ಜೂನ್ 2ರಿಂದ ಯುಎಸ್ಎ ಮತ್ತು ವೆಸ್ಟ್ ಇಂಡೀಸ್ ಸಹ-ಆತಿಥ್ಯದಲ್ಲಿ ನಡೆಯಲಿರುವ 2024ರ ಐಸಿಸಿ ಟಿ20 ವಿಶ್ವಕಪ್ ಪಂದ್ಯಾವಳಿಗೆ ಕ್ಷಣಗಣನೆ ಪ್ರಾರಂಭವಾಗಿದೆ. ಮುಖ್ಯ ಪಂದ್ಯಾವಳಿ ಆರಂಭಕ್ಕೂ ಮುನ್ನ ಈಗಾಗಲೇ ಅಭ್ಯಾಸ ಪಂದ್ಯಗಳು ನಡೆಯುತ್ತಿವೆ.
ಭಾನುವಾರದಂದು ನ್ಯೂಯಾರ್ಕ್‌ನಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಯುಎಸ್ಎ ಮತ್ತು ಕೆನಡಾ ತಂಡಗಳು ಪರಸ್ಪರ ಮುಖಾಮುಖಿಯಾಗಲಿವೆ. ಟಿ20 ವಿಶ್ವಕಪ್ ಪ್ರತಿಷ್ಠಿತ ಪ್ರಶಸ್ತಿಗಾಗಿ ವಿಶ್ವದ ಒಟ್ಟು 20 ತಂಡಗಳು ಸೆಣಸಾಡಲಿವೆ.

ರೋಹಿತ್ ಶರ್ಮಾ ನಾಯಕತ್ವದ ಭಾರತ ಈ ಬಾರಿ ಐಸಿಸಿ ಟಿ20 ವಿಶ್ವಕಪ್ ಪ್ರಶಸ್ತಿ ಗೆಲ್ಲುವ ಅಗ್ರ ಫೇವರಿಟ್ ತಂಡಗಳಲ್ಲಿ ಒಂದಾಗಿದೆ ಎಂದು ಮಾಜಿ ಕ್ರಿಕೆಟಿಗರು ಭವಿಷ್ಯ ನುಡಿಯುತ್ತಿದ್ದಾರೆ. ಭಾರತ ತಂಡ ಜೂನ್ 5ರಂದು ನ್ಯೂಯಾರ್ಕ್‌ನ ನಸ್ಸೌ ಕೌಂಟಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಐರ್ಲೆಂಡ್ ವಿರುದ್ಧದ ಪಂದ್ಯದೊಂದಿಗೆ ಅಭಿಯಾನ ಆರಂಭಿಸಲಿದೆ.
ಇದೇ ವೇಳೆ 2024ರ ಟಿ20 ವಿಶ್ವಕಪ್‌ಗಾಗಿ ಭಾರತ ತಂಡದಲ್ಲಿ ಒಂದು ಬದಲಾವಣೆ ಮಾಡುವುದಾದರೆ, ಯಶಸ್ವಿ ಜೈಸ್ವಾಲ್‌ಗಿಂತ ಶುಭ್ಮನ್ ಗಿಲ್‌ಗೆ ಆದ್ಯತೆ ನೀಡಬೇಕು ಎಂದು ಇಂಗ್ಲೆಂಡ್ ತಂಡದ ಮಾಜಿ ನಾಯಕ ಇಯಾನ್ ಮಾರ್ಗನ್ ಹೇಳಿದ್ದಾರೆ.
ಎಡಗೈ ಬ್ಯಾಟರ್ ಯಶಸ್ವಿ ಜೈಸ್ವಾಲ್ ಅವರನ್ನು 15 ಸದಸ್ಯರ ಮುಖ್ಯ ತಂಡದಲ್ಲಿ ರೋಹಿತ್ ಶರ್ಮಾ ಜೊತೆಗೆ ನಿಗದಿಪಡಿಸಿದ ಆರಂಭಿಕ ಬ್ಯಾಟರ್ ಆಗಿ ಆಯ್ಕೆ ಮಾಡಿದರೆ, ಬಲಗೈ ಬ್ಯಾಟರ್ ಶುಭ್ಮನ್ ಗಿಲ್ ಅವರನ್ನು ಮೀಸಲು ಆಟಗಾರನಾಗಿ ಸೇರಿಸಿಕೊಳ್ಳಲಾಯಿತು.

ಶುಭ್ಮನ್ ಗಿಲ್ ಮತ್ತು ಯಶಸ್ವಿ ಜೈಸ್ವಾಲ್ ಇಬ್ಬರೂ ಐಪಿಎಲ್ 2024ರಲ್ಲಿ ತಮ್ಮ ತಂಡಗಳಿಗೆ ಕ್ರಮವಾಗಿ 426 ಮತ್ತು 435 ರನ್ ಗಳಿಸಿದ ಕಾರಣ ಉತ್ತಮ ಪಂದ್ಯಾವಳಿಯನ್ನು ಹೊಂದಿದ್ದರು.
ಆದಾಗ್ಯೂ, ಭಾರತೀಯ ತಂಡದ ಆಯ್ಕೆಗಾರರು ಯಶಸ್ವಿ ಜೈಸ್ವಾಲ್ ಅವರನ್ನು ಟಿ20 ವಿಶ್ವಕಪ್ ತಂಡಕ್ಕೆ ಆಯ್ಕೆ ಮಾಡಿದರು. ಇದೀಗ ಇಯಾನ್ ಮಾರ್ಗನ್ ಅವರು ಭಾರತ ತಂಡದ ಆರಂಭಿಕ ಸ್ಥಾನಕ್ಕೆ ಯಶಸ್ವಿ ಜೈಸ್ವಾಲ್ ಬದಲಿಗೆ ಶುಭ್ಮನ್ ಗಿಲ್ ಅವರನ್ನು ಆಯ್ಕೆ ಮಾಡುವುದಾಗಿ ಹೇಳಿದರು.
ಶುಭ್ಮನ್ ಗಿಲ್ ಭಾರತ ತಂಡದ ಭವಿಷ್ಯದ ನಾಯಕರಾಗಿದ್ದಾರೆ. ಅವರು ದೊಡ್ಡ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದರು ಎಂದು ಇಯಾನ್ ಮಾರ್ಗನ್ ಅಭಿಪ್ರಾಯಪಟ್ಟರು.
"ಟಿ20 ವಿಶ್ವಕಪ್‌ಗೆ ನಾನು ಭಾರತ ತಂಡವನ್ನು ಆಯ್ಕೆ ಮಾಡುತ್ತಿದ್ದರೆ, ನಾನು ಬಹುಶಃ ವಿಭಿನ್ನವಾಗಿ ತೆಗೆದುಕೊಳ್ಳುತ್ತಿದ್ದ ಏಕೈಕ ನಿರ್ಧಾರವೆಂದರೆ, ಯಶಸ್ವಿ ಜೈಸ್ವಾಲ್ ಬದಲಿಗೆ ಶುಭ್ಮನ್ ಗಿಲ್ ಅವರನ್ನು ಆಯ್ಕೆ ಮಾಡುತ್ತಿದ್ದೆ. ಏಕೆಂದರೆ ನಾನು ಶುಭ್ಮನ್ ಗಿಲ್ ಜೊತೆಗೆ ಆಡಿದ್ದೇನೆ," ಎಂದು ಇಂಗ್ಲೆಂಡ್ ಮಾಜಿ ನಾಯಕ ಇಯಾನ್ ಮಾರ್ಗನ್ ತಿಳಿಸಿದರು.

"ಶುಭ್ಮನ್ ಗಿಲ್ ಹೇಗೆ ಯೋಚಿಸುತ್ತಾನೆಂದು ನನಗೆ ತಿಳಿದಿದೆ. ಅವನು ಹೇಗೆ ಆಡುತ್ತಾನೆ ಎಂದು ನನಗೆ ತಿಳಿದಿದೆ. ಆತ ಭಾರತ ತಂಡಕ್ಕೆ ಭವಿಷ್ಯದ ನಾಯಕರಾಗಿದ್ದಾರೆ ಮತ್ತು ದೊಡ್ಡ ಟೂರ್ನಿಯಲ್ಲಿ ನಿಮಗೆ ಉತ್ತಮ ಪ್ರದರ್ಶನ ನೀಡುವ ಆಟಗಾರ ಬೇಕು ಎಂದು ನಾನು ಭಾವಿಸುತ್ತೇನೆ," ಎಂದು ಸ್ಕೈ ಸ್ಪೋರ್ಟ್ಸ್‌ನಲ್ಲಿನ ಸಂವಾದದಲ್ಲಿ ಇಯಾನ್ ಮಾರ್ಗನ್ ಅಭಿಪ್ರಾಯಪಟ್ಟರು.
ಇದೇ ವೇಳೆ, ಮಧ್ಯಮ ಕ್ರಮಾಂಕದಲ್ಲಿನ ಸ್ಫೋಟಕ ಬ್ಯಾಟರ್ ರಿಂಕು ಸಿಂಗ್ ಕೂಡ ಟಿ20 ವಿಶ್ವಕಪ್‌ನ ಭಾರತ ತಂಡದಿಂದ ಹೊರಗುಳಿದಿರುವ ಬಗ್ಗೆ ಪ್ರತಿಕ್ರಿಯಿಸಿದರು.
"ಹೌದು. ಉತ್ತಮ ಪ್ರದರ್ಶನದ ಹೊರತಾಗಿಯೂ ಆಯ್ಕೆಯಾಗದಿದ್ದರೆ ಯಾರಿಗಾದರೂ ಸ್ವಲ್ಪ ಬೇಸರವಾಗುತ್ತದೆ. ಆದರೆ, ಈ ಬಾರಿ ತಂಡದ ಸಂಯೋಜನೆಯಿಂದಾಗಿ ನಾನು ಆಯ್ಕೆಯಾಗಲು ಸಾಧ್ಯವಾಗಲಿಲ್ಲ. ಪರವಾಗಿಲ್ಲ, ಕೈಗೆ ಸಿಗದ ವಿಷಯಗಳ ಬಗ್ಗೆ ಹೆಚ್ಚು ಯೋಚಿಸಬಾರದು. ಹೌದು, ನಾನು ಆರಂಭದಲ್ಲಿ ಸ್ವಲ್ಪ ಅಸಮಾಧಾನಗೊಂಡಿದ್ದೆ," ಎಂದು ರಿಂಕು ಸಿಂಗ್ ಹೇಳಿದರು.
"ಏನೇ ನಡೆದರೂ ಚೆನ್ನಾಗಿದೆ. ಏನಾಗುತ್ತದೆಯೋ ಅದು ಒಳ್ಳೆಯದಕ್ಕೆ ನಡೆಯುತ್ತದೆ. ರೋಹಿತ್ ಭಯ್ಯಾ ವಿಶೇಷ ಏನನ್ನೂ ಹೇಳಿಲ್ಲ. ಕಷ್ಟಪಟ್ಟು ಕೆಲಸ ಮಾಡಿ ಎಂದು ಮಾತ್ರ ಹೇಳಿದರು. ಎರಡು ವರ್ಷಗಳ ನಂತರ ಮತ್ತೊಂದು ವಿಶ್ವಕಪ್ ಇದೆ. ಹೆಚ್ಚು ಚಿಂತಿಸುವ ಅಗತ್ಯವಿಲ್ಲ. ಅವರು ನನಗೆ ಹೇಳಿದ್ದು ಇದನ್ನೇ," ಎಂದು ದೈನಿಕ್ ಜಾಗರಣ್‌ಗೆ ರಿಂಕು ಸಿಂಗ್ ತಿಳಿಸಿದರು.