ಭಾರತ ತಂಡದ ಪ್ರಮುಖ ಸ್ಪಿನ್ ಬೌಲರ್ ಯುಜುವೇಂದ್ರ ಚಹಾಲ್ ಅವರು ಮುಂಬರುವ ಏಕದಿನ ವಿಶ್ವಕಪ್ ಭಾರತ ತಂಡದಲ್ಲಿ ಅವಕಾಶ ಪಡೆಯಲು ವಿಫಲವಾಗಿದ್ದಾರೆ. ಚಹಾಲ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಬೇಕು ಎಂದು ಹಲವು ಮಾಜಿ ಕ್ರಿಕೆಟಿಗರು ಅಭಿಪ್ರಾಯ ಪಟ್ಟಿದ್ದ ಹೊರತಾಗಿಯೂ ಅವರು ಅವಕಾಶ ಪಡೆಯಲಿಲ್ಲ.
ಭಾರತ ತಂಡದಲ್ಲಿ ಅವಕಾಶ ಸಿಗದ ಕಾರಣ ಯುಜುವೇಂದ್ರ ಚಾಹಲ್ ಈಗ ಇಂಗ್ಲೆಂಡ್‌ನತ್ತ ಮುಖ ಮಾಡಿದ್ದಾರೆ. ಹೌದು, ಇಂಗ್ಲೆಂಡ್‌ನಲ್ಲಿ ಕೌಂಟಿ ಕ್ರಿಕೆಟ್‌ನಲ್ಲಿ ಆಡಲು ಚಹಾಲ್ ಸಜ್ಜಾಗಿದ್ದು ಕೆಂಟ್ ತಂಡಕ್ಕಾಗಿ ಆಡಲಿದ್ದಾರೆ.

ಕ್ರಿಕೆಟಿಗರು ತಮ್ಮ ಅಂತರಾಷ್ಟ್ರೀಯ ವೃತ್ತಿಜೀವನವನ್ನು ಪುನರುಜ್ಜೀವನಗೊಳಿಸಲು ಕೌಂಟಿ ಕ್ರಿಕೆಟ್ ಸಹಕಾರಿಯಾಗಿದೆ. ಚೆತೇಶ್ವರ್ ಪೂಜಾರ ಮತ್ತು ಅಜಿಂಕ್ಯ ರಹಾನೆ ಅವರಂತೆ ಯುಜ್ವೇಂದ್ರ ಚಹಾಲ್ ಈಗ ಕೆಂಟ್ ಜೊತೆಗಿನ ತನ್ನ ಮೊದಲ ಕೌಂಟಿ ಕ್ರಿಕೆಟ್ ಪಂದ್ಯಕ್ಕಾಗಿ ಇಂಗ್ಲೆಂಡ್‌ಗೆ ತೆರಳಿದ್ದಾರೆ.
ಟೈಮ್ಸ್ ಆಫ್ ಇಂಡಿಯಾದ ವರದಿಗಳ ಪ್ರಕಾರ, ಯುಜ್ವೇಂದ್ರ ಚಹಾಲ್ ಕೌಂಟಿ ಕ್ರಿಕೆಟ್‌ನಲ್ಲಿ ಕೆಂಟ್‌ಗಾಗಿ ಆಡಲು ನಿರ್ಧರಿಸಿದ್ದಾರೆ. "ಕೆಂಟ್ ಕೌಂಟಿ ಕ್ರಿಕೆಟ್ ಕ್ಲಬ್ ಶೀಘ್ರದಲ್ಲೇ ಈ ಬೆಳವಣಿಗೆಯ ಬಗ್ಗೆ ಅಧಿಕೃತ ಘೋಷಣೆ ಮಾಡಲಿದೆ. ಚಹಾಲ್ ಅವರಿಗಾಗಿ ಮೂರು ಟೆಸ್ಟ್ ಪಂದ್ಯಗಳನ್ನು ಆಡಲಿದ್ದಾರೆ. ಕೌಂಟಿ ಕ್ರಿಕೆಟ್ ಆಡಲು ಬಿಸಿಸಿಐ ಎನ್‌ಒಸಿ ನೀಡಿದೆ. ಅವರು ಭಾರತ ತಂಡಕ್ಕೆ ಅವಶ್ಯಕತೆಯಿದ್ದರೆ, ಚಹಾಲ್ ತಕ್ಷಣವೇ ರಾಷ್ಟ್ರೀಯ ತಂಡವನ್ನು ಸೇರಿಕೊಳ್ಳುತ್ತಾರೆ," ಎಂದು ಬಿಸಿಸಿಐ ಮೂಲವು ಟೈಮ್ಸ್ ಆಫ್ ಇಂಡಿಯಾಕ್ಕೆ ತಿಳಿಸಿದೆ.
ಸುಮಾರು ಒಂದು ವರ್ಷಗಳ ಕಾಲ ಅವಕಾಶ ಪಡೆಯದ ಚಹಾಲ್, ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲಿ ಏಕದಿನ ಮತ್ತು ಟಿ20 ಪಂದ್ಯಗಳಲ್ಲಿ ಅವಕಾಶ ಪಡೆದುಕೊಂಡರು. ಆದರೆ ಅಲ್ಲಿ ನಿರೀಕ್ಷಿತ ಪ್ರದರ್ಶನ ನೀಡದ ಕಾರಣ ಬಿಸಿಸಿಐ ಅವರನ್ನು ಏಷ್ಯಾಕಪ್‌ಗೆ ಆಯ್ಕೆ ಮಾಡುವ ಧೈರ್ಯ ಪ್ರದರ್ಶಿಸಲಿಲ್ಲ, ಈಗ ಏಕದಿನ ವಿಶ್ವಕಪ್ ತಂಡಕ್ಕೂ ಅವರನ್ನು ಆಯ್ಕೆ ಮಾಡಲಿಲ್ಲ.
ಚಹಾಲ್ 2023 ರಲ್ಲಿ ಭಾರತಕ್ಕಾಗಿ ಕೇವಲ 2 ಏಕದಿನ ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ ಆ ಮೂಲಕ ಆಯ್ಕೆದಾರರು ಅವರನ್ನು ತಂಡದಿಂದ ಹೊರಗಿಡುವ ಸೂಚನೆ ನೀಡಿದ್ದರು. ಅವರ ವಾಪಸಾತಿ ಬಗ್ಗೆ ಸ್ವಲ್ಪ ನಿರೀಕ್ಷೆಯಿದ್ದರೂ, ಭಾರತವು ಸೆಪ್ಟೆಂಬರ್ 5 ರಂದು ವಿಶ್ವಕಪ್ ತಂಡವನ್ನು ಘೋಷಿಸಿದಾಗ ಅದು ಕೂಡ ಇಲ್ಲವಾಯಿತು.
"ಭಾರತ ತಂಡಕ್ಕೆ ಆಡುವ ಅವಕಾಶ ಕಳೆದುಕೊಳ್ಳುವುದು ನಿರಾಶಾದಾಯಕವಾಗಿದೆ. ಕ್ರಿಕೆಟಿಗನಾಗಿ ನಾವು ಕೆಲವು ವಿಷಯಗಳು ಯಾವಾಗಲೂ ನಮ್ಮ ದಾರಿಯಲ್ಲಿ ಹೋಗುವುದಿಲ್ಲ ಎಂಬುದನ್ನು ಒಪ್ಪಿಕೊಳ್ಳಬೇಕು. ನಾನು ನನ್ನ ಅತ್ಯುತ್ತಮ ಪ್ರಯತ್ನವನ್ನು ಮುಂದುವರಿಸಬೇಕು ಮತ್ತು ನನ್ನ ಪ್ರದರ್ಶನಗಳು ಭಾರತಕ್ಕೆ ಮತ್ತೊಮ್ಮೆ ಆಯ್ಕೆಯನ್ನು ಸಮರ್ಥಿಸುತ್ತವೆ ಎಂದು" ಚಹಾಲ್ ಟೈಮ್ಸ್ ಆಫ್ ಇಂಡಿಯಾಗೆ ತಿಳಿಸಿದ್ದಾರೆ ಎಂದು ವರದಿಯಾಗಿದೆ.
ಚಾಹಲ್ ತಮ್ಮ ಮುಂದಿರುವ ಮುಂದಿನ ಸವಾಲಿಗೆ ಸಿದ್ಧರಾಗಿದ್ದು, ಕೌಂಟಿ ಕ್ರಿಕೆಟ್‌ನಲ್ಲಿ ಮಿಂಚಲು ಸಿದ್ಧರಾಗಿದ್ದಾರೆ. "ರಾಹುಲ್ ದ್ರಾವಿಡ್ ಸರ್ ಕೌಂಟಿ ಕ್ರಿಕೆಟ್‌ನಲ್ಲಿ ತಮ್ಮ ಸಮಯದ ಬಗ್ಗೆ ತುಂಬಾ ಹೆಚ್ಚು ಮಾತನಾಡುತ್ತಾರೆ. ನಾನು ನಿಜವಾಗಿಯೂ ಕೌಂಟಿ ಕ್ರಿಕೆಟ್‌ನಲ್ಲಿ ಆಡಲು ಬಯಸುತ್ತೇನೆ. ಅಂತಹ ಅಲ್ಪಾವಧಿಯಲ್ಲಿ ನನಗೆ ಸಹಾಯ ಮಾಡಿದ ನನ್ನ ಉತ್ತಮ ಸ್ನೇಹಿತ ಬ್ರಿಂಡನ್‌ಗೆ ನಾನು ಎಷ್ಟು ಕೃತಜ್ಞನಾಗಿದ್ದೇನೆ" ಎಂದು ಚಹಾಲ್ ಹೇಳಿದ್ದಾರೆ.