
ಇಂಗ್ಲೆಂಡ್ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿಯೂ ಭಾರತ ತಂಡ ಅಮೋಘ ಪ್ರದರ್ಶನ ನೀಡುವ ಮೂಲಕ ಗೆಲುವು ಸಾಧಿಸಿದೆ. ಎರಡನೇ ಪಂದ್ಯದಲ್ಲಿಯೂ ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗದಲ್ಲಿ ಸಂಪೂರ್ಣ ಮೇಲುಗೈ ಸಾಧಿಸಿದ ಭಾರತ ಇಂಗ್ಲೆಂಡ್ ತಂಡಕ್ಕೆ ಯಾವ ಹಂತದಲ್ಲಿಯೂ ಅವಕಾಶವನ್ನೇ ನೀಡಲಿಲ್ಲ. ಈ ಪ್ರದರ್ಶನದ ಬಗ್ಗೆ ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕಲ್ ವಾನ್ ಪ್ರತಿಕ್ರಿಕ್ರಿಯಿಸಿದ್ದು ಭಾರತದ ಆಟಕ್ಕೆ ಹೊಗಳಿಕೆಯ ಸುರಿಮಳೆಗೈದಿದ್ದಾರೆ.
ಟಾಸ್ ಸೋತು ಮೊದಲಿಗೆ ಬ್ಯಾಟಿಂಗ್‌ಗೆ ಇಳಿದ ಭಾರತ ಆರಂಭದಲ್ಲಿಯೇ ಸ್ಪೋಟಕ ಆಟಕ್ಕೆ ಮುಂದಾಯಿತು. ರೋಹಿತ್ ಶರ್ಮಾ ಹಾಗೂ ರಿಷಭ್ ಪಂತ್ ಉತ್ತಮ ಆರಂಭವನ್ನು ನೀಡಿದರು. ಒಂದು ಹಂತದಲ್ಲಿ ಭಾರತ ಸತತವಾಗಿ ವಿಕೆಟ್ ಕಳೆದುಕೊಂಡು ಹಿನ್ನಡೆಯನ್ನು ಅನುಭವಿಸಿತಾದರೂ ಬಳಿಕ ಕೆಲ ಕ್ರಮಾಂಕದಲ್ಲಿ ರವೀಂದ್ರ ಜಡೇಜಾ ತಂಡಕ್ಕೆ ನೆರವಾದರು. ಒಂದು ಹಂತದಲ್ಲಿ 89 ರನ್‌ಗಳಿಗೆ ಐದು ವಿಕೆಟ್ ಕಳೆದುಕೊಂಡಿದ್ದ ಭಾರತವನ್ನು ರವೀಂದ್ರ ಜಡೇಜಾ 170 ರನ್‌ಗಳನ್ನು ಗಳಿಸುವಂತೆ ಮಾಡಿದರು. ಈ ಮೂಲಕ ಭಾರತ ಆತಿಥೆಯ ಇಂಗ್ಲೆಂಡ್‌ಗೆ ಸವಾಲಿನ ಗುರಿ ನೀಡಲು ಕಾರಣವಾಯಿತು.
ಇದನ್ನು ಬೆನ್ನಟ್ಟಿದ ಇಂಗ್ಲೆಂಡ್ ತಂಡಕ್ಕೆ ಮತ್ತೊಮ್ಮೆ ಆಘಾತ ನೀಡಿದ್ದು ಭಾರತದ ವೇಗಿ ಭುವನೇಶ್ವರ್ ಕುಮಾರ್. ಬೌಲಿಂಗ್‌ನಲ್ಲಿಯೂ ಭಾರತ ಪವರ್‌ಪ್ಲೇನಲ್ಲಿ ಸಂಪೂರ್ಣ ಮೇಲುಗೈ ಸಾಧಿಸಿತು. ಜೇಸನ್ ರಾಯ್ ಅವರನ್ನು ಇನ್ನಿಂಗ್ಸ್‌ನ ಮೊದಲ ಎಸೆತದಲ್ಲಿಯೇ ಭುವಿ ಬಲಿ ಪಡೆದರು ಜೋಸ್ ಬಟ್ಲರ್ ಕೂಡ ಒಂದಂಕಿಗೆ ಔಟಾಗಲು ಕಾರಣವಾದರು. ಈ ಪಂದ್ಯದಲ್ಲಿ ಭುವನೇಶ್ವರ್ ಕುಮಾರ್ ಮುರು ವಿಕೆಟ್ ಸಂಪಾದಿಸಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಎರಡು ಪಂದ್ಯದಲ್ಲಿಯೂ ಭಾರತ ನೀಡಿದ ಪ್ರದರ್ಶನವನ್ನು ದೃಷ್ಟೊಯಲ್ಲಿಟ್ಟುಕೊಂಡು ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೂಕಲ್ ವಾನ್ ಭಾರತ ತಮಡದ ಪ್ರದರ್ಶನದ ಬಗ್ಗೆ ಭಾರೀ ಮೆಚ್ಚುಗೆ ಸೂಚಿಸಿದ್ದಾರೆ. ಎರಡು ಪಂದ್ಯಗಳಲ್ಲಿ ಅದ್ಭುತ ಪ್ರದರ್ಶನ ನಿಡುವ ಮೂಲಕ ಭಾರತ ಭರ್ಜರಿಯಾಗಿ ವಿಶ್ವಕಪ್‌ನತ್ತ ಸಾಗುತ್ತಿದೆ ಎಂದಿದ್ದಾರೆ ಮೈಕಲ್ ವಾನ್.
"ಭಾರತದ ಎರಡು ಪ್ರದರ್ಶನಗಳು ಕೂಡ ಉತ್ಕೃಷ್ಟ ದರ್ಜೆಯದ್ದು. ಆದರೂ ಕೆಲ ವಿಭಾಗಗಳಲ್ಲಿ ಸುಧಾರಿಸಲು ಸಾಕಷ್ಟು ಅವಕಾಶಗಳಿದೆ. ಇನ್ನೂ ಒಂದಿಬ್ಬರು ಉತ್ತಮ ಆಟಗಾರರು ಸ್ಥಾನ ಪಡೆದಿಲ್ಲ. ಅವರು ತಂಡಕ್ಕೆ ಸೇರ್ಪಡೆಯಾದರೆ ಮತ್ತಷ್ಟು ಬಲಿಷ್ಠವಾಗಲಿದೆ. ಉತ್ತಮ ಆತ್ಮವಿಶ್ವಾಸದೊಂದಿಗೆ ಭಾರತ ಟಿ20 ವಿಶ್ವಕಪ್‌ನತ್ತ ಹೆಜ್ಜೆಹಾಕುತ್ತಿದೆ" ಎಂದಿದ್ದಾರೆ ಮೈಕಲ್ ವಾನ್.
ಇತ್ತಂಡಗಳ ಆಡುವ 11ರ ಬಳಗ: ಭಾರತ: ರೋಹಿತ್ ಶರ್ಮಾ (ನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್, ರವೀಂದ್ರ ಜಡೇಜಾ, ಹರ್ಷಲ್ ಪಟೇಲ್, ಭುವನೇಶ್ವರ್ ಕುಮಾರ್, ಜಸ್ಪ್ರೀತ್ ಬುಮ್ರಾ, ಯುಜ್ವೇಂದ್ರ ಚಾಹಲ್
ಇಂಗ್ಲೆಂಡ್: ಜೇಸನ್ ರಾಯ್, ಜೋಸ್ ಬಟ್ಲರ್ (ನಾಯಕ/ವಿಕೆಟ್ ಕೀಪರ್), ಡೇವಿಡ್ ಮಲಾನ್, ಲಿಯಾಮ್ ಲಿವಿಂಗ್‌ಸ್ಟೋನ್, ಹ್ಯಾರಿ ಬ್ರೂಕ್, ಮೊಯಿನ್ ಅಲಿ, ಸ್ಯಾಮ್ ಕುರಾನ್, ಡೇವಿಡ್ ವಿಲ್ಲಿ, ಕ್ರಿಸ್ ಜೋರ್ಡಾನ್, ರಿಚರ್ಡ್ ಗ್ಲೀಸನ್, ಮ್ಯಾಥ್ಯೂ ಪಾರ್ಕಿನ್ಸನ್