
ಶನಿವಾರ ರೋಸ್‌ಬೌಲ್ ಕ್ರೀಡಾಂಗಣದಲ್ಲಿ ಶ್ರೀಲಂಕಾ ತಂಡದ ವಿರುದ್ಧ ಟಿ20 ಸರಣಿಯ ಮೂರನೇ ಪಂದ್ಯದಲ್ಲಿಯೂ ಇಂಗ್ಲೆಂಡ್ ತಂಡ ಗೆಲುವು ಸಾಧಿಸಿದೆ. ಈ ಮೂಲಕ ಮೂರು ಪಂದ್ಯಗಳ ಟಿ20 ಸರಣಿಯನ್ನು ಕ್ಲೀನ್ ಸ್ವೀಪ್ ಮೂಲಕ ತನ್ನ ವಶಕ್ಕೆ ಪಡೆದುಕೊಂಡಿದೆ.
ಸರಣಿಯ ಮೂರನೇ ಹಾಗೂ ಅಂತಿಮ ಪಂದ್ಯವನ್ನು 89 ರನ್‌ಗಳ ದೊಡ್ಡ ಅಂತರದಿಂದ ಇಂಗ್ಲೆಂಡ್ ಜಯ ಸಾಧಿಸಿದೆ. ಡೇವಿಡ್ ಮಲನ್ ಈ ಪಂದ್ಯದಲ್ಲಿ ಭರ್ಜರಿ ಫಾರ್ಮ್‌ಗೆ ಮರಳುವಲ್ಲಿ ಯಶಸ್ವಿಯಾಗಿದ್ದು 48 ಎಸೆತಗಳಿಂದ 76 ರನ್ ಬಾರಿಸಿದ್ದಾರೆ. ಸರಣಿಯ ಮೊದಲ ಎರಡು ಪಂದ್ಯಗಳಲ್ಲಿಯೂ ಮಲನ್ ಎರಡಂಕಿ ತಲುಪುವಲ್ಲಿಯೂ ವಿಫಲರಾಗಿದ್ದರು. ಕಳೆದ ಏಳು ಇನ್ನಿಂಗ್ಸ್‌ಗಳಲ್ಲಿ ವಿಶ್ವದ ನಂಬರ್ ಟಿ20 ಬ್ಯಾಟ್ಸ್‌ಮನ್ ಸಿಡಿಸಿದ ಮೊದಲ ಅರ್ಧ ಶತಕ ಇದಾಗಿದೆ.
ಮೊದಲಿಗೆ ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ಆರಂಭಿಕ ಜೋಡಿಯ ಭರ್ಜರಿ ಪ್ರದರ್ಶನದಿಂದ ಶ್ರೀಲಂಕಾಗೆ ಸವಾಲಾಯಿತು. ಮೊದಲ ವಿಕೆಟ್‌ಗೆ 105 ರನ್‌ಗಳ ಜೊತೆಯಾಟವನ್ನು ನೀಡಿದ್ದರು ಬೈರ್‌ಸ್ಟೋವ್ ಹಾಗೂ ಡೇವಿಡ್ ಮಲನ್ ಜೋಡಿ. ಇಬ್ಬರು ಆರಂಭಿಕರು ಕೂಡ ಅರ್ಧ ಶತಕ ದಾಖಲಿಸುವಲ್ಲಿ ಯಶಸ್ವಿಯಾದರು. ಬೈರ್‌ಸ್ಟೋವ್ 51 ರನ್ ಬಾರಿಸಿದರೆ ಮಲನ್ 76 ರನ್‌ಗಳ ಕೊಡುಗೆ ನೀಡಿದರು. ಈ ಮೂಲಕ ಇಂಗ್ಲೆಂಡ್ ನಿಗದಿತ 20 ಓವರ್‌ಗಳಲ್ಲಿ 180 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡು ದೊಡ್ಡ ಮೊತ್ತದ ಗುರಿಯನ್ನು ಶ್ರೀಲಂಕಾ ತಂಡದ ಮುಂದಿಟ್ಟಿತು.
ಈ ಗುರಿಯನ್ನು ಬೆನ್ನಟ್ಟಿದ ಶ್ರೀಲಂಕಾ ತಂಡ ಆರಂಭದಲ್ಲಿಯೇ ಆಘಾತಕ್ಕೆ ಒಳಗಾಯಿತು. 4 ರನ್‌ಗಳಿಗೆ ಮೊದಲ ವಿಕೆಟ್ ಕಳೆದುಕೊಂಡಿತು. ಈ ಮೂಲಕ ಆರಂಭದಿಂದಲೇ ಕುಸಿತ ಕಾಣಲು ಆರಂಭವಾಯಿತು. ದೊಡ್ಡ ಜೊತೆಯಾಟವನ್ನು ನೀಡಲು ಲಂಕಾ ದಾಂಡಿಗರು ವಿಫಲರಾದರು. ಈ ಮೂಲಕ ಕೇವಲ 91 ರನ್‌ಗಳಿಗೆ ಶ್ರೀಲಂಕಾ ತನ್ನ ಎಲ್ಲಾ ವಿಕೆಟ್ ಕಳೆದುಕೊಂಡಿತು.
ಇಂಗ್ಲೆಂಡ್ ತಂಡದ ಪರವಾಗಿ ಡೇವಿಡ್ ವಿಲ್ಲೆ 3 ವಿಕೆಟ್ ಕಬಳಿಸಿದರೆ ಸ್ಯಾಮ್ ಕರನ್ 2 ವಿಕೆಟ್ ಪಡೆದು ಮಿಂಚಿದರು. ಕ್ರಿಸ್ ವೋಕ್ಸ್, ಕ್ರಿಸ್ ಜೋರ್ಡನ್, ಲಿವಿಂಗ್‌ಸ್ಟನ್ ಹಾಗೂ ಮೊಯೀನ್ ಅಲಿ ತಲಾ ಒಂದು ವಕೆಟ್ ಸಂಪಾದಿಸಿದ್ದಾರೆ. ಈ ಮೈಲಕ ಇಂಗ್ಲೆಂಡ್ ಮೂರು ಪಂದ್ಯಗಳ ಸರಣಿಯಲ್ಲಿ ಮೂರನ್ನು ಕೂಡ ಗೆದ್ದುಕೊಂಡಿದೆ.