ರಾಯಲ್ ಚಾಲೆಂಜರ್ಸ್ ಬೆಂಗಳೂರು ಐಪಿಎಲ್‌ನಲ್ಲಿ ಒಮ್ಮೆಯೂ ಪ್ರಶಸ್ತಿಯನ್ನು ಗೆದ್ದಿಲ್ಲ. ಆದರೆ ಈ ಬಾರಿ ಪ್ರಶಸ್ತಿ ಬರವನ್ನು ನೀಗಿಸಲು ಆರ್‌ಸಿಬಿ ಪಾಳಯ ಸಜ್ಜಾಗಿದೆ. ದೇಶೀಯ ಹಾಗೂ ವಿದೇಶಿ ಆಟಗಾರರು ಆರ್‌ಸಿಬಿ ತಂಡದಲ್ಲಿ ಸ್ಥಾನ ಪಡೆದಿದ್ದು, ಕಪ್ ಗೆಲುವಿನ ಆಸೆಯನ್ನು ಚಿಗುರಿಸಿದ್ದಾರೆ. ಆರ್‌ಸಿಬಿ ಕಪ್ ಗೆಲುವಿನ ಕನಸಿಗೆ ಸ್ಟಾರ್ ಆಟಗಾರರು ಜವಾಬ್ದಾರಿಯುತ ಆಟ ಆಡುವ ಇರಾದೆಯನ್ನು ಹೊಂದಿದ್ದಾರೆ.
ಈಗಾಗಲೇ ಆಟಗಾರರು ಮೈದಾನದಲ್ಲಿ ಬೆವರು ಹರಿಸುತ್ತಿದ್ದಾರೆ. ಸ್ಟಾರ್ ಗಿರಿಯನ್ನು ಪಡೆದ ಆಟಗಾರರು, ಅದನ್ನು ಉಳಿಸಿಕೊಳ್ಳಲು ಪ್ರಯತ್ನ ಪಡುತ್ತಿದ್ದಾರೆ. ಇನ್ನು ಯುವಕರು ಸ್ಟಾರ್ ಗಿರಿಯನ್ನು ಪಡೆಯಲು ಶ್ರಮಿಸುತ್ತಿದ್ದಾರೆ. ಅಂತಾರಾಷ್ಟ್ರೀಯ ಹಾಗೂ ವಿದೇಶಿ ಲೀಗ್‌ಗಳಲ್ಲಿ ಬೆವರು ಹರಿಸುತ್ತಿರುವ ಆಟಗಾರರು ತಮ್ಮ ತಂಡದ ಪರ ಅಬ್ಬರಿಸುವ ಸೂಚನೆ ನೀಡಿದ್ದಾರೆ. ದೇಶೀಯ ಪ್ಲೇಯರ್‌ಗಳು ರಣಜಿ ಟೂರ್ನಿಯಲ್ಲಿ ಬೆಸ್ಟ್ ಪರ್ಫಾಮೆನ್ಸ್ ನೀಡ್ತಾ ಇದ್ದಾರೆ.

ಆರ್‌ಸಿಬಿ ತಂಡದಲ್ಲಿ ಸ್ಟಾರ್ ಆಟಗಾರರಿಗೆ ಏನು ಕಮ್ಮಿ ಇಲ್ಲ. ಆದರೆ ಜವಾಬ್ದಾರಿ ಮರೆಯುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದ್ದವು. ಆದರೆ ಈ ಬಾರಿಯ ಐಪಿಎಲ್‌ನಲ್ಲಿ ಆಟಗಾರರು ಸಂಘಟಿತ ಆಟದ ಮೂಲಕ ಅಭಿಮಾನಿಗಳಿಗೆ ಹಬ್ಬದೂಟವನ್ನು ಉಣಬಡಿಸಲು ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಅದರಲ್ಲಿ ಈ ವಿದೇಶಿ ಆಟಗಾರ ಸಹ ತನ್ನ ಧಮಾಕೆದಾರ ಬ್ಯಾಟಿಂಗ್‌ನಿಂದ ಆರ್‌ಸಿಬಿ ತಂಡಕ್ಕೆ ನೆರವಾಗುವ ಕನಸು ಕಂಡಿದ್ದಾನೆ.
ಇಂಗ್ಲೆಂಡ್ ತಂಡದ ಟಾಪ್ ಆರ್ಡರ್ ಬ್ಯಾಟರ್ ವಿಲ್ ಜಾಕ್ಸ್.. ಈ ಪ್ಲೇಯರ್ ತನ್ನ ಚೊಚ್ಚಲ ಐಪಿಎಲ್ ಪಂದ್ಯವನ್ನು ಆಡಲು ಎದುರು ನೋಡುತ್ತಿದ್ದಾರೆ. ಇವರಲ್ಲಿ ಟಾಪ್ ಆರ್ಡರ್‌ನಲ್ಲಿ ಬ್ಯಾಟಿಂಗ್ ಮಾಡುವ ಕ್ಷಮತೆ ಇದೆ. ಇಂಗ್ಲೆಂಡ್ ಪರ 11 ಟಿ20 ಪಂದ್ಯಗಳನ್ನು ಆಡಿ ಸೈ ಎನಿಸಿಕೊಂಡಿದ್ದಾರೆ. ಇವರಿಗೆ ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ನೀಡಿದರೆ ಆರ್‌ಸಿಬಿ ತಂಡದ ಬ್ಯಾಟಿಂಗ್ ಸ್ಟ್ರಾಂಗ್ ಆಗಲಿದೆ.
ಆರ್‌ಸಿಬಿ ತಂಡದ ಆರಂಭಿಕರಾಗಿ ನಾಯಕ ಫಾಫ್ ಡುಪ್ಲೇಸಿಸ್ ಹಾಗೂ ವಿರಾಟ್ ಕೊಹ್ಲಿ ಕಾಣಿಸಿಕೊಳ್ಳಬಹುದು. ಈ ಜೋಡಿ ಅಬ್ಬರದ ಆಟವನ್ನು ಪ್ರದರ್ಶಿಸಿ ರನ್‌ಗಳನ್ನು ಕಲೆ ಹಾಕಬಲ್ಲರು. ಅಲ್ಲದೆ ಎದುರಾಳಿ ತಂಡದ ರಣ ತಂತ್ರವನ್ನೇ ಬುಡಮೇಲು ಮಾಡಬಹುದು. ಮೂರನೇ ಕ್ರಮಾಂಕದಲ್ಲಿ ರಜತ್ ಪಟಿದಾರ್ ಆಡಬಲ್ಲರು. ಇನ್ನು ನಾಲ್ಕನೇ ಕ್ರಮಾಂಕದಲ್ಲಿ ಗ್ಲೇನ್ ಮ್ಯಾಕ್ಸ್‌ವೆಲ್ ಕಾಣಿಸಿಕೊಳ್ಳಲಿದ್ದಾರೆ. ಮೇಲ್ನೋಟಕ್ಕಂತು ಈ ಸ್ಲಾಟ್‌ಗಳು ಫುಲ್ ಆಗಿವೆ. ವಿಲ್ ಜಾಕ್ಸ್ ತಂಡದಲ್ಲಿ ಸ್ಥಾನ ಪಡೆದರೆ ಐದನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಬಲ್ಲರು. ಅಲ್ಲದೆ ವೇಗವಾಗಿ ರನ್‌ಗಳನ್ನು ಕಲೆ ಹಾಕುವ ಕ್ಷಮತೆಯನ್ನು ಹೊಂದಿದ್ದಾರೆ.

ವಿಲ್ ಜಾಕ್ಸ್ ಆರ್‌ಸಿಬಿ ತಂಡದಲ್ಲಿ ಆಡುವ ಅವಕಾಶವನ್ನು ಪಡೆದರೆ, ಮಿಡ್ಲ್ ಆರ್ಡರ್ ಸ್ಲಾಟ್ ಸ್ಟ್ರಾಂಗ್ ಆಗುತ್ತದೆ. ಅಲ್ಲದೆ ಈ ಪ್ಲೇಯರ್ ಪರಿಸ್ಥಿತಿಗೆ ತಕ್ಕಂತೆ ಬ್ಯಾಟ್ ಮಾಡುವ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ. ಇತ್ತೀಚಿಗೆ ದಕ್ಷಿಣ ಆಫ್ರಿಕಾದಲ್ಲಿ ನಡೆದ ಟಿ20 ಲೀಗ್‌ನಲ್ಲಿ ಇವರು ಅಬ್ಬರದ ಆಟವನ್ನು ಪ್ರದರ್ಶಿಸಿದ್ದಾರೆ. ಪ್ರಿಟೋರಿಯಾ ಕ್ಯಾಪಿಟಲ್ಸ್ ಪರ ಬ್ಯಾಟ್ ಮಾಡಿದ ಇವರು 245 ರನ್ ಸೇರಿಸಿದ್ದಾರೆ. ಅಲ್ಲದೆ 180.14ರ ಸ್ಟ್ರೈಕ್ ರೇಟ್‌ನಲ್ಲಿ ರನ್ ಕಲೆ ಹಾಕುವ ಸಾಮರ್ಥ್ಯವನ್ನು ಹೊಂದಿದ್ದಾರೆ.
ದಕ್ಷಿಣ ಆಫ್ರಿಕಾ ಲೀಗ್‌ನಲ್ಲಿ ವಿಲ್ ಜಾಕ್ಸ್ ಒಂದು ಶತಕ ಹಾಗೂ ಒಂದು ಅರ್ಧಶಕತ ಬಾರಿಸಿದ್ದಾರೆ. ಈ ಅಂಕಿ ಅಂಶಗಳನ್ನು ನೋಡಿದರೆ, ಇವರು ಮಿಡ್ಲ್ ಆರ್ಡರ್‌ನಲ್ಲಿ ಬ್ಯಾಟ್ ಮಾಡುವುದು ಸೂಕ್ತ ಅನಿಸುತ್ತದೆ. ಕೊನೆಯ 10 ಓವರ್‌ಗಳಲ್ಲಿ ಬ್ಯಾಟ್ ಮಾಡಲು ಬಂದರೆ, ಪಂದ್ಯದ ಗತಿಯನ್ನೇ ಇವರು ಬದಲಿಸಬಲ್ಲರು. ಅಲ್ಲದೆ ಆರ್‌ಸಿಬಿಯ ಕಪ್ ಗೆಲುವಿನ ಆಸೆ ಈಡೆರಬಹುದು ಎಂಬ ನಂಬಿಕೆ ಅಭಿಮಾನಿಗಳಲ್ಲಿದೆ.