ಭಾರತ ಹಾಗೂ ಇಂಗ್ಲೆಂಡ್ ನಡುವಣ ಐದನೇ ಟೆಸ್ಟ್ ಪಂದ್ಯ ರೋಚಕತೆ ಹೆಚ್ಚಿಸಿದೆ. ಈ ಪಂದ್ಯ ನಾಲ್ಕನೇ ದಿನಕ್ಕೆ ಮುಗಿಯುತ್ತದೆ ಎಂಬ ಲೆಕ್ಕಾಚಾರವನ್ನು ಹಾಕಿಕೊಂಡಿದ್ದ ಅಭಿಮಾನಿಗಳಿಗೆ, ವರುಣ್ ತಣ್ಣೀರು ಎರಚಿದ್ದಾನೆ. ಸರಣಿಯುದ್ದಕ್ಕೂ ಅಮೋಘ ಪ್ರದರ್ಶನ ನೀಡಿರುವ ಟೀಮ್ ಇಂಡಿಯಾ ಗೆಲುವಿನ ಕನಸು ಕಾಣುತ್ತಿದೆ. ಆದರೆ ಇದು ಸುಲಭವಾಗಿಲ್ಲ ಎಂಬುದು ಟೀಮ್ ಇಂಡಿಯಾಗೂ ತಿಳಿದಿದೆ. ಆದರೂ ಕೊನೆಯ ಟೆಸ್ಟ್ ಪಂದ್ಯ ರೋಚಕತೆ ಹೆಚ್ಚಿಸಿದೆ.
ಇಂಗ್ಲೆಂಡ್ ನಾಲ್ಕನೇ ದಿನದಾಟದ ಆರಂಭದಲ್ಲಿ ಭಾರತದ ಬೌಲರ್‌ಗಳು ಕರಾರುವಕ್ ದಾಳಿ ನಡೆಸಿ ಆತಿಥೇಯ ತಂಡಕ್ಕೆ ಕಾಟ ನೀಡಿತು. ಎರಡನೇ ಇನಿಂಗ್ಸ್‌ನ್ನು ಇಂಗ್ಲೆಂಡ್ 50 ರನ್ ಗೆ ಒಂದು ವಿಕೆಟ್ ಕಳೆದುಕೊಂಡು ಆರಂಭಿಸಿತು. ಮೊದಲಾವಧಿಯಲ್ಲಿ ಟೀಮ್ ಇಂಡಿಯಾದ ವೇಗದ ಬೌಲರ್‌ಗಳು ಮೊನಚಾದ ದಾಳಿ ಸಂಘಟಿಸಿದರು. ಭೋಜನದ ವಿರಾಮದ ವೇಳೆಗೆ ಇಂಗ್ಲೆಂಡ್ 3 ವಿಕೆಟ್ ನಷ್ಟಕ್ಕೆ 164 ರನ್ ಸೇರಿಸಿತು. ಈ ವೇಳೆ ಭಾರತದ ಪಾಳಯದಲ್ಲಿ ಆತ್ಮವಿಶ್ವಾಸ ಮೂಡಿತ್ತು.

ನಾಲ್ಕನೇ ವಿಕೆಟ್‌ಗೆ ಇಂಗ್ಲೆಂಡ್ ತಂಡದ ಭರವಸೆಯ ಬ್ಯಾಟರ್‌ಗಳಾದ ಜೋ ರೂಟ್ ಹಾಗೂ ಹ್ಯಾರಿ ಬ್ರೂಕ್ ಜೋಡಿ ಇಂಡಿಯಾದ ಬೌಲರ್‌ಗಳನ್ನು ಕಾಡಿತು. ಈ ವೇಳೆ ಈ ಜೋಡಿಯನ್ನು ಕಟ್ಟಿ ಹಾಕುವುದು ನಿಜಕ್ಕೂ ಟೀಮ್ ಇಂಡಿಯಾ ಬೌಲರ್‌ಗಳಿಗೆ ಸವಾಲೇ ಆಗಿತ್ತು. ಈ ಹಂತದಲ್ಲಿ ಮೊಹಮ್ಮದ್ ಸಿರಾಜ್ ಬ್ರೂಕ್ ಅವರ ಕ್ಯಾಚ್ ಒಂದನ್ನು ಬಿಟ್ಟು ಕೈ ಸುಟ್ಟುಕೊಂಡರು. ಪರಿಣಾಮ ಈ ಜೀವದಾನದ ಲಾಭ ಪಡೆದ ಬ್ರೂಕ್ ಶತಕ ಬಾರಿಸಿ ಅಬ್ಬರಿಸಿದರು.
ಬ್ರೂಕ್ ಹಾಗೂ ರೂಟ್ ಜೋಡಿ 211 ಎಸೆತಗಳಲ್ಲಿ 195 ರನ್ ಸಿಡಿಸಿದ್ದಾರೆ. ಬ್ರೂಕ್ ಸೊಗಸಾದ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಇವರು ಟಿ20 ಶೈಲಿಯಲ್ಲಿ ಬ್ಯಾಟ್ ಮಾಡಿ ಅಬ್ಬರಿಸಿದರು. ಬ್ರೂಕ್ 98 ಎಸೆತಗಳಲ್ಲಿ 14 ಬೌಂಡರಿ, 2 ಸಿಕ್ಸರ್ ಸಹಾಯದಿಂದ 111 ರನ್ ಬಾರಿಸಿ ಆಕಾಶ್ ದೀಪ್‌ಗೆ ವಿಕೆಟ್ ಒಪ್ಪಿಸಿದರು. ಇವರು ಔಟ್ ಆದ ಬಳಿಕ ಭರವಸೆಯ ಆಟಗಾರ ಜೋ ರೂಟ್ ತಮ್ಮ ಶತಕ ಪೂರೈಸಿದರು. 12 ಬೌಂಡರಿ ನೆರವಿನಿಂದ ರೂಟ್ 105 ರನ್ ಬಾರಿಸಿ ಪ್ರಸಿದ್ಧ್ ಕೃಷ್ಣಾ ಅವರಿಗೆ ವಿಕೆಟ್ ಒಪ್ಪಿಸಿದರು.
ಜಾಕಬ್ ಬೆಥೆಲ್ (5) ಜವಾಬ್ದಾರಿ ಮರೆತರು. ಟೀಮ್ ಇಂಡಿಯಾದ ಪರ ಪ್ರಸಿದ್ಧ್ ಕೃಷ್ಣಾ 3, ಮೊಹಮ್ಮದ್ ಸಿರಾಜ್ 2 ವಿಕೆಟ್ ಪಡೆದರು. ಮಳೆಯಿಂದ ದಿನದಾಟ ನಿಂತಾಗ ಇಂಗ್ಲೆಂಡ್ 6 ವಿಕೆಟ್‌ಗೆ 339 ರನ್ ಸೇರಿಸಿದೆ.

ರೋಚಕ ಘಟ್ಟದತ್ತ ಈಗ ಸರಣಿ ಮುಖಮಾಡಿದೆ. ಈ ಪಂದ್ಯದಲ್ಲಿ ಕ್ರಿಸ್ ವೋಕ್ಸ್ ಗಾಯಕ್ಕೆ ತುತ್ತಾಗಿದ್ದರಿಂದ ಬ್ಯಾಟಿಂಗ್ ಆಡುತ್ತಾರೋ ಇಲ್ಲವೋ ಎಂಬ ಬಗ್ಗೆ ಖಚಿತತೆ ಇಲ್ಲ. ಈ ಪಂದ್ಯದಲ್ಲಿ ಇಂಗ್ಲೆಂಡ್ ಜಯಕ್ಕೆ 35 ರನ್ ಅವಶ್ಯಕತೆ ಇದೆ. ಭಾರತದ ಗೆಲುವಿಗೆ ಇನ್ನು 4 ವಿಕೆಟ್ ಅವಶ್ಯಕತೆ ಇದೆ. ಪಂದ್ಯ ಹಾಗೂ ಸರಣಿಯಾರತ್ತ ವಾಲುತ್ತದೆ ಎಂಬ ಬಗ್ಗೆ ಈಗ ಕುತೂಹಲ ಮನೆ ಮಾಡಿದೆ.