ಭಾರತ ಹಾಗೂ ಶ್ರೀಲಂಕಾ ಜಂಟಿಯಾಗಿ ಟಿ20 ವಿಶ್ವಕಪ್ 2026ರನ್ನು ಆಯೋಜಿಸುತ್ತಿವೆ. ಈ ಟೂರ್ನಿಗೆ ಈಗಾಗಲೇ ಭರದ ಸಿದ್ಧತೆಗಳು ನಡೆದಿವೆ. ಭಾರತದ 5, ಶ್ರೀಲಂಕಾದ 3 ಮೈದಾನಗಳು ಈ ಮೆಗಾ ಟೂರ್ನಿಗೆ ಆತಿಥ್ಯ ನೀಡಲಿವೆ. ಟೂರ್ನಿಯಲ್ಲಿ ಒಟ್ಟು 20 ತಂಡಗಳು ಭಾಗವಹಿಸಲಿವೆ. ಈ ತಂಡಗಳನ್ನು 4 ಗುಂಪುಗಳಲ್ಲಿ ವಿಂಗಡಿಸಲಾಗಿದೆ. ಈ ಟೂರ್ನಿ ಫೆಬ್ರವರಿ 7 ರಿಂದ ಆರಂಭವಾಗಲಿದೆ. ಈ ಟೂರ್ನಿಗೆ ಈಗಾಗಲೇ ಶ್ರೀಲಂಕಾ ತನ್ನ ತಾತ್ಕಾಲಿಕ ತಂಡವನ್ನು ಪ್ರಕಟಿಸಿದೆ. ಶ್ರೀಲಂಕಾ ತಂಡ ಈ ಟೂರ್ನಿಗೆ ತನ್ನ ಕೋಚಿಂಗ್ ಬಗ್ಗೆ ದೊಡ್ಡ ನಿರ್ಧಾರವನ್ನು ತೆಗೆದುಕೊಂಡಿದೆ.
ಟೀಮ್ ಇಂಡಿಯಾ ತಂಡಕ್ಕೆ ಈಗಾಗಲೇ ಈ ಕೋಚ್ ತಮ್ಮ ಅನುಭವದ ಧಾರೆ ಎರೆದಿದ್ದಾರೆ. ಇವರ ಅಧಿಕಾರ ಅವಧಿಯಲ್ಲಿ ಭಾರತ ಟಿ20 ವಿಶ್ವಕಪ್ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತ್ತು. ಟೀಮ್ ಇಂಡಿಯಾದ ಮಾಜಿ ಆಟಗಾರ ವಿಕ್ರಮ್ ರಾಥೋಡ್ ಅವರನ್ನು ಶ್ರೀಲಂಕಾ ತಂಡ ತನ್ನ ಕೋಚಿಂಗ್ ಕ್ಯಾಂಪ್‌ಗೆ ಸೇರಿಸಿಕೊಂಡಿದೆ.

10ನೇ ಆವೃತ್ತಿಯ ಟಿ20 ವಿಶ್ವಕಪ್‌ಗನ್ನು ಗೆಲ್ಲಲೇ ಬೇಕಾದ ಕನಸಿನಲ್ಲಿರುವ ಶ್ರೀಲಂಕಾ ತಂಡದಲ್ಲಿ ಹಲವು ಬದಲಾವಣೆಗಳನ್ನು ಮಾಡಿಕೊಂಡಿದೆ. ಇದರಂತೆ ಬೌಲಿಂಗ್ ಕೋಚ್ ಜವಾಬ್ದಾರಿಯನ್ನು ಲಂಕಾ ತಂಡದ ಮಾಜಿ ಯಾರ್ಕರ್ ಸ್ಪೆಷಲಿಸ್ಟ್ ಲಸಿತ್ ಮಲಿಂಗ್ ಅವರಿಗೆ ನೀಡಲಾಗಿದೆ. ಇವರು ತಂಡದೊಂದಿಗೆ ಅಲ್ಪಾವಧಿಯ ಒಪ್ಪಂದವನ್ನು ಮಾಡಿಕೊಂಡಿದೆ. ಶ್ರೀಲಂಕಾ ತಂಡದ ಮುಖ್ಯ ತರಬೇತುದಾರರಾಗಿ ಸನತ್ ಜಯಸೂರ್ಯವನ್ನು ಈ ಮೊದಲೇ ನೇಮಿಸಲಾಗಿದೆ. ಇನ್ನು ಲಂಕಾ ತಂಡದ ಬ್ಯಾಟಿಂಗ್ ಕೋಚ್ ಆಗಿ ವಿಕ್ರಮ್ ರಾಥೋಡ್ ಅವರನ್ನು ನೇಮಿಸಲಾಗಿದೆ.
ವಿಕ್ರಮ್ ರಾಥೋಡ್ ಅವರು ಮುಂಬರುವ ಐಪಿಎಲ್ 2026ರಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಟಿ20 ವಿಶ್ವಕಪ್‌ಗಾಗಿ ಮಾತ್ರ ಇವರು ಶ್ರೀಲಂಕಾ ತಂಡದ ಬ್ಯಾಟಿಂಗ್ ಕೋಚ್ ಸ್ಥಾನವನ್ನು ಅಲಂಕರಿಸಲಿದ್ದಾರೆ. ಇವರ ಕಾರ್ಯ ಅವಧಿ ಟಿ20 ವಿಶ್ವಕಪ್ ವರೆಗೆ ಮಾತ್ರ ಇರಲಿದೆ. ವಿಕ್ರಮ್ ರಾಥೋಡ್ ಟಿ20 ವಿಶ್ವಕಪ್ ಚಾಂಪಿಯನ್ ತಂಡದ ಕೋಚ್ ಆಗಿದ್ದಾರೆ. ಕಳೆದ ಬಾರಿ ಟಿ20 ವಿಶ್ವಕಪ್ ವೆಸ್ಟ್ ಇಂಡೀಸ್ ಹಾಗೂ ಅಮೆರಿಕದಲ್ಲಿ ಆಯೋಜಿಸಿದ್ದಾಗ ವಿಕ್ರಮ್ ರಾಥೋಡ್ ಅವರು ರೋಹಿತ್ ಶರ್ಮಾ ಪಡೆಯ ಬ್ಯಾಟಿಂಗ್ ಕೋಚ್ ಆಗಿ ಕೆಲಸವನ್ನು ಮಾಡಿದ್ದರು.

ಟಿ20 ವಿಶ್ವಕಪ್ 2026ರಲ್ಲಿ ಶ್ರೀಲಂಕಾ ತಂಡ ಬಿ ಗುಂಪಿನಲ್ಲಿ ಸ್ಥಾನ ಪಡೆದಿದೆ. ಈ ಗುಂಪಿನಲ್ಲಿ ಶ್ರೀಲಂಕಾ ಸೇರಿದಂತೆ ಆಸ್ಟ್ರೇಲಿಯಾ, ಐರ್ಲೆಂಡ್, ಒಮನ್, ಜಿಂಬಾಬ್ವೆ ತಂಡಗಳು ಸೇರಿವೆ. ಶ್ರೀಲಂಕಾ ತನ್ನ ಎಲ್ಲ ಪಂದ್ಯಗಳನ್ನು ಕೊಲಂಬೊ ಹಾಗೂ ಪಲ್ಲಿಕಲ್‌ನಲ್ಲಿ ಆಡಲಿದೆ.