2000 ರ ದಶಕದ ಆರಂಭವು ಭಾರತೀಯ ಕ್ರಿಕೆಟ್‌ಗೆ ಉತ್ತಮವಾಗಿತ್ತು. ಭಾರತದ ಸಣ್ಣ ನಗರಗಳು, ಹಳ್ಳಿಗಳು ಮತ್ತು ಪಟ್ಟಣಗಳಿಂದ ಹುಡುಗರು ಹೊರಬಂದು ಬ್ಯಾಟ್, ಬೌಲ್ ಹಿಡಿದು ಕ್ರಿಕೆಟ್ ಆಡಲು ಆರಂಭಿಸಿದ್ದರು. ಆಗಲೇ ನೋಡಿ ಬ್ಲ್ಯೂ ಜೆರ್ಸಿ ತೊಟ್ಟ ಅದೆಷ್ಟೋ ಯುವ ಆಟಗಾರರು ಕನಸಿನ ಕುದುರೆಯ ಮೇಲೆ ಪಯಾಣ ಬೆಳೆಸಿದ್ದರು.
ಗ್ರಾಮಾಂತರ ಪ್ರತಿಭೆಗಳು ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆಯುತ್ತಿದ್ದ ಅವಧಿ ಅದು. ಧೋನಿ ಇದಕ್ಕೆ ಜೀವಂತ ಉದಾಹರಣೆ. ಪ್ರವೀಣ್ ಕುಮಾರ್ ಕೂಡ ಇದೇ ಹಿನ್ನೆಲೆಯಿಂದ ಬಂದವರು. ಉತ್ತರ ಪ್ರದೇಶದ ಸಣ್ಣ ಊರಿನಿಂದ ಬಂದು ಭಾರತ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆದು ಮಿಂಚಿದ್ದಾರೆ. ತಮ್ಮ ಸ್ವಿಂಗ್ ಬೌಲಿಂಗ್ ಮೂಲಕ ಎದುರಾಳಿಗಳನ್ನು ಕಾಡುತ್ತಿದ್ದ ಪ್ರವೀಣ್ ಸ್ಫೋಟಕ ಬ್ಯಾಟಿಂಗ್ ಕೂಡ ಮಾಡುತ್ತಿದ್ದರು. 2007 ರಿಂದ 2012 ರವರೆಗೆ, ಪ್ರವೀಣ್ ಕುಮಾರ್ ಭಾರತಕ್ಕಾಗಿ ಆರು ಟೆಸ್ಟ್, 68 ODI ಮತ್ತು 10 T20 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ.

ಪ್ರವೀಣ್ ಕುಮಾರ್ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು, ಕಿಂಗ್ಸ್ ಇಲೆವೆನ್ ಪಂಜಾಬ್, ಸನ್‌ರೈಸರ್ಸ್ ಹೈದರಾಬಾದ್‌ನಂತಹ ತಂಡಗಳಿಗಾಗಿ ಐಪಿಎಲ್ ಪರ ಆಡಿದ್ದಾರೆ. ಉತ್ತಮ ವೇಗದಲ್ಲಿ ಬೌಲಿಂಗ್ ಮಾಡಿದರು, ಅವರ ಅಂತರರಾಷ್ಟ್ರೀಯ ವೃತ್ತಿಜೀವನವು ಹೆಚ್ಚು ಕಾಲ ಉಳಿಯಲಿಲ್ಲ. ಪ್ರವೀಣ್ ಕುಮಾರ್ ಅವರಿಗೆ ಆಟಿಟ್ಯೂಡ್ ಸಮಸ್ಯೆ ಇತ್ತು ಎಂದು ಆಗಿನ ಕ್ರಿಕೆಟ್ ಆಟಗಾರರು ಹೇಳುತ್ತಿರುತ್ತಾರೆ. ಅವರು ಶೀಘ್ರ ಕೋಪಗೊಂಡರು ಎಂದು ಕೆಲವರು ಹೇಳುತ್ತಾರೆ. ಅವರಿಗೆ ಕುಡಿತದ ಸಮಸ್ಯೆ ಇದೆ ಎಂದು ಕೆಲವು ವರದಿಗಳು ಹೇಳಿಕೊಂಡಿವೆ. ಆದರೆ ಇದೀಗ ಪ್ರವೀಣ್ ಕುಮಾರ್ ತಮ್ಮ ಇಮೇಜ್ ಎಂತಹದ್ದು ಎಂಬುದನ್ನು ಬಹಿರಂಗ ಪಡಿಸಿದ್ದಾರೆ.
ದಿ ಲಾಲನ್‌ಟಾಪ್‌ಗೆ ನೀಡಿದ ಸಂದರ್ಶನದಲ್ಲಿ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪ್ರವೀಣ್ ಕುಮಾರ್, 'ನಾನು ಭಾರತ ತಂಡದಲ್ಲಿದ್ದಾಗ ಹಿರಿಯರು 'ಕುಡಿಯಬೇಡಿ, ಇದನ್ನು ಮಾಡಬೇಡಿ, ಹಾಗೆ ಮಾಡಬೇಡಿ' ಎಂದು ಹೇಳುತ್ತಿದ್ದರು. ಎಲ್ಲ ಆಟಗಾರರು ಸಹ ಇದನ್ನು ಮಾಡುವವರೇ. ಕುಡಿದ ಬಳಿಕ ಎಲ್ಲರೂ ನನ್ನ ಮಾನ ಹಾನಿ ಮಾಡುವವರೆ ಎಂದು ತಿಳಿಸಿದ್ದಾರೆ. ಅಲ್ಲದೆ ನಿವೃತ್ತಿಯ ನಂತರ, ರಣಜಿ ಟ್ರೋಫಿಯಲ್ಲಿ ಯುಪಿ ತಂಡವು ಹುಡುಗರಿಗೆ ಬೌಲಿಂಗ್ ಕೋಚಿಂಗ್‌ಗೆ ನನ್ನನ್ನು ಕರೆಯಲಿಲ್ಲ.

ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ಸೌರವ್ ಗಂಗೂಲಿ ಅವರಂತಹ ಹಿರಿಯರು ಮದ್ಯಪಾನ ಮಾಡದಂತೆ ಸಲಹೆ ನೀಡಿದ್ದಾರೆಯೇ ಎಂಬ ಪ್ರಶ್ನೆಗೆ ಪ್ರವೀಣ್ ಉತ್ತರಿಸಿದರು. 'ಇಲ್ಲ, ನಾನು ಕ್ಯಾಮೆರಾದಲ್ಲಿ ಹೆಸರು ತೆಗೆದುಕೊಳ್ಳಲು ಬಯಸುವುದಿಲ್ಲ. ಕುಡಿದು ಮಾನಹಾನಿ ಮಾಡಿದವರು ಯಾರು ಎಂಬುದು ಎಲ್ಲರಿಗೂ ಗೊತ್ತು. ಎಲ್ಲರೂ ಅವನನ್ನು ತಿಳಿದಿದ್ದಾರೆ. ನನ್ನನ್ನು ವೈಯಕ್ತಿಕವಾಗಿ ತಿಳಿದಿರುವವರಿಗೆ ನಾನು ಹೇಗಿದ್ದೇನೆ ಎಂದು ತಿಳಿದಿದೆ. ನನ್ನ ಬಗ್ಗೆ ಕೆಟ್ಟ ಚಿತ್ರಣ ಸೃಷ್ಟಿಯಾಗಿದೆ.