Erapalli Prasanna: ಗಾಳಿಯಲ್ಲಿ ಸ್ಪಿನ್ ಮಾಡುತ್ತಿದ್ದ ವಿಶ್ವ ಕಂಡ ನಿಗೂಢ ಸ್ಪಿನ್ನರ್ ಏರಪಳ್ಳಿ ಪ್ರಸನ್ನ
ವಿಶ್ವ ಕ್ರಿಕೆಟ್ ಇತಿಹಾಸದಲ್ಲಿ ಕರ್ನಾಟಕದ ಪಾತ್ರ ಬಹು ದೊಡ್ಡದು, ಭಾರತದ ರಾಷ್ಟ್ರೀಯ ತಂಡವನ್ನು ಆರೇಳು ದಶಕಗಳಿಂದ ಹಲವಾರು ಕನ್ನಡಿಗರು ಪ್ರತಿನಿಧಿಸುತ್ತಾ ಬರುತ್ತಿದ್ದಾರೆ. ಅಂದು ಮತ್ತು ಇಂದು ಭಾರತದಲ್ಲಿ ಕ್ರಿಕೆಟಿಗೆ ಇರುವ ಕ್ರೇಜ್ ಕಮ್ಮಿಯಾಗಿಲ್ಲ ಎಂದೇ ಹೇಳಬಹುದು. ಬದಲಿಗೆ, ಹೊಸಹೊಸ ಪ್ರಾಕಾರದ ಕ್ರಿಕೆಟ್ ಸರಣಿಗಳು ಜನಪ್ರಿಯತೆಯನ್ನು ಪಡೆದುಕೊಂಡಿವೆ.
ಕಳೆದ ಸಂಚಿಕೆಯಲ್ಲಿ 'ಸ್ಕ್ವೇರ್ ಕಟ್ ವಿಶಿ' ಎಂದೇ ಹೆಸರಾಗಿರುವ ಗುಂಡಪ್ಪ ವಿಶ್ವನಾಥ್ ಅಥವಾ ಜಿ.ಆರ್. ವಿಶ್ವನಾಥ್ ಅವರ ಬಗ್ಗೆ ಲೇಖನವನ್ನು ಪ್ರಕಟಿಸಲಾಗಿತ್ತು. ಈ ಲೇಖನದಲ್ಲಿ ವಿಶ್ವ ಕಂಡ ಅಂದಿನ ಅಂದರೆ 1960-70ರ ದಶಕದ ಶ್ರೇಷ್ಠ ಸ್ಪಿನ್ ಬೌಲರ್ ಏರಪಳ್ಳಿ ಪ್ರಸನ್ನ ಅವರ ಬಗ್ಗೆ ಒಂದಿಷ್ಟು ಮಾಹಿತಿಯನ್ನು ನೀಡುತ್ತಿದ್ದೇವೆ.

ಏರಪಳ್ಳಿ ಅನಂತರಾವ್ ಶ್ರೀನಿವಾಸ್ ಪ್ರಸನ್ನ ಯಾನೆ ಏರಪಳ್ಳಿ ಪ್ರಸನ್ನ ಎಂದು ಜನನಿತವಾಗಿರುವ ಇವರು ಹುಟ್ಟಿದ್ದು ಮೇ 22, 1940ರಂದು ಬೆಂಗಳೂರಿನಲ್ಲಿ. ಮೈಸೂರಿನ ಎನ್ಐಇ ಕಾಲೇಜಿನಲ್ಲಿ ಇಂಜಿನಿಯರಿಂಗ್ ಪದವಿ ಮುಗಿಸಿದ್ದ ಪ್ರಸನ್ನ, ಪದವೀಧರ ಆಗುವ ಮುನ್ನವೇ ಅಂತರಾಷ್ಟ್ರೀಯ ಕ್ರಿಕೆಟಿಗೆ ಪಾದಾರ್ಪಣೆ ಮಾಡಿದ್ದರು. ಆದರೆ, ಕೌಟುಂಬಿಕ ಒತ್ತಡದಿಂದ ಕ್ರಿಕೆಟಿನಿಂದ ಸ್ವಲ್ಪದಿನ ವಿರಾಮ ಪಡೆದು ಮತ್ತೆ ಕ್ರಿಕೆಟಿಗೆ ಮರಳಿದ್ದರು.
ಅರವತ್ತು ಎಪ್ಪತ್ತರ ದಶಕದಲ್ಲಿ ವಿಶ್ವದ ನಾಲ್ಕು ತಂಡಗಳು ಭಯಂಕರ ಆಟಗಾರರನ್ನು ಹೊಂದಿದ್ದರು. ಅವೆಂದರೆ, ವೆಸ್ಟ್ ಇಂಡೀಸ್, ಆಸ್ಟ್ರೇಲಿಯಾ, ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್. ಈ ತಂಡಗಳ ಜೊತೆಗೆ ಸೆಣಸುವುದೇ ಭಾರತೀಯ ಕ್ರಿಕೆಟಿಗರಿಗೆ ಸವಾಲಾಗಿತ್ತು. ಆದರೆ, ಅಂತಹ ತಂಡದ ಆಟಗಾರರೂ ಸ್ಪಿನ್ನರ್ ಒಬ್ಬರನ್ನು ಎದುರಿಸಲು ತಿಣುಕಾಡುತ್ತಿದ್ದರು ಎಂದರೆ ಅದು ಏರಪಳ್ಳಿ ಪ್ರಸನ್ನ..
ಸ್ಪಿನ್ನರಿಗೆ ಸಹಕಾರಿ ಅಲ್ಲದ ವಿದೇಶಿ ಪಿಚ್
ಸ್ಪಿನ್ನರಿಗೆ ಸಹಕಾರಿ ಅಲ್ಲದ ವಿದೇಶಿ ಪಿಚ್ ಗಳಲ್ಲಿ ಹಲವು ಬಾರಿ ಇನ್ನಿಂಗ್ಸ್ ಒಂದರಲ್ಲಿ ಎಂಟು ವಿಕೆಟ್ ಪಡೆದ ಗರಿಮೆ ಪ್ರಸನ್ನ ಅವರದ್ದು. ಅಂದಿನ ಕಾಲದ ಶ್ರೇಷ್ಠ ಬ್ಯಾಟ್ಸಮ್ಯಾನ್ ಗಳಾದ ಇಯಾನ್ ಚಾಪೆಲ್, ಕ್ಲೈವ್ ಲಾಯ್ಡ್, ಆಲ್ವಿನ್ ಕಾಳಿಚರಣ್, ಗ್ಯಾರಿ ಸೋಬರ್ಸ್ ಮುಂತಾದ ಆಟಗಾರರು, ಪ್ರಸನ್ನ ಬೌಲಿಂಗ್ ಎದುರಿಸುವುದು ಎಷ್ಟು ಕಷ್ಟ ಎಂದು ಪಂದ್ಯದ ನಂತರ ವಿವರಿಸಿದ್ದುಂಟು.

ಗಾಳಿಯಲ್ಲಿ ಅವರು ಸ್ಪಿನ್ ಮಾಡುತ್ತಿದ್ದ ರೀತಿ
ಗಾಳಿಯಲ್ಲಿ ಅವರು ಸ್ಪಿನ್ ಮಾಡುತ್ತಿದ್ದ ರೀತಿ, ಬ್ಯಾಟ್ಸಮ್ಯಾನ್ ಗಳ ನಿರೀಕ್ಷೆಗಿಂತ ಮೀರಿ ಚೆಂಡು ಪುಟಿದೇಳುತ್ತಿದ್ದದ್ದು ಎದುರಾಳಿ ಆಟಗಾರರು ಗಲಿಬಿಲಿಗೆ ಒಳಗಾಗುವಂತೆ ಮಾಡುತ್ತಿದ್ದರು. ಕೇವಲ ಆಡಿದ 49 ಟೆಸ್ಟುಗಳಲ್ಲಿ 189 ವಿಕೆಟ್ ಪ್ರಸನ್ನ ಪಡೆದಿದ್ದರು ಅಂದರೆ ಅವರ ಸ್ಪಿನ್ ಕೈಚಳಕ ಎಂತಹ ಮೋಡಿ ಮಾಡಿರಬೇಡ.. ದೇಶೀಯ ಕ್ರೀಡೆ ರಣಜಿ ಟ್ರೋಫಿ ಪಂದ್ಯಾವಳಿಯ ಮೇಲೆ ಹದಿನೇಳು ವರ್ಷ ಛಾಪನ್ನು ಬೀರಿದ್ದ ಬಲಾಢ್ಯ ಮುಂಬಯಿನಿಂದ ಪ್ರಥಮ ಬಾರಿ ಕರ್ನಾಟಕಕ್ಕೆ ರಣಜೀ ಪ್ರಶಸ್ತಿ ತಂದುಕೊಡುವಲ್ಲಿ ಪ್ರಸನ್ನ ಅವರ ಪಾತ್ರ ಬಹುಮುಖ್ಯ.
ಬೆನ್ಸನ್ ಎಂಡ್ ಹೆಡ್ಜಸ್ ಸಿರೀಸ್
ಒಂದು ಕಾಲದಲ್ಲಿ ಆರು ಜನ ಕರ್ನಾಟಕದವರು ರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ ತಂಡದಲ್ಲಿ ಆಡಿದ್ದರು, ಅದರಲ್ಲಿ ಪ್ರಸನ್ನ ಕೂಡಾ ಒಬ್ಬರು. 1985ರ ದಶಕದಲ್ಲಿ ಆಸ್ಟ್ರೇಲಿಯಾದ ಬೆನ್ಸನ್ ಎಂಡ್ ಹೆಡ್ಜಸ್ ಸಿರೀಸ್ ನಲ್ಲಿ ಗವಾಸ್ಕರ್ ನೇತೃತ್ವದಲ್ಲಿ ಭಾರತ ಟ್ರೋಫಿ ಮುಡಿಗೇರಿಸಿಕೊಂಡಿತ್ತು. ಆ ವೇಳೆ, ಪ್ರಸನ್ನ ತಂಡದ ಮ್ಯಾನೇಜರ್ ಆಗಿದ್ದವರು. "ನಮ್ಮ ಟೀಮ್ ಮ್ಯಾನೇಜರ್ ಪ್ರಸನ್ನ ಅವರು ನೆಟ್ ನಲ್ಲಿ ಬೌಲಿಂಗ್ ಮಾಡುತ್ತಿದ್ದಾಗ, ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲು ನನ್ನ ಮನಸ್ಸು ಹೇಳುತ್ತಿತ್ತು. ಆದರೆ, ಫೀಲ್ಡಿಂಗ್ ಮಾಡುವುದಕ್ಕೆ ಅವರ ದೇಹ ಒಗ್ಗಿಕೊಳ್ಳುವುದು ಕಷ್ಟ, ಇಲ್ಲದಿದ್ದರೆ ಅವರು ನಮ್ಮ ತಂಡದಲ್ಲಿ ಇರುತ್ತಿದ್ದರು"ಎಂದು ಗವಾಸ್ಕರ್ ಅಂದು ಹೇಳಿದ್ದನ್ನು ಇಲ್ಲಿ ಸ್ಮರಿಸಿ ಕೊಳ್ಳಬಹುದಾಗಿದೆ.
'One More Over' ಎನ್ನುವ ಆಟೋಬಯೋಗ್ರಾಫಿ
ಜನವರಿ 10, 1962ರಲ್ಲಿ ಇಂಗ್ಲೆಂಡ್ ವಿರುದ್ದ ಮೊದಲ ಟೆಸ್ಟ್ ಆಡಿದ ಪ್ರಸನ್ನ, ಅಕ್ಟೋಬರ್ 27, 1978ರಲ್ಲಿ ಪಾಕಿಸ್ತಾನದ ವಿರುದ್ದ ಪಂದ್ಯ ಆಡುವ ಮೂಲಕ ಟೆಸ್ಟ್ ಕ್ರಿಕೆಟಿಗೆ ನಿವೃತ್ತಿ ಘೋಷಿಸಿದರು. ವೆಂಕಟರಾಘವನ್, ಬಿಷನ್ ಸಿಂಗ್ ಬೇಡಿ, ಚಂದ್ರಶೇಖರ್ ರೀತಿಯಲ್ಲಿ ಏರಪಳ್ಳಿ ಪ್ರಸನ್ನ ಕೂಡಾ ದೇಶ ಕಂಡ ಅತ್ಯುತ್ತಮ ಸ್ಪಿನ್ನರ್ ಗಳಲ್ಲಿ ಒಬ್ಬರು. 'One More Over' ಎನ್ನುವ ಆಟೋಬಯೋಗ್ರಾಫಿ ಬರೆದಿರುವ ಪ್ರಸನ್ನ ಅವರಿಗೆ 1970ರಲ್ಲಿ ಪದ್ಮ ಪ್ರಶಸ್ತಿ ಕೂಡಾ ಒಲಿದಿತ್ತು. (Image Courtesy: Twitter, ICC)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications