ಅಕ್ಷಿತಾ ರಾಜ್ ಜೊತೆ ಜೀವನದ ಸುಂದರ ಪಾರ್ಟ್‌ನರ್‌ಶಿಪ್ ಆರಂಭಿಸಿದ ಆರ್‌ಸಿಬಿ ಮಾಜಿ ವೇಗಿ
ಭಾರತೀಯ ಕ್ರಿಕೆಟ್ ತಂಡದ ಯುವ ಹಾಗೂ ಭರವಸೆಯ ಬಲಗೈ ವೇಗದ ಬೌಲರ್ ಆಕಾಶ್ ದೀಪ್ ಹೊಸ ಇನಿಂಗ್ಸ್ ಅನ್ನು ಸಂಭ್ರಮದಿಂದ ಆರಂಭಿಸಿದ್ದಾರೆ. ಬಿಹಾರದ ರೋಹ್ತಾಸ್ ಜಿಲ್ಲೆಯ ಸಣ್ಣ ಹಳ್ಳಿಯಿಂದ ಅಂತಾರಾಷ್ಟ್ರೀಯ ಕ್ರಿಕೆಟ್ ಅಂಗಳದಲ್ಲಿ ದೇಶದ ಗಮನ ಸೆಳೆದಿರುವ ಈ ಯುವ ವೇಗಿ. ಇವರು ಐತಿಹಾಸಿಕ ವಾರಣಾಸಿಯಲ್ಲಿ ಅಕ್ಷಿತಾ ರಾಜ್ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ಆಕಾಶ್ ದೀಪ್ ತಮ್ಮ ಮದುವೆಯ ಸಂಭ್ರಮದ ಸುಂದರ ಫೋಟೋಗಳು ಮತ್ತು ಧಾರ್ಮಿಕ ವಿಧಿವಿಧಾನಗಳ ವಿಶೇಷ ವೀಡಿಯೊಗಳನ್ನು ತಮ್ಮ ಅಧಿಕೃತ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಈ ವಿಡಿಯೋ ಹಾಗೂ ಫೋಟೋಗಳು ಸಖತ್ ವೈರಲ್ ಆಗುತ್ತಿವೆ. ಕ್ರಿಕೆಟ್ ಆಟಗಾರನ ಮದುವೆಗೆ ಅಭಿಮಾನಿಗಳು ಹಾಗೂ ಕ್ರಿಕೆಟ್ ಆಟಗಾರರು ಶುಭ ಕೋರಿದ್ದಾರೆ.

ಆಕಾಶ್ ದೀಪ್ ಅವರ ತವರು ಬಿಹಾರದ ರೋಹ್ತಾಸ್ ಜಿಲ್ಲೆಯ ಬಟ್ಟಿ ಗ್ರಾಮದಲ್ಲಿ ಸಂಪ್ರದಾಯಗಳು ನೆರವೇರಿದವು. ವಾರಣಾಸಿಯ ಗಂಗಾನದಿಯ ತಟದಲ್ಲಿ ನಡೆದ ಮದುವೆ ಸಮಾರಂಭಕ್ಕೆ ಕುಟುಂಬದ ಆಪ್ತರು ಹಾಗೂ ಸ್ನೇಹಿತರು ಭಾಗವಹಿಸಿದ್ದರು.
ಅಕ್ಷಿತಾ ರಾಜ್ ಯಾರು?
ಆಕಾಶ್ ದೀಪ್ ಅವರ ಕೈಹಿಡಿದ ವಧು ಅಕ್ಷಿತಾ ರಾಜ್ ಅವರು ಬಿಹಾರದ ಡೆಹ್ರಿ ಪ್ರದೇಶದ ಮಾಣಿಕ್ ಪುರ ಗ್ರಾಮದವರಾಗಿದ್ದು, ಉಭಯ ಕುಟುಂಬಗಳ ಹಿರಿಯರ ಸಮ್ಮುಖದಲ್ಲಿ ಈ ಮದುವೆ ಶಾಸ್ತ್ರಗಳು ನಡೆದಿವೆ. ಸಾಂಪ್ರದಾಯಿಕ ಶೈಲಿಯಲ್ಲಿ ನಡೆದ ಈ ಮನಮೋಹಕ ವಿವಾಹ ಮಹೋತ್ಸವ ಮುಗಿದ ಬೆನ್ನಲ್ಲೇ ಆಕಾಶ್ ದೀಪ್ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ತಮ್ಮ ಅರ್ಧಾಂಗಿಯೊಂದಿಗೆ ಇರುವ ವಿಶಿಷ್ಟ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ.
ನಾವು ನಮ್ಮ ಜೀವನದ ಅತ್ಯಂತ ಸುದೀರ್ಘ ಮತ್ತು ಅತ್ಯಂತ ಸುಂದರವಾದ ಇನಿಂಗ್ಸ್ ಅನ್ನು ಒಟ್ಟಿಗೆ ಆಡಲು ಈಗ ಸಜ್ಜಾಗಿದ್ದೇವೆ. ಈ ಹೊಸ ಕೌಟುಂಬಿಕ ಅಧ್ಯಾಯವನ್ನು ಪ್ರಾರಂಭಿಸುವ ಸುಂದರ ದಿನದಂದು, ನನ್ನ ಹೆಗಲಿಗೆ ಹೆಗಲು ಕೊಟ್ಟು ನಡೆಯಲು ನೀನು ನನ್ನ ಜೊತೆಯಾಗಿ ಇರುವುದು ನನಗೆ ಅತ್ಯಂತ ಸಂತಸ ತಂದಿದೆ ಎಂದು ಅಕ್ಷಿತಾ ರಾಜ್ ಬಗ್ಗೆ ಆಕಾಶ್ ದೀಪ್ ಬರೆದುಕೊಂಡಿದ್ದಾರೆ.
ಆಕಾಶ್ ದೀಪ್ ಬಿಹಾರದ ಕಡು ಬಡತನದಿಂದ ಬಂದವರಾಗಿದ್ದಾರೆ. ಅವರ ಈ ಯಶಸ್ಸಿನ ಹಿಂದೆ ಅವರ ತಾಯಿಯ ತ್ಯಾಗ ಮತ್ತು ಬೆಂಬಲ ಆಪಾರವಾಗಿದೆ. ಆಕಾಶ್ ತಮ್ಮ ಜೀವನದಲ್ಲಿ ಕ್ರಿಕೆಟ್ ಆಟಗಾರನಾಗುವ ಮುನ್ನವೇ ತಂದೆ ಹಾಗೂ ಸಹೋದರನನ್ನು ಕಳೆದುಕೊಂಡರು. ಅಂತಹ ಅತ್ಯಂತ ಕಠಿಣ ದಿನಗಳಲ್ಲಿ ತಾಯಿ ನೀಡಿದ ನೈತಿಕ ಮತ್ತು ಆರ್ಥಿಕ ಬೆಂಬಲವೇ ಆಕಾಶ್ ದೀಪ್ ಅವರನ್ನು ಇಂದು ದೇಶದ ಹೆಮ್ಮೆಯ ಕ್ರಿಕೆಟಿಗನನ್ನಾಗಿ ರೂಪಿಸಿದೆ.
ಐಪಿಎಲ್‌ನಲ್ಲೂ ಆರ್‌ಸಿಬಿ ಪರ ಆಡಿರುವ ಆಕಾಶ್ ದೀಪ್
ಕಳೆದ 2024 ರಲ್ಲಿ ಜಾರ್ಖಂಡ್‌ನ ರಾಂಚಿಯಲ್ಲಿ ಪ್ರವಾಸಿ ಇಂಗ್ಲೆಂಡ್ ವಿರುದ್ಧ ನಡೆದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಆಕಾಶ್ ದೀಪ್ ಭಾರತದ ಪರವಾಗಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ವಿಶ್ರಾಂತಿ ಪಡೆದಿದ್ದ ಪಂದ್ಯದಲ್ಲಿ ಆಕಾಶ್ ದೀಪ್ ಅವಕಾಶವನ್ನು ಬಳಸಿಕೊಂಡು ಅಬ್ಬರಿಸಿದರು. ಈ ಪಂದ್ಯದಲ್ಲಿ ಆಕಾಶ್ ದೀಪ್ ಬೆನ್ ಡಕೆಟ್, ಓಲಿ ಪೋಪ್ ಮತ್ತು ಝಾಕ್ ಕ್ರಾಲಿ ಅವರಿಗೆ ಖೆಡ್ಡಾ ತೋಡಿ ಅಬ್ಬರಿಸಿದ್ದರು.
ಆಕಾಶ್ ದೀಪ್ ಐಪಿಎಲ್‌ನಲ್ಲೂ ಆಡಿ ಹೆಸರು ಮಾಡಿದ್ದಾರೆ. ಆದರೆ ಈ ಬಾರಿಯ ಆವೃತ್ತಿಯಲ್ಲಿ ಗಾಯದ ಸಮಸ್ಯೆಯಿಂದ ಇವರು ಮೈದಾನದಿಂದ ದೂರ ಉಳಿದರು. ಈ ಮೊದಲು ಇವರು ಐಪಿಎಲ್‌ನಲ್ಲಿ ಎಲ್‌ಎಸ್‌ಜಿ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಸಹ ಕಣಕ್ಕೆ ಇಳಿದಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications