದಲೂ ಅನುಭವಿ ಆರ್ ಅಶ್ವಿನ್‌ಗೆ ಆಡುವ ಬಳಗದಲ್ಲಿ ಸ್ಥಾನ ಪಡೆಯಲು ಸಾಧ್ಯವಾಗಲಿಲ್ಲ. ಲೀಡ್ಸ್ ಪಂದ್ಯದಲ್ಲಿ ಆರ್ ಅಶ್ವಿನ್ ಆಡುವುದು ಬಹುತೇಕ ಖಚಿತ ಎಂದೇ ಭಾವಿಸಲಾಗಿತ್ತು. ಆದರೆ ಹೆಡಿಂಗ್ಲೆ ಪಂದ್ಯದ ವೇಳೆಯೂ ಅಶ್ವಿನ್ ಬೆಂಚ್ ಕಾಯಲೇ ಬೇಕಿದೆ. ಇನ್ನೋರ್ವ ವೇಗಿ ಶಾರ್ದೂಲ್ ಠಾಕೂರ್ ಮೊದಲ ಪಂದ್ಯದಲ್ಲಿ ಆಡುವ ಬಳಗದಲ್ಲಿ ಕಾಣಿಸಿಕೊಂಡಿದ್ದು ಉತ್ತಮ ಪ್ರದರ್ಶನ ನೀಡಿದ್ದರು, ಆದರೆ ಎರಡನೇ ಪಂದ್ಉಕ್ಕೂ ಮುನ್ನ ಅವರು ಗಾಯಗೊಂಡಿದ್ದ ಕಾರಣ ಲಾರ್ಡ್ಸ್ ಪಂದ್ಯದಲ್ಲಿ ಆಡುವ ಬಳಗದಿಂದ ಹೊರಬಿದ್ದಿದ್ದಾರೆ. ಈಗ ಮೂರನೇ ಟೆಸ್ಟ್ ಪಂದ್ಯದಲ್ಲಿ ಶಾರ್ದೂಲ್ ಠಾಕೂರ್‌ಗೆ ಆಡುವ ಬಳಗದಲ್ಲಿ ಸ್ಥಾನ ದೊರೆತಿಲ್ಲ. ಲಾರ್ಡ್ಸ್ ಮೈದಾನದಲ್ಲಿ ಉತ್ತಮ ಪ್ರದರ್ಶನ ನೀಡಿದ ಇಶಾಂತ್ ಶರ್ಮಾ ಅವರನ್ನು ಮುಂದುವರಿಸಲು ಮ್ಯಾನೇಜ್‌ಮೆಂಟ್ ನಿರ್ಧರಿಸಿದೆ.
ಮಯಾಂಕ್‌ಗೂ ಇಲ್ಲ ಆಡುವ ಅವಕಾಶ: ಇನ್ನು ಈ ಬಾರಿಯ ಟೆಸ್ಟ್ ಸರಣಿಯ ಆರಂಭಕ್ಕೂ ಮುನ್ನ ಆರಂಭಿಕನಾಗಿ ಕಣಕ್ಕಿಳಿಯಲು ಮಯಾಂಕ್ ಅಗರ್ವಾಲ್ ಸಜ್ಜಾಗಿದ್ದರು. ಆದರೆ ಮೊದಲ ಪಂದ್ಯಕ್ಕೂ ಮುನ್ನ ಅಭ್ಯಾಸದ ಸಂದರ್ಭದಲ್ಲಿ ಚೆಂಡು ತಲೆಗೆ ಬಡಿದ ಕಾರಣದಿಂದಾಗಿ ಕನ್ಕೂಶನ್‌ಗೆ ಒಳಗಾಗಿದ್ದ ಮಯಾಂಕ್ ಅಗರ್ವಾಲ್ ಮೊದಲ ಪಂದ್ಯದಿಂದ ಹೊರಬಿದ್ದಿದ್ದರು. ಹೀಗಾಗಿ ಕೆಎಲ್ ರಾಹುಲ್‌ಗೆ ಆರಂಭಿಕನಾಗಿ ಕಣಕ್ಕಿಳಿಯುವ ಅವಕಾಶ ದೊರೆತಿತ್ತು. ಈ ಅವಕಾಶವನ್ನು ರಾಹುಲ್ ಅದ್ಭುತವಾಗಿ ಬಳಸಿಕೊಂಡಿದ್ದಾರೆ. ಸರಣಿಯ ಮೊದಲ ಎರಡು ಪಂದ್ಯದಲ್ಲಿಯೂ ರಾಹುಲ್ ನೀಡಿದ ಪ್ರದರ್ಶನದಿಂದಾಗಿ ಆರಂಭಿಕನಾಗಿ ಅವರನ್ನೇ ಮುಂದುವರಿಸುವ ನಿರ್ಧಾರ ಕೈಗೊಳ್ಳಲಾಗಿದೆ.
ಭಾರತ vs ಇಂಗ್ಲೆಂಡ್, 3ನೇ ಟೆಸ್ಟ್, Live ಸ್ಕೋರ್‌ಕಾರ್ಡ್
ಇನ್ನು ಮೂರನೇ ಪಂದ್ಯದಿಂದ ಸಿಬ್ಲಿ ಹೊರಬಿದ್ದಿದ್ದು ಡೇವಿಡ್ ಮಲನ್ ಆಡುವ ಬಳಗದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಹೀಗಾಗಿ ಸುದೀರ್ಘ ಕಾಲದ ಬಳಿಕ ಮಲನ್ ವೈಟ್‌ಜರ್ಸಿ ತೊಟ್ಟು ಕಣಕ್ಕಿಳಿಯುತ್ತಿದ್ದಾರೆ. ಮತ್ತೊಂದೆಡೆ ಇಂಗ್ಲೆಂಡ್ ತಂಡದ ವೇಗಿ ಮಾರ್ಕ್‌ವುಡ್ ಕಳೆದ ಪಂದ್ಯದಲ್ಲಿ ಗಾಯಗೊಂಡಿದ್ದು ಸಂಪೂರ್ಣ ಚೇತರಿಕೆ ಕಂಡಿಲ್ಲ. ಹೀಗಾಗಿ ಅವರ ಸ್ಥಾನಕ್ಕೆ ಕ್ರೇಗ್ ಒವರ್ಟನ್ ಸ್ಥಾನ ಪಡೆದಿದ್ದಾರೆ. ಕೌಂಟಿ ಪಂದ್ಯಗಳಲ್ಲಿ ಸಾಕಷ್ಟು ಮಿಂಚಿರುವ ಒವರ್ಟನ್ ಭಾರತದ ವಿರುದ್ಧ ಮಿಂಚುವ ವಿಶ್ವಾಸದಲ್ಲಿದ್ದಾರೆ.
ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಪಡೆ ಮೊದಲ ದಿನದಾಟದಲ್ಲಿ ಹೀನಾಯ ಪ್ರದರ್ಶನ ನೀಡಿದೆ. ಟಾಸ್ ಗೆದ್ದು ಮೊದಲಿಗೆ ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾ ಕೇವಲ 79 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಆಘಾತ ಅನುಭವಿಸಿದೆ. ಲಾರ್ಡ್ಸ್ ಅಂಗಳದಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯವನ್ನು ಗೆದ್ದು ಬೀಗಿದ ಉತ್ಸಾಗದಲ್ಲಿದ್ದ ಕೊಹ್ಲಿ ಬಳಗಕ್ಕೆ ಹೆಡಿಂಗ್ಲೆ ಅಂಗಳ ಭಾರೀ ಹಿನ್ನಡೆಯುಂಟು ಮಾಡಿದೆ. ಈ ಮೂಲಕ ವಿರಾಟ್ ಕೊಹ್ಲಿ ಬಳಗ 1952ರ ಬಳಿಕ ಅತ್ಯಂತ ಕನಿಷ್ಠ ಮೊತ್ತವನ್ನು ದಾಖಲಿಸಿದೆ.
ಇಂಗ್ಲೆಂಡ್ ಆಡುವ ಬಳಗ: ರೋರಿ ಬರ್ನ್ಸ್, ಹಸೀಬ್ ಹಮೀದ್, ಡೇವಿಡ್ ಮಲನ್, ಜೋ ರೂಟ್ (ನಾಯಕ), ಜಾನಿ ಬೈರ್‌ಸ್ಟೊವ್, ಜೋಸ್ ಬಟ್ಲರ್ (ವಿಕೆಟ್ ಕೀಪರ್), ಮೊಯೀನ್ ಅಲಿ, ಸ್ಯಾಮ್ ಕರನ್, ಕ್ರೇಗ್ ಓವರ್‌ಟನ್, ಒಲ್ಲಿ ರಾಬಿನ್ಸನ್, ಜೇಮ್ಸ್ ಆಂಡರ್ಸನ್
ಟೀಮ್ ಇಂಡಿಯಾ ಆಡುವ ಬಳಗ: ರೋಹಿತ್ ಶರ್ಮಾ, ಕೆಎಲ್ ರಾಹುಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ, ರಿಷಭ್ ಪಂತ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಇಶಾಂತ್ ಶರ್ಮಾ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್