ಜುಲೈ 21 ಭಾನುವಾರ, ಟೀಮ್ ಇಂಡಿಯಾ ಇದೇ ತಿಂಗಳ 27 ರಿಂದ ಶ್ರೀಲಂಕಾ ವಿರುದ್ಧದ ಟಿ20 ಮತ್ತು ಏಕದಿನ ಸರಣಿಯನ್ನು ಪ್ರಾರಂಭಿಸಲಿದೆ. ಈ ಪ್ರವಾಸಕ್ಕೆ ಭಾರತ ತಂಡವನ್ನೂ ಪ್ರಕಟಿಸಲಾಗಿದೆ.
ಟಿ20 ಗೆ ರೋಹಿತ್ ಶರ್ಮಾ ವಿದಾಯ ಹೇಳಿದ ನಂತರ, ಚುಟುಕು ಕ್ರಿಕೆಟ್‌ನಲ್ಲಿ ಭಾರತ ತಂಡಕ್ಕೆ ಸೂರ್ಯಕುಮಾರ್ ಯಾದವ್ ಅವರನ್ನು ನಾಯಕನಾಗಿ ನೇಮಿಸಿದೆ. ಆದರೆ, ರೋಹಿತ್ ಶರ್ಮಾ ಏಕದಿನ ಮತ್ತು ಟೆಸ್ಟ್ ತಂಡದ ನಾಯಕತ್ವ ವಹಿಸಲಿದ್ದಾರೆ.

ಇದೇ ವೇಳೆ ಟಿ20 ಕ್ಯಾಪ್ಟನ್ ಆಗಲು ಮುಂಚೂಣಿಯಲ್ಲಿದ್ದ ಟೀಮ್ ಇಂಡಿಯಾ ಸ್ಟಾರ್ ಆಲ್‌ರೌಂಡರ್
ಹಾರ್ದಿಕ್ ಪಾಂಡ್ಯ ಅವರಿಗೆ ಪಟ್ಟ ತಪ್ಪಿದಕ್ಕೆ ಹಲವು ಚರ್ಚೆಗಳು ನಡೆದಿವೆ. ಇದರ ಬೆನ್ನಲ್ಲೇ ಭಾರತದ ಮಾಜಿ ಕ್ರಿಕೆಟಿಗ ಸಂಜಯ್ ಬಂಗಾರ್ ಅವರು, ಟಿ20 ನಾಯಕನ ಪಾತ್ರಕ್ಕೆ ಹಾರ್ದಿಕ್ ಪಾಂಡ್ಯ ಅವರನ್ನು ಕಡೆಗಣಿಸಿರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.
ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಮಾತನಾಡಿದ ಬಂಗಾರ್, 'ಹಾರ್ದಿಕ್ ಟಿ 20 ತಂಡದ ನಾಯಕನಾಗದಿರುವುದು ನನಗೆ ಸ್ವಲ್ಪ ಆಶ್ಚರ್ಯವಾಗಿದೆ. ಏಕೆಂದರೆ ಕಳೆದ ಟಿ20 ವಿಶ್ವಕಪ್‌ಗೂ ಮುಂಚೆಯೇ ರೋಹಿತ್ ಬದಲಿಗೆ ಹಾರ್ದಿಕ್ ನಾಯಕ ಎಂದು ನಿರೀಕ್ಷಸಲಾಗಿತ್ತು. ಆದರೆ ಅಂದು ಗಾಯ ಆಗದೇ ಇದ್ದಿದ್ದರೆ ಹಾರ್ದಿಕ್ ನಾಯಕನಾಗುತ್ತಿದ್ದರು.
ಆ ನಿಟ್ಟಿನಲ್ಲಿ ಟೀಮ್ ಇಂಡಿಯಾ ಪಾಂಡ್ಯ ನಾಯಕತ್ವದಲ್ಲಿ ಸಾಗುತ್ತಿತ್ತು. ಆಯ್ಕೆದಾರರು ಕೂಡ ಆ ದಾರಿಯನ್ನು ಕಂಡುಕೊಂಡಿದ್ದರು. ಆದರೆ ಇದೀಗ ಈ ಹಠಾತ್ ಯು-ಟರ್ನ್ ಸ್ವಲ್ಪ ಗೊಂದಲದ ಸಂಗತಿಯಾಗಿದೆ ಎಂದು ಹೇಳಿದ್ದಾರೆ.
ಸೂರ್ಯಕುಮಾರ್ ಯಾದವ್ ಅವರ ನಾಯಕತ್ವದ ಸಾಮರ್ಥ್ಯದ ಬಗ್ಗೆ ಬಂಗಾರ್ ಅವರಿಗೆ ಯಾವುದೇ ಸಂದೇಹವಿಲ್ಲವಾದರೂ, ಹಾರ್ದಿಕ್ ಪಾಂಡ್ಯಗೆ ಅನ್ಯಾಯವಾಗಿದೆ ಎಂದು ತಿಳಿಸಿದ್ದಾರೆ.
ಸೂರ್ಯಕುಮಾರ್ ಯಾದವ್ ಅಂತರಾಷ್ಟ್ರೀಯ ಕ್ರಿಕೆಟ್ ಆಡುವ ಮೊದಲು ಕಡಿಮೆ ದೇಶೀಯ ಕ್ರಿಕೆಟ್ ಆಡಿದ್ದಾರೆ ಎಂದಲ್ಲ. ಅವರಿಗೆ ಸಾಕಷ್ಟು ಅನುಭವವಿದ್ದು, ದೇಶೀಯ ಕ್ರಿಕೆಟ್‌ನಲ್ಲಿ ಮುಂಬೈ ತಂಡವನ್ನು ಮುನ್ನಡೆಸಿದ್ದಾರೆ. ಆಟಗಾರರಿಂದ ಉತ್ತಮ ಪ್ರದರ್ಶನವನ್ನು ಹೇಗೆ ಪಡೆಯಬೇಕೆಂದು ತಿಳಿದಿದೆ.
ಹೀಗಾಗಿ ಸೂರ್ಯಕುಮಾರ್ ಅವರನ್ನು ನಾಯಕನನ್ನಾಗಿ ಮಾಡುವುದರಲ್ಲಿ ತಪ್ಪೇನಿಲ್ಲ. ಅವರು ಒಳ್ಳೆಯ ಕೆಲಸ ಮಾಡುತ್ತಾರೆ ಎಂಬ ವಿಶ್ವಾಸವಿದೆ. ಆದರೆ ಹಾರ್ದಿಕ್ ಅವರಿಗೆ ಸ್ವಲ್ಪ ಅನ್ಯಾಯವಾಗಿದೆ ಎಂದು ನನಗೆ ಅನಿಸುತ್ತದೆ ಎಂದು ಬಿಸಿಸಿಐ ಆಯ್ಕೆ ಸಮಿತಿ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.